ವಿಶೇಷ ವರದಿ : ಸಂದೇಶ ದೇಸಾಯಿ
ಜೋಯಿಡಾ : ತಾಲೂಕಿನ ರಾಮನಗರದ ನಿಲ್ದಾಣದಲ್ಲಿ ಶಾಲಾ ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಏಕಾಏಕಿ ಚಾಲಕ ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಘಟನೆ ಆತಂಕವನ್ನು ಉಂಟು ಮಾಡಿದ್ದು, ತಾಲೂಕಿನಲ್ಲಿ ಆಡಳಿತ ವ್ಯವಸ್ಥೆಯ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ.
ರಾಮನಗರದಲ್ಲಿ ಸಾರಿಗೆ ಬಸಗಳಲ್ಲಿ ಶಾಲಾ ಕಾಲೇಜು ಮಕ್ಕಳನ್ನು ಹತ್ತಿಸಿಕೊಳ್ಳದೇ ಇರುವುದರಿಂದ ಮಕ್ಕಳಿಗೆ ಶಾಲೆ ಬಿಟ್ಟ ನಂತರ ಮನೆ ಸೇರುವುದೇ ಕಷ್ಟವಾಗಿ ಪರಿಗಣಿಸಿದೆ.
ಜೋಯಿಡಾ ತಾಲೂಕಿನಾಧ್ಯಂತ ಮೊದಲೇ ಸಾರಿಗೆ ಬಸ್‌ಗಳು ಓಡಾಡುವುದು ಕಡಿಮೆ. ಅದರಲ್ಲೂ ಸಮಯಕ್ಕೆ ಸರಿಯಾಗಿ ಯಾವ ಹಳ್ಳಿಗಳಿಗೂ ಬಸ್‌ಗಳು ಸಾಗುವುದಿಲ್ಲ. ಅಂತಹ ವಿಷಮ ಪರಿಸ್ಥಿತಿಯಲ್ಲಿ ಬರುವ ಬಸ್‌ಗಳು ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳದೇ, ಮಕ್ಕಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.
ರಾಮನಗರ ಬಸ್ ನಿಲ್ದಾಣಕ್ಕೆ ಬರುವ ಬೆಳಗಾವಿ – ದಾಂಡೇಲಿ ಬಸ್ ಹಾಗೂ ಸೇರಿದಂತೆ ಇನ್ನೂ ಕೆಲವು ಬಸ್‌ಗಳು ರಾಮನಗರ ಬಸ್ ನಿಲ್ದಾಣದಲ್ಲಿ ನಿಂತರು ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳುತ್ತಿಲ್ಲ. ಶಾಲಾ ವಿದ್ಯಾರ್ಥಿಗಳು ಪಾಸ್ ತೆಗೆದುಕೊಂಡು ಬರುವ ಕಾರಣಕ್ಕೆ, ಸಂಸ್ಥೆಗೆ ಆದಾಯ ಬರುತ್ತಿಲ್ಲ ಎಂಬುದು ಕೆ.ಎಸ್.ಆರ್.ಟಿ.ಸಿಯವರ ಗೋಳಾಗಿದೆ. ಮಕ್ಕಳ ಭವಿಷ್ಯ ನೀರು ಪಾಲಾದರು ಇವರಿಗೇನು ಚಿಂತೆಯಿಲ್ಲ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬಂದಿದೆ.

ಜೋಯಿಡಾ ತಾಲೂಕು ಹಳ್ಳಿ ಮತ್ತು ದಟ್ಟವಾದ ಕಾಡಿನಿಂದ ಕೂಡಿದ ಪ್ರದೇಶವಾಗಿದೆ. ಇಲ್ಲಿ ಶಾಲೆಗೆ ಬರುವ ಮಕ್ಕಳು ಹತ್ತಾರು ಕಿಮೀ ನಡೆದೆ ಶಾಲಾ ಕಾಲೇಜಿಗೆ ಬರಬೇಕು. ಅಂತದ್ದರಲ್ಲಿ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳು ಮತ್ತು ಚಾಲಕ ನಿರ್ವಾಹಕರು ಶಾಲಾ ಮಕ್ಕಳನ್ನು ಬಸ್‌ನೊಳಗೆ ಹತ್ತಿಸಿಕೊಳ್ಳದೆ ದರ್ಪ ತೋರುತ್ತಿರುವುದು ಬೇಸರದ ಸಂಗತಿಯಾಗಿದೆ.

ಜೋಯಿಡಾ ತಾಲೂಕು ಸಮಸ್ಯೆಗಳಿಂದಲೇ ಕೂಡಿದ ತಾಲೂಕಾಗಿದ್ದು, ಅದರಲ್ಲೂ ರಾಮನಗರ ಭಾಗದಲ್ಲಿ ರಸ್ತೆಗಳು ಸರಿಯಿಲ್ಲದ ಕಾರಣ ನಡೆದುಕೊಂಡೆ ಹೋಗುವ ಪರಿಸ್ಥಿತಿ ಕೆಲ ವಿದ್ಯಾರ್ಥಿಗಳದ್ದಾಗಿದೆ, ಈ ಬಗ್ಗೆ ತಾಲೂಕಿನ ಅಧಿಕಾರಿಗಳು, ಶಾಸಕರು ಗಮನ ಹರಿಸಿ ಎಲ್ಲಾ ಸರ್ಕಾರಿ ಬಸ್‌ಗಳಲ್ಲಿಯು ಮಕ್ಕಳಿಗೆ ಅವಕಾಶ ನೀಡಬೇಕಾಗಿರುವುದು ಅನಿರ್ವಾಯ ಮತ್ತು ಅವಶ್ಯಕವಾಗಿದೆ.

ಶಾಲಾ ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ ಬಸನ್ನು ಚಲಾಯಿಸಲಾಗುತ್ತಿದೆ. ಏನಾದರು ಅನಾಹುತವಾದರೆ ಯಾರು ಹೊಣೆ. ಎಲ್ಲಾ ಸರ್ಕಾರಿ ಬಸ್ಸಗಳಲ್ಲಿ ಶಾಲಾ ಮಕ್ಕಳಿಗೆ ಅವಕಾಶ ಸಿಗಬೇಕು. ಈ ಬಗ್ಗೆ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು.
ರಾಮ್ ದೇಸಾಯಿ.ರಾಮನಗರ
ಸ್ಥಳೀಯ.

ಶಾಲಾ ಮಕ್ಕಳನ್ನು ಬಸ್ ಹತ್ತಿಸಿಕೊಳ್ಳದೇ ಇರುವುದು ತೀರಾ ತಪ್ಪು, ಈ ಬಗ್ಗೆ ಕೂಡಲೇ ಎಚ್ಚರವಹಿಸಿ ಜೋಯಿಡಾ ರಾಮನಗರ ಭಾಗದಲ್ಲಿ ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ.
ಕೆ.ಎಸ್.ರಾಥೋಡ
ಡಿಪೋ ಮೆನೇಜರ್ ದಾಂಡೇಲಿ.

ಈ ಬಗ್ಗೆ ಕೂಡಲೇ ಗಮನ ಹರಿಸಿ ಶಾಲಾ ಮಕ್ಕಳಿಗೆ ಯಾವುದೇ ಸಮಸ್ಯೆ ಆಗದಂತೆ ಹಾಗೂ ಕೆ.ಎಸ್.ಆರ್.ಟಿ.ಸಿ ಯವರಿಗೆ ಗಮನ ಹರಿಸಿ ವಾಹನ ಚಲಾವಣೆ ಮಾಡುವಂತೆ ಸೂಚನೆ ನೀಡುತ್ತೇನೆ.
ಸಂಜಯ ಕಾಂಬಳೆ – ತಹಶಿಲ್ದಾರರ ಜೋಯಿಡಾ.