*ರಾಘು ಕಾಕರಮಠ್.
ಅಂಕೋಲಾ : ತಾಲೂಕಿನ ಕ್ರೀಯಾಶೀಲ ಪೋಟೋಗ್ರಾಫರ್ ಆದ ಶ್ರೀ ಸ್ಟುಡಿಯೋದ ಮಾಲಕ ಶ್ರೀನಿವಾಸ ರಾಮನಾಥಕರ ಹಾಗೂ ದೇವಿ ಸ್ಟುಡಿಯೋದ ಮಾಲಕ ಪ್ರಶಾಂತ ಸಿ. ನಾಯ್ಕ ಅವರಿಗೆ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದಿಂದ ಕೊಡಮಾಡುವ ಪ್ರತಿಷ್ಠಿತ “ಪೋಟೊಗ್ರಾಫಿ ಎಕ್ಸಲೆನ್ಸಿ ಅವಾರ್ಡ” -2022 ನ್ನು ಪ್ರಧಾನ ಮಾಡಲಾಯಿತು.

ಬೆಂಗಳೂರಿನಲ್ಲಿ ನಡೆದ ಡಿಜಿ ಇಮೇಜ್ -2022 ರ ರಾಷ್ಟ್ರ ಮಟ್ಟದ ವಸ್ತು ಪ್ರದರ್ಶನದಲ್ಲಿ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ಎಸ್. ಪರಮೇಶ ಹಾಗೂ ಕಾರ್ಯದರ್ಶಿ ಎ.ಎಮ್. ಮುರಳಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು.
ಸೃಜನಶೀಲ ಪೋಟೋಗ್ರಾಫರ್ ಶ್ರೀ :
ಕಳೆದ 3 ದಶಕದ ಹೆಚ್ಚು ಕಾಲದಿಂದ ಪೋಟೊಗ್ರಾಫಿ ಕ್ಷೇತ್ರದಲ್ಲಿ ಅಗ್ರಗಣ್ಯ ಕೊಡುಗೆ ನೀಡುತ್ತಿರುವ ಶ್ರೀನಿವಾಸ ರಾಮನಾಥಕರ ಅವರು ಸೃಜನಶೀಲ ಪೋಟೋಗ್ರಾಫರ್ ಆಗಿ ಅಂಕೋಲೆಯಲ್ಲಿ ಅಷ್ಟೇ ಅಲ್ಲ ಜಿಲ್ಲೆಯ ಉತ್ತಮ ಫೋಟೊಗ್ರಾಫರ್‍ಗಳಲ್ಲಿ ಒಬ್ಬರಾಗಿದ್ದಾರೆ.
ತಮ್ಮ ಗೆಳೆಯರ ಬಳಗದಲ್ಲಿ ಶ್ರೀ ಎಂದೇ ಚಿರಪರಿಚಿತರಾದ ಇವರು ಪೋಟೊಗ್ರಾಫರ್ ಸಂಘದ ತಾಲೂಕಾ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿ, ಸಂಘದ ಏಳ್ಗೆಗೆ ಹಾಗೂ ಛಾಯಾಚಿತ್ರಗ್ರಾಹಕರ ಶ್ರೇಯೋಭಿವೃಧ್ದಿಗೆ ದುಡಿದವರಾಗಿದ್ದಾರೆ. ನಗು ಮೊಗದಿಂದ ಎಲ್ಲ ಗೌರವಿಸಿ, ಆತ್ಮೀಯತೆಯಿಂದ ಕಾಣುವ, ಅಪರೂಪದ ವ್ಯಕ್ತಿತ್ವದ ಶ್ರೀನಿವಾಸ ರಾಮನಾಥಕರ ಅವರ ಕ್ರೀಯಾಶೀಲತೆಯನ್ನು ಗಮನಿಸಿದ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದಿಂದ “ಪೋಟೊಗ್ರಾಫಿ ಎಕ್ಸಲೆನ್ಸಿ ಅವಾರ್ಡ” -2022 ಭಾಜನವಾಗಿರುವದು ಅವರ ಆಪ್ತ ವಲಯದಲ್ಲಿ ಹರ್ಷಕ್ಕೆ ಕಾರಣವಾಗಿದೆ.
ಪ್ರಶಾಂತ ನಾಯ್ಕ :
ತನ್ನ ಸೌಮ್ಯ ಸ್ವಭಾವದ ಮೂಲಕ, ಪೋಟೋಗ್ರಫಿ ಕ್ಷೇತ್ರದಲ್ಲಿ ಉನ್ನತ ಕೊಡುಗೆ ನೀಡಿರುವ ಪ್ರಶಾಂತ ನಾಯ್ಕ ಅವರು ಮೂಲತ: ಕಾರವಾರ ತಾಲೂಕಿನ ತೋಡೂರಿನವರು. ಅಂಕೋಲಾದ ಮುಖ್ಯ ರಸ್ತೆಯಲ್ಲಿ ಕಳೆದ 15 ವರ್ಷದಿಂದ ದೇವಿ ಪೋಟೊ ಸ್ಟುಡಿಯೋವನ್ನು ಆರಂಭಿಸಿ ಜನಮೆಚ್ಚುಗೆಯ ಪೋಟೋಗ್ರಾಫರ್ ಆಗಿ ಪ್ರಶಾಂತ ಗುರುತಿಸಿಕೊಂಡಿದ್ದಾರೆ. ಸೃಜನಶೀಲರಾಗಿರುವ ಪ್ರಶಾಂತ ಅವರು ಪೋಟೊಗ್ರಾಫರ್ ವೃತ್ತಿಯ ಜೊತೆಗೆ ಡಿಜಿಟಲ್ ಪ್ರಿಂಟ್, ಡಿಟಿಪಿ ಹೀಗೆ ಮುಂತಾದ ಪ್ರವೃತ್ತಿಯನ್ನು ರೂಢಿಸಿಕೊಂಡು ಹೆಮ್ಮೆಗೆ ಪಾತ್ರರಾಗಿದ್ದಾರೆ.
ತೋಡೂರಿನ ಶ್ರೀ ಸಣ್ಣಮ್ಮ ದೇವಿ ಯುವಕ ಮಂಡಳದ ಕ್ರೀಯಾಶೀಲ ಪ್ರತಿನಿಧಿಯಾಗಿರುವ ಪ್ರಶಾಂತ ಅವರು ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆದರ್ಶಪ್ರಾಯರಾಗಿದ್ದಾರೆ.
ಅಂಕೋಲಾದ ಕ್ರೀಯಾಶೀಲ ಪೋಟೋಗ್ರಾಫರ್ ಆದ ಶ್ರೀನಿವಾಸ ಹಾಗೂ ಪ್ರಶಾಂತ ಅವರಿಗೆ “ಪೋಟೋಗ್ರಾಫಿ ಎಕ್ಸಲೆನ್ಸಿ ಅವಾರ್ಡ” ದೊರೆತಿರುವದು ಸಾಧನೆಗೆ ಸಂದ ಗೌರವಾಗಿದೆ ಎಂದು ಛಾಯಾಚಿತ್ರಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಹರೀಶ ಪಾಂಡುರಂಗ ನೇರಳಕಟ್ಟೆ ತಿಳಿಸಿದ್ದಾರೆ.

https://chat.whatsapp.com/HyQE3CIKWEICSXQCoirwQE
