ಹೊನ್ಗುಡಿ ಬೀಚ್ ಗೆ ಅಭಿವೃದ್ಧಿಯ ಹೊನ್ನಕಲಶವಿಡಲು ‘ಸು’ದ್ವಯರ ಜಂಟಿ ಇಂಗಿತ
ರಾಘು ಕಾಕರಮಠ.
ಕಾರವಾರ: ಅಪಾರ ನೈಸರ್ಗಿಕ ಸೌಂದರ್ಯದ ಶ್ರೀಮಂತಿಕೆಯಿಂದ ಕಂಗೊಳಿಸುತ್ತಿರುವ ಅಂಕೋಲಾದ ವಿವಿಧ ಬೀಚ್ ಗಳ ಮೇಲೆ ಸ್ಯಾಂಡಲ್ ವುಡ್, ಬಾಲಿವುಡ್ ಚಿತ್ರ ನಟರ ಕಣ್ಣು ಬಿದ್ದಿದೆ. ಹಿಂದಿ ಚಿತ್ರ ನಟ ಸುನೀಲ ಶೆಟ್ಟಿ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ ಅವರು ನದಿಭಾಗದ ಬೀಚ್ ನ ಪ್ರದೇಶಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಅಭಿವೃದ್ಧಿಪಡಿಸಲು ಉತ್ಸುಕತೆ ಪ್ರದರ್ಶಿಸಿದ್ದಾರೆ.
ಅನೇಕ ಸಿನಿಮಾಗಳಲ್ಲಿ ಹೊನ್ಗುಡಿ
ಹತ್ತಾರು ಕನಸುಗಳನ್ನು ಹುಟ್ಟು ಹಾಕುವ ಹೊನ್ಗುಡಿ ಬೀಚ್ ಪ್ರವಾಸಿಗರ ಪಾಲಿಗೆ ಸುಂದರ ತಾಣ. ಇಲ್ಲಿ ಹಲವಾರು ಸಿನೆಮಾಗಳ ಚಿತ್ರೀಕರಣ ಮಾಡಲಾಗಿದ್ದು, ರಾಜ್ಯದಲ್ಲಿ ಗುರುತಿಸಿಕೊಂಡಿದೆ. ಇಂತಹ ಮನಮೋಹಕ ಬೀಚ್ ನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮದ ದೃಷ್ಟಿಯಿಂದ ಖಾಸಗಿಯಾಗಿ ಅಭಿವೃದ್ಧಿಪಡಿಸಿದರೆ ಬೀಚ್ ನ ಸೌಂದರ್ಯವನ್ನು ಹೆಚ್ಚಿಸುವ ಜೊತೆಗೆ ತಮ್ಮ ಉದ್ಯಮವನ್ನು ಗಟ್ಟಿಗೊಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದೊಂದಿಗೆ ಚಿತ್ರ ನಟರಾದ ಸುನೀಲ ಶೆಟ್ಟಿ ಹಾಗೂ ಸುದೀಪ ಅವರು ಹೂಡಿಕೆ ಮಾಡಲು ಮನಸ್ಸು ಮಾಡಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

*ಎರಡು ಸುತ್ತಿನ ಮಾತುಕತೆ*:
ಕಳೆದ 8 ವರ್ಷದ ಹಿಂದೆ ಮಂಗಳೂರಿನ ಉದ್ಯಮಿಯೊಬ್ಬರು ಈ ಬೀಚ ನ್ನು ಖಾಸಗಿಯಾಗಿ ಅಭಿವೃದ್ಧಿಪಡಿಸಲು ಮುಂದಾಗಿದ್ದರು. ಬೀಚ್ ನ ಸುತ್ತಮುತ್ತವಿರುವ 23 ಎಕರೆ ಪ್ರದೇಶದ ಖಾಸಗಿ ಆಸ್ತಿಯ ಮಾಲಕರಿಗೆ ಜಮೀನು ನೀಡುವಂತೆ ಮನವೊಲಿಸಲು ಮೂರನೆ ವ್ಯಕ್ತಿಗಳಿಂದ ಪ್ರಯತ್ನಿಸಿದ್ದರು. ಆಗ ಅದು ಫಲಪ್ರದವಾಗಿರಲಿಲ್ಲ ಎನ್ನಲಾಗಿದೆ. ನಂತರ ನಟ ಸುದೀಪ ಹಾಗೂ ಸುನೀಲ ಶೆಟ್ಟಿ ಅವರು ತಾವು ಗಳಿಸಿದ ಹಣವನ್ನು ಪ್ರವಾಸೋದ್ಯಮದ ಮೇಲೆ ಹೂಡಿಕೆ ಮಾಡಲು ಸ್ಥಳ ಹುಡುಕುತ್ತಿರುವಾಗಲೆ, ನದಿಬಾಗದ ಹೊನ್ಗುಡಿ ಬೀಚ್ ನ ಸೌಂದರ್ಯ ರಾಶಿ ಇವರ ಮನಸನ್ನು ಕದ್ದಿದೆ ಎಂದು ತಿಳಿದುಬಂದಿದೆ.
ಬೀಚ ನ ಸುತ್ತಮುತ್ತ ಇರುವ ಖಾಸಗಿ ವ್ಯಕ್ತಿಗಳ ಜಮೀನುಗಳನ್ನು ಖರೀದಿಸಲು ಮೂರನೇ ವ್ಯಕ್ತಿಗಳಿಂದ ಎರಡು ಸುತ್ತಿನ ಮಾತುಕತೆಯು ಮುಗಿದಿದೆ. ಎಲ್ಲಿಯೂ ನೇರವಾಗಿ ಕಾಣಿಸಿಕೊಳ್ಳದ ಈ ಸೆಲೆಬ್ರೆಟಿಗಳು, ಸೈಲೆಂಟಾಗಿ ವ್ಯವಹಾರ ಮುಗಿಸಲು ಎಲ್ಲ ತಂತ್ರಗಳನ್ನು ಹಣೆದಿದ್ದಾರೆ ಎಂದು ಗೊತ್ತಾಗಿದೆ.
ಅಂಕೋಲಾ ತಾಲೂಕು ಕೇಂದ್ರದಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಹೊನ್ಗುಡಿ ಬೀಚ್ ಸುಂದರ ಕಡಲ ಕಿನಾರೆಗಳಲ್ಲೊಂದು. ಬೊಬ್ರುವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜರೆಯಾಗಿರುವ ನದಿಭಾಗಕ್ಕೆ ಹೊನ್ಗುಡಿ ಹೊಂದಿಕೊಂಡಿದೆ. ಈ ಕಡಲ ತಟಕ್ಕೆ ಸಾಗುವ ರಸ್ತೆಯುದ್ದಕ್ಕೂ ಗದ್ದೆಗಳು, ಬಾಗಿ ಬಳುಕುವ ಮರಗಳು, ಸದಾ ಚಟುವಟಿಕೆಯಲ್ಲಿರುವ ಮೀನುಗಾರಿಕೆ, ಹೆಬ್ಬಂಡೆಗಳು ಇವುಗಳ ಸೌಂದರ್ಯವನ್ನು ಸವಿಯುತ್ತಾ ಸಾಗುವುದೇ ರೋಮಾಂಚಕ ಅನುಭವ. ಇವನ್ನೆಲ್ಲದಾಟಿ ಮುಂದೆ ಹೋದಾಗ ಎದುರಾಗುವುದೇ ಹೊನ್ಗುಡಿ ಬೀಚ್.

ರಾಧಿಕಾ ಪಂಡಿತ ಹಾಗೂ ಯಶ್ ಅಭಿನಯದ ಮೊಗ್ಗಿನ ಮನಸ್ಸು ಚಿತ್ರ ಇಲ್ಲಿನ ಬೀಚ್ ಲ್ಲೆ ಚಿತ್ರೀಕರಣಗೊಂಡಿತ್ತು. ಹೊನ್ಗುಡಿ ಬೀಚ್ ಪ್ರವಾಸಿಗರ ಪಾಲಿಗೆ ಸುಂದರ ತಾಣ. ಇಲ್ಲಿ ಹಲವಾರು ಸಿನೆಮಾಗಳ ಚಿತ್ರೀಕರಣ ಮಾಡಲಾಗಿದ್ದು, ರಾಜ್ಯದಲ್ಲಿಯೆ ಗುರುತಿಸಿಕೊಂಡಿದೆ. ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ 200 ಕ್ಕೂ ಹೆಚ್ಚಿನ ಕುಬ್ಜ ಕಲಾವಿದರನ್ನು ಹೊಂದಿದ್ದ ‘ಅದ್ಭುತ ದ್ವೀಪಂ’ ಸಿನೆಮಾದ ಹಲವಾರು ದೃಶ್ಯಗಳು ಇಲ್ಲಿಯೇ ಚಿತ್ರೀಕರಣಗೊಂಡಿದ್ದವು.
ಸಂಜೆ ಕೆಂಪೇರುವ ಬಾನು
ಸಂಜೆಯಾಗುತ್ತಿದ್ದಂತೆ ಕೆಂಪೇರುವ ಬಾನಿನಿಂದಾಗಿ ಸುತ್ತ ಮುತ್ತಲಿನ ಪರಿಸರವೂ ಹೊನ್ನಿನಂತೆ ಆವಿರ್ಭವಿಸುವ ವಿಶಿಷ್ಟ ಅನುಭವ ಇಲ್ಲಿ ಉಂಟಾಗುತ್ತದೆ. ಹೀಗಾಗಿ ಹೊನ್ನ ಮಂಟಪದಂತಾಗುವ ಹೊನ್ಗುಡಿ ಕಡಲತೀರದ ಸೌಂದರ್ಯ ಶ್ರೀಮಂತಿಕೆಯನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸತೊಡಗಿದೆ. ಪ್ರವಾಸಿಗರು ಯಾವ ಅಂಜಿಕೆ, ಅಳುಕಿಲ್ಲದೇ ಹೊನ್ಗುಡಿ ಬೀಚ್ ನ ಸೌಂದರ್ಯ ಸವಿದು ಸಂತಸದಿಂದ ಸಾಗುವಂತಾಗಿದೆ.
ಕಾರವಾರ ಟೈಮ್ಸ್ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…