ವಿಶೇಷ ವರದಿ ಸಂದೇಶ ದೇಸಾಯಿ
ಜೋಯಿಡಾ : ತಾಲೂಕಿನ ರಾಮನಗರ – ಅನಮೋಡ ರಸ್ತೆ ಕೆಲಸ ಪ್ರಾರಂಭವಾಗಿ 5 ವರ್ಷಗಳೇ ಕಳೆದರೂ ಕೆಲಸ ಮುಗಿಯದೇ ಹೊಂಡಮಯ ಮತ್ತು ರಸ್ತೆ ಹಾಳಾದ ಕಡೆ ಯಾವುದೇ ಬೋರ್ಡ್ ಹಾಕದೇ ಇರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು ಇದರಿಂದಾಗಿ ಈ ಭಾಗದ ಜನರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಸರಿಯಾಗಿ ಇದ್ದ ಗೋವಾ – ರಾಮನಗರ ರಾಷ್ಟ್ರೀಯ ಹೆದ್ದಾರಿಯನ್ನು ಅಗೆದು ಹೊಸ ರಸ್ತೆ ನಿರ್ಮಿಸುವುದಾಗಿ ಕೆಲಸ ಪ್ರಾರಂಭಿಸಿದ ಗುತ್ತಿಗೆ ಕಂಪನಿ ಅರ್ಧದಷ್ಟು ರಸ್ತೆ ಕೆಲಸ ಮುಗಿಸಿ ಕೆಲಸ ಬಿಟ್ಟಿರುವುದು ಇಲ್ಲಿನ ಜನರಿಗೆ ಸಮಸ್ಯೆ ಉಂಟಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಜೋಯಿಡಾ ತಹಶಿಲ್ದಾರರಿಗೆ ಇಲ್ಲಿನ ಸ್ಥಳೀಯರು ತಿಳಿಸಿ ಮನವಿ ಪತ್ರಗಳನ್ನು ನೀಡಿದ ನಂತರ ಲೋಕೋಪಯೋಗಿ ಇಲಾಏeಯಿಂದ ಹೊಂಡ ಮುಚ್ಚುವ ಕೆಲಸ ಆಯಿತಾದರೂ ಸರಿಯಾಗಿ ಕೆಲಸ ನಡೆದಿಲ್ಲ.ಈಗ ಮಳೆಗಾಲ ಪ್ರಾರಂಭವಾದ್ದರಿAದ ಇಲ್ಲಿನ ರಸ್ತೆಯಲ್ಲಿ ತಿರುಗಾಡುವುದೇ ಕಷ್ಟವಾಗಿದೆ. ರಸ್ತೆ ಎಲ್ಲಿ ಹಾಳಾಗಿದೆ ಎಂಬ ಬ್ಯಾರಿಕೆಟ್ ಗಳನ್ನು ಸಹಿತ ಇಲ್ಲಿ ಅಳವಡಿಸದೇ ಇರುವುದು ಅಪಘಾತಗಳು ಸಂಭವಿಸುವುದಕ್ಕೆ ಕಾರಣವಾಗಿದೆ.
ಶಾಲಾ ಮಕ್ಕಳಿಗೆ ಸಮಸ್ಯೆ –
ರಾಮನಗರ – ಗೋವಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೆಲಸ ಮುಗಿಯದೇ ಇರುವುದರಿಂದ ಇಲ್ಲಿನ ಶಾಲಾ ಕಾಲೇಜು ಮಕ್ಕಳಿಗೆ ತೀರಾ ತೊಂದರೆ ಉಂಟಾಗಿದೆ. ಈ ರಸ್ತೆಯಲ್ಲಿ ಸಾರಿಗೆ ವಾಹನಗಳು ಓಡಾಡಲು ಜಿಲ್ಲಾಡಳಿತದ ಅನುಮತಿ ಇಲ್ಲದ ಕಾರಣ ಶಾಲಾ ಮಕ್ಕಳು ಖಾಸಗಿ ವಾಹನದಲ್ಲಿ ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ಕೆಲಸ ಮುಗಿಸುವುದು ಯಾವಾಗ ?
ರಾಮನಗರದಿಂದ ತಿನೈಘಾಟ ವರಗೆ ಸಂಪೂರ್ಣ ರಸ್ತೆ ಕೆಲಸ ಮುಗಿದಿದ್ದು ,ತಿನೈಘಾಟ ದಿಂದ ಅನಮೋಡ ವರೆಗೆ ರಸ್ತೆ ಕೆಲಸ ಅಲ್ಲಲ್ಲಿ ಉಳಿದಿದ್ದು ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರು ಮನಸ್ಸು ಮಾಡಿದಲ್ಲಿ ಒಂದು ವಾರದೊಳಗೆ ಕೆಲಸ ಮಾಡಿ ಮುಗಿಸಬಹುದಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಸಿ ಕೂಡಲೇ ರಸ್ತೆ ಸರಿಪಡಿಸಿ ಇಲ್ಲಿನ ಹಳ್ಳಿ ಜನರಿಗೆ ಮತ್ತು ಶಾಲಾ ಕಾಲೇಜು ಮಕ್ಕಳಿಗೆ ಸಾರಿಗೆ ವಾಹನ ಓಡಾಡಲು ಅವಕಾಶ ಮಾಡಿಕೊಡಬೇಕಿದೆ.
ಭಾರವಾದ ವಾಹನಗಳ ಓಡಾಟ ನಿಷೇಧ.
ಈ ರಸ್ತೆಯಲ್ಲಿ ಭಾರವಾದ ವಾಹನಗಳ ಓಡಾಟಕ್ಕೆ ನಿಷೇಧ ಇದ್ದು ಇದರಿಂದಾಗಿ ಭಾರವಾದ ವಾಹನ ಸವಾರರು ತೀರಾ ತೊಂದರೆ ಅನುಭವಿಸುತ್ತಿದ್ದಾರೆ. ಗೋವಾ ಸಾಗಬೇಕಾದರೆ ಕಾರವಾರ ಮೂಲಕವೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಅನಮೋಡ ಮೂಲಕ ಗೋವಾಕೆ ಸಾಗುವುದು ಹತ್ತಿರದ ಮಾರ್ಗವಾಗಿದೆ.ರಸ್ತೆ ಕೆಲಸ ಸರಿಪಡಿಸಿದಲ್ಲಿ ಎಲ್ಲಾ ವಾಹನಗಳಿಗೂ ಮುಕ್ತ ಅವಕಾಶ ಸಿಗುವುದರ ಜೊತೆಗೆ ಇಲ್ಲಿನ ಸ್ಥಳೀಯ ವ್ಯಾಪಾರಿಗಳಿಗೂ ವ್ಯಾಪಾರ ವಹಿವಾಟು ಉತ್ತಮವಾಗುತ್ತದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ತಿನೈಘಾಟದಿಂದ ಅನಮೋಡ ವರೆಗೆ ರಸ್ತೆ ಅಲ್ಲಲ್ಲಿ ಹಾಳಾಗಿದ್ದು ಕೂಡಲೇ ಇದನ್ನು ಸರಿಪಡಿಸಬೇಕು.ಮಳೆಗಾಲದಲ್ಲಿ ಇಲ್ಲಿನ ಸ್ಥಳೀಯರಿಗೆ ಹಾಗೂ ಶಾಲಾ ಮಕ್ಕಳಿಗೂ ಸಮಸ್ಯೆ ಉಂಟಾಗುತ್ತಿದೆ. ರಸ್ತೆ ಕೆಲಸ ಮುಗಿಸಿ ಎಲ್ಲಾ ವಾಹನಗಳಿಗೂ ಈ ರಸ್ತೆಯಲ್ಲಿ ಓಡಾಡಲು ಅವಕಾಶ ಕಲ್ಪಿಸಬೇಕು.
ಗುರಪ್ಪ ಹಣಬರ –
ಗ್ರಾ.ಪಂ.ಸದಸ್ಯರು ಅಖೇತಿ.
