ಅಂಕೋಲಾ : ತಾಲೂಕಿನಾದ್ಯಂತ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಲ್ಲಿ ಅಂಕೋಲಾ ಹೆಸ್ಕಾಂ ಸಂಪೂರ್ಣ ವಿಫಲವಾಗಿದ್ದು, ಈ ಕುರಿತು ಇಲಾಖೆ ಅಧಿಕಾರಿಗಳೇ ಕಾರಣ ಎಂದು ಅಸೋಸಿಯೇಶನ್ ಆಫ್ ಇಂಜಿನಿಯರ್ ಉತ್ತರ ಕನ್ನಡ ಹಾಗೂ ನಾಗರಿಕ ವೇದಿಕೆ ಅಂಕೋಲಾ ಆರೋಪಿಸಿದೆ.

ಈ ಕುರಿತು ಜಿಲ್ಲಾಧ್ಯಕ್ಷ ಹರಿಹರ ಹರಿಕಾಂತ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸಮರ್ಪಕ ವಿದ್ಯುತ್ ವ್ಯವಸ್ಥೆಯ ಬಗ್ಗೆ ಜನಪ್ರತಿನಿಧಿಗಳು ಮಾತ್ರ ಈ ಬಗ್ಗೆ ಕಿಂಚಿತ್ತು ತಲೆಕೆಡೆಸಿಕೊಂಡತೆ ಕಂಡು ಬರುತ್ತಿಲ್ಲ. ಕಾರಣ ತಮ್ಮ ಮನೆಗಳಲ್ಲಿ ಇನ್ವರ್ಟರ್, ಸೋಲಾರ್‌ಗಳನ್ನು ಅಳವಡಿಸಿಕೊಂಡು ನಿರಾತಂಕವಾಗಿದ್ದಾರೆ.
ಈ ಕುರಿತು ಅನೇಕ ಬಾರಿ ಹೆಸ್ಕಾಂ ಎಂ.ಡಿ.ಯಿಂದ ಹಿಡಿದು ಎಲ್ಲ ಹಿರಿಯ ಅಧಿಕಾರಿಗಳಿಗೆ ಈ ಕುರಿತು ದೂರು ನೀಡಲಾಗಿತ್ತು. ಅಲ್ಲದೇ ವಿದ್ಯುತ್ ಅಡಚಣೆಯ ಕಾರಣ ಕೂಡ ನೀಡಲಾಗಿತ್ತು. ಆದರೆ ಹಿರಿಯ ಅಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿಗಿಂತ ವೈಯಕ್ತಿಕ ಪ್ರತಿಷ್ಠೆಯೇ ಹೆಚ್ಚು ಎಂಬುದನ್ನು ಸಾಬೀತು ಮಾಡಲು ಹೊರಟಂತಿದೆ.

ಇಂತಹ ಅಡಚಣೆಗೆ ಅಂಕೋಲಾ ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೆ ಕಾರಣ. ಇದು ಇಂದಿನ ಸಮಸ್ಯೆಯಲ್ಲ, ಗ್ರಾಮೀಣ ಪ್ರದೇಶದಲ್ಲಂತೂ ಕನಿಷ್ಠ ಒಂದು ದಿನವು ಕೂಡ ನಿರಾತಂಕವಾಗಿ ವಿದ್ಯುತ್ ಪೂರೈಕೆಯನ್ನು ಸರಬರಾಜು ಮಾಡುತ್ತಿಲ್ಲ. ಕಾರಣ ಇಂತಹ ಕರ್ತವ್ಯ ಲೋಪ, ನಿರ್ಲಕ್ಷ್ಯ ದ ಅಧಿಕಾರಿಗಳನ್ನು ತಕ್ಷಣ ಎಚ್ಚರಿಸಿ, ಅವರನ್ನು ಈ ತಾಲೂಕಿನಿಂದ ವರ್ಗಾಯಿಸಿ ನಿಷ್ಠಾವಂತ ಅಧಿಕಾರಿಗಳನ್ನು ನೇಮಕ ಮಾಡಿ ಸಾರ್ವಜನಿಕರಿಗೆ ವಿದ್ಯುತ್ ಯಾವುದೇ ಅಡಚಣೆ ಇಲ್ಲದೇ ಪೂರೈಕೆಯಾಗುವಂತೆ ತಾವು ಸೂಕ್ತ ಕ್ರಮ ಕೈಗೊಳ್ಳಬೇಕಲು ಎಂದು ಒತ್ತಾಯಿಸಿದರು.