ವರದಿ ; ಓರ್ವಿಲ್ಲ್ ಫರ್ನಾಂಡೀಸ್.
ಹಳಿಯಾಳ ; ಸೂಪಾ ಜಲಾಶಯದ ಹಿನ್ನೀರಿನ ಸಂಗ್ರಹ ಕಡಿಮೆಯಾಗುತ್ತಿರುವುದರಿಂದ ಈ ಹಿಂದೆ ನೀರಿನಲ್ಲಿ ಮುಳುಗಡೆಯಾಗಿದ್ದ ದೇವಸ್ಥಾನಗಳು, ವೀರಗಲ್ಲುಗಳು, ವಿಗ್ರಹಗಳು ಹಾಗೆ ಇತರ ಅವಶೇಷಗಳು ಗೋಚರಿಸುತ್ತಿದ್ದು, ತಕ್ಷಣ ಪುರಾತತ್ತ್ವ ಇಲಾಖೆಯವರು ಈ ಅವಶೇಷಗಳನ್ನು ಸಂರಕ್ಷಿಸಿ ಕಾಯ್ದಿಡಲು ಮುಂದಾಗಬೇಕು ಎಂದು ಶಾಸಕ ಆರ್.ವಿ.ದೇಶಪಾಂಡೆ ಆಗ್ರಹಿಸಿದ್ದಾರೆ.
ಶುಕ್ರವಾರ ಸಂಜೆ ಹಳಿಯಾಳದ ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು ಈ ಪುರಾತನ ಅವಶೇಷಗಳು ಹಾಗೂ ಐತಿಹಾಸಿಕ ಪಳೆಯುಳಿಕೆಗಳೊಂದಿಗೆ ಇಲ್ಲಿಯ ಜನರ ಭಾವನಾತ್ಮಕ ಸಂಬAಧವಿದ್ದು, ಈ ಅವಶೇಷಗಳನ್ನು ಈ ಭಾಗದಲ್ಲಿ ನೆಲೆಸಿದ ನಮ್ಮ ಪೂರ್ವಜರ ಗತವೈಭವಕಾಲದ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ನೆನಪಿಸುತ್ತವೆ. ಆದುದರಿಂದ ಪುರಾತತ್ವ ಇಲಾಖೆಯವರು ಈ ಅವಶೇಷಗಳ ಸಮೀಕ್ಷೆಯನ್ನು ನಡೆಸಿ ತಮ್ಮ ಸುರ್ಪದಿಯಲ್ಲಿ ಇಡಬೇಕು, ಅಥವಾ ಜೋಯಿಡಾದಲ್ಲಿರುವ ಜನೊದ ವಿಶ್ವವಿದ್ಯಾಲಯದ ವಿಸ್ತರಣಾ ಶಾಖೆಯಲ್ಲಿ ಈ ಅವಶೇಷಗಳನ್ನು ಸಂಗ್ರಹಿಸಿಡಬೇಕು. ಇದರಿಂದ ಮುಂಬರುವ ಪೀಳಿಗೆ ತಲೆಮಾರಿಗೆ ಇದೊಂದು ಅಧ್ಯಯನ ಅಥವಾ ಮಾಹಿತಿ ಕೇಂದ್ರವಾಗಬಲ್ಲದು ಎಂದು ಭವಿಷ್ಯ ನುಡಿದರು.
ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಜೋಯಿಡಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಈ ಪುರಾತನ ಅವಶೇಷಗಳ ಸಂಗ್ರಹವು ಆಕರ್ಷಣಿಯ ತಾಣವಾಗಬಹುದು ಎಂದರು
ಅದಕ್ಕಾಗಿ ಮಳೆ ಆರಂಭವಾಗುವ ಮುನ್ನ ಪುರಾತತ್ವ ಇಲಾಖೆಯವರು ಈ ಅವಶೇಷಗಳನ್ನು ಸಂರಕ್ಷಿಸಲು ಮುಂದಾಗಬೇಕು ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳಿಗೆ ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿಗಳಿಗೆ ಮತ್ತು ಪುರಾತತ್ತ್ವ ಇಲಾಖೆಗೆ ಹಾಗೂ ಕೆ.ಪಿ.ಸಿ ಬೆಂಗಳೂರು ಎಮ್.ಡಿ ಗೆ ಪತ್ರ ಬರೆದಿರುವುದಾಗಿ ಶಾಸಕ ದೇಶಪಾಂಡೆ ತಿಳಿಸಿದರು.
