ಕಾರವಾರ: ಕಾಮಗಾರಿಗಳನ್ನು ಕೆ.ಆರ್.ಐ.ಡಿ.ಎಲ್ ಗೆ ಗುತ್ತಿಗೆ ನೀಡಲು ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದು ಮಾಡುವಂತೆ ಆಗ್ರಹಿಸಿ ನೊಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿರುವ ಪದಾಧಿಕಾರಿಗಳು, 15 ದಿನಗಳಲ್ಲಿ ಈ ಆದೇಶ ರದ್ದುಪಡಿಸದಿದ್ದಲ್ಲಿ ಕಾರವಾರ ಅಂಕೋಲಾ ವಿಧಾನ ಸಭಾ ಕ್ಷೇತ್ರದ ಶಾಸಕರ ಕಚೇರಿಯ ಎದುರು ಸರಣಿ ಧರಣಿ ನಡೆಸುವುದಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಈ ವೇಳೆ ಜಿಲ್ಲಾ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ, ಕಾರವಾರ ತಾಲೂಕಾ ನೋಂದಾಯಿತ ಸಿವಿಲ್ ಗುತ್ತಿಗೆದಾರರ ಅಧ್ಯಕ್ಷ ಮಾಧವ ನಾಯಕ, ಗುತ್ತಿಗೆದಾರರಿಗೆ ಪ್ಯಾಕೇಜ್ ಗುತ್ತಿಗೆ ದೊಡ್ಡ ಹೊಡೆತ ಕೊಟ್ಟಿದೆ. ಇದರ ವಿರುದ್ಧ ಸಂಘದಿಂದ ಪ್ರತಿಭಟನೆ ನಡೆಸಿದ ಬಳಿಕ ಕೆಲವು ಕಾಮಗಾರಿಗಳ ಪ್ಯಾಕೇಜ್ ಗುತ್ತಿಗೆಯನ್ನು ರದ್ದು ಮಾಡಿ ಪುನಃ ಟೆಂಡರ್ ಕರೆದಿದ್ದಾರೆ. ಇನ್ನು ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯ ಮಾಡಿ, ಕೆಆರ್ಐಡಿಎಲ್ ಗೆ ಕಾಮಗಾರಿಗಳ ಗುತ್ತಿಗೆ ನೀಡಲಾಗುತ್ತಿದೆ. ಆ ಸಂಸ್ಥೆಗೆ ಗುತ್ತಿಗೆ ಕೊಡಲು ನಮ್ಮದೇನು ಅಭ್ಯಂತರವಿಲ್ಲ. ಆದರೆ ಬಂದ ಎಲ್ಲಾ ಕಾಮಗಾರಿಗಳನ್ನು ಕೆ. ಆರ್. ಐ. ಡಿ. ಎಲ್. ಗೆ ನೀಡಿ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯ ಮಾಡಬಾರದು. ಕೆಆರ್ಐಡಿಎಲ್ ನಲ್ಲಿ ಅವಶ್ಯಕ ಸಿಬ್ಬಂದಿ, ಯಂತ್ರೋಪಕರಣಗಳೇ ಇಲ್ಲ ಎಂಬುದನ್ನು ಗಮನಕ್ಕೆ ತಂದರು.
ರಾಜ್ಯದ ವಿವಿಧೇಡೆ ಪ್ಯಾಕೇಜ್ ಗುತ್ತಿಗೆ ಸಂಪ್ರದಾಯವಿದ್ದ ಕಾರಣ ನಮ್ಮ ಗುತ್ತಿಗೆದಾರರು ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ನಮ್ಮ ಪರವಾಗಿಯೇ ಆದೇಶ ನೀಡಿತ್ತು. ಹೀಗಾಗಿ ಕೊನೆಗೆ 100 ಲಕ್ಷಕ್ಕಿಂತ ಹೆಚ್ಚಿನ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಬಾರದೆಂದು ಸರ್ಕಾರದಿಂದಲೂ ಆದೇಶ ಮಾಡಲಾಗಿದೆ. ಆದರೂ ಆದೇಶದ ಉಲ್ಲಂಘನೆ ಆಗುತ್ತಿದೆ ಎಂದು ತಿಳಿಸಿದರು. ಇದರ ಜೊತೆಗೆ, ಕೆಆರ್ಐಡಿಎಲ್ ಗೆ ಕಾಮಗಾರಿಗಳನ್ನು ನೀಡದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ಮನವಿಯನ್ನೂ ಮಾಡಿದ್ದೆವು. ಅದನಂತರವೂ ಇನ್ನೂ ಹೆಚ್ಚಿನ ಕೆಲಸಗಳನ್ನು ಆ ಸಂಸ್ಥೆಗೆ ನೀಡಲಾಗಿದೆ. ಇದಕ್ಕೆ ಸ್ಥಳೀಯ ಶಾಸಕರೇ ಶಿಫಾರಸು ಪತ್ರ ನೀಡಿದ್ದಾರೆ. ಹೀಗಾಗಿ ಸರ್ಕಾರದಿಂದಲೇ ಇದಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದ್ದು, ಈ ಆದೇಶ ರದ್ದು ಮಾಡಬೇಕು ಎಂದು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಯವರಿಗೆ ಒತ್ತಾಯಿಸಿದರು
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/HyQE3CIKWEICSXQCoirwQE
