ಶಿರಸಿ:- ನಗರಸಭೆಯಿಂದ ಕುಡಿಯುವ ನೀರು ಒದಗಿಸುವಲ್ಲಿ  ಹೆಸ್ಕಾಂ ನಿರ್ಲಕ್ಷತನ ತೋರಿದ ಬಗ್ಗೆ ಗರಂಗೊಂಡ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮುಂದೆ ಹಾಗಾಗದ ರೀತಿಯಲ್ಲಿ ಕುಡಿಯುವ ನೀರು ಒದಗಿಸುವ  ಮಾರಿಗದ್ದೆ ಪಂಪಿಗೆ ನಿರಂತರವಾಗಿ ವಿದ್ಯುತ್ ನೀಡಬೇಕೆಂದು ಹೆಸ್ಕಾಂಗೆ ತಾಕೀತು ಮಾಡಿದರು.ಅವರು ಮಿನಿವಿಧಾನ ಸೌಧದಲ್ಲಿ ನಡೆಸಿದ ಪ್ರಕೃತಿ ವಿಕೋಪ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.  

ನಗರಸಭೆ ಅಧ್ಯಕ್ಷ  ಮಾತನಾಡುತ್ತ ವಿದ್ಯುತ್ ಅಭಾವದಿಂದಾಗಿ ನಮಗೆ ಮಳೆಗಾಲದಲ್ಲಿಯೂ ಜನರಿಗೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದಾಗ ಕೋಪಗೊಂಡ ಕಾಗೇರಿಯವರು ಹೆಸ್ಕಾಂ ಅಧಿಕಾರಿಯನ್ನು ಪ್ರಶ್ನಿಸಿದರು‌. ಆಗ ಅವರು ಮಳೆ ಗಾಳಿಗೆ ಮರದ ಕೊಂಬೆಗಳು ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದು ಸಮಸ್ಯೆಯಾಗುತ್ತಿದೆ ಎಂದು ಉತ್ತರ ನೀಡಿದರು.ಇದರಿಂದ ಇನ್ನಷ್ಟು ಸಿಡಿಮಿಡಿಗೊಂಡ ಕಾಗೇರಿಯವರು ಹಾಗಾದರೆ ವಿದ್ಯುತ್ ತಂತಿ ಮೇಲೆ ಬರುವ ಮರದ ಕೊಂಬೆಗಳನ್ನು ಏಕೆ ಕಡಿಸಲಿಲ್ಲವೆಂದು ಮರು ಪ್ರಶ್ನಿಸಿದರು.ಆಗ ಪೇಚಿಗೆ ಸಿಲುಕಿ ಹಾಕಿ ಕೊಂಡವರಂತೆ ಕಂಡ ಹೆಸ್ಕಾಂ ಅಧಿಕಾರಿಗಳು ಮುಂದೆ ಹೀಗಾಗದಂತೆ ನೋಡಿಕೊಳ್ಳುವದಾಗಿ ತಿಳಿಸಿದರು. ಮಳೆ ನೀರಿನ ರಭಸಕ್ಕೆ ಬಾಂದಾರ್ ಮತ್ತು ಸೇತುವೆಗಳಲ್ಲಿ ಮರದ ದಿಮ್ಮೆಗಳು ಸಿಲುಕಿಕೊಂಡು ಹಾಳಾಗುತ್ತಿವೆ. ಅರಣ್ಯ ಇಲಾಖೆಯವರು ನೀರಾವರಿ ಇಲಾಖೆಯ ಸಹಯೋಗದಲ್ಲಿ ಮೊದಲು ತೆಗೆಯುವ ಕೆಲಸಕ್ಕೆ ಮುಂದಾಗ ಬೇಕು.ಇಲ್ಲವಾದಲ್ಲಿ ನಾವು ಕ್ರಮಕ್ಕೆ ಮುಂದಾಗುತ್ತೇವೆಂದು ಅಧಿಕಾರಿಗಳಿಗೆ ಗುಟುರು ಹಾಕಿದರು.

ಅಂಗನವಾಡಿಗಳ ಕಟ್ಟಡಕ್ಕೆ ಬೇಕಾಗಿರುವ ಜಾಗವನ್ನು ಹುಡುಕಿ ತಮಗೆ ವರದಿ ನೀಡಲು ನಗರಸಭೆ ಅಧ್ಯಕ್ಷರಿಗೆ ಒಂದು ವಾರದ ಗಡವು ನೀಡಿದರು. ಈ ಸಂಧರ್ಭದಲ್ಲಿ ಶಿಶು ಅಭಿವೃದ್ಧಿ ಅಧಿಕಾರಿ ದತ್ತಾತ್ರೇಯ ಭಟ್ಟರವರು ಅತಿವೃಷ್ಟಿಯಿಂದ 32 ಅಂಗನವಾಡಿ ಕಟ್ಟಡಕ್ಕೆ ಹಾನಿ ಉಂಟಾಗಿದ್ದು ಒಟ್ಟಾರೆ ತಾಲೂಕಿನಲ್ಲಿ 47 ಅಂಗನವಾಡಿಗಳಿಗೆ ಕಟ್ಟಡದ ಅಗತ್ಯವಿದೆ. ಅದೇ ರೀತಿಯಾಗಿ ಶಿಶು ಅಭಿವೃದ್ದಿ ಇಲಾಖೆಯ ಕಟ್ಟಡ ಸ್ಥಳಾಂತರಕ್ಕೆ ಬೇರೆ ಕಟ್ಟಡ ಕಲ್ಪಿಸಬೇಕೆಂದು ಹೇಳಿದಾಗ ಕಾಗೇರಿಯವರು ಹೊಸದಾಗಿ ಕಟ್ಟಿರುವ ಸಮಾಜ ಕಲ್ಯಾಣ ಇಲಾಖೆಯ ಕಟ್ಟಡದಲ್ಲಿಯೇ ತಾತ್ಕಾಲಿಕವಾಗಿ ಶಿಶು ಅಭಿವೃದ್ಧಿ ಇಲಾಖೆ ಸ್ಥಳಾಂತರಗೊಳ್ಳಲು ಸೂಚನೆ ನೀಡಿದರು.

 ಜಿಲ್ಲೆಯಲ್ಲಿ ಪಶು ಸಂಗೋಪನಾ ಇಲಾಖೆಯ ಆಸ್ಪತ್ರೆಯಲ್ಲಿ 20  ವೈದ್ಯರ ಕೊರತೆಯಿದ್ದು ಕೇವಲ 3 ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಗೆ 13 ಸಂಚಾರಿ ಪಶು ಚಿಕಿತ್ಸೆ ವಾಹನ ನೀಡಿದ್ದರೂ ಕೂಡಾ ವೈದ್ಯರ ಹಾಗು ಸಿಬ್ಬಂದಿಗಳ ನೇಮಕ ಮಾಡಿಲ್ಲ. ಇನ್ನೊಂದು ವಾರದಲ್ಲಿ ನೇಮಕವಾಗುವ ಸಾದ್ಯತೆಯಿದೆ ಎಂದು ಇಲಾಖೆಯ ನಿರ್ದೇಶಕ ಡಾ.ಎಂ ಎಚ್ ಸವಣೂರು ತಿಳಿಸಿದರು. 

ತಾಲೂಕು ಆರೋಗ್ಯ ವೈದ್ಯಾದಿಕಾರಿ ಡಾ.ವಿನಾಯಕ ಭಟ್ಟ ಕಣ್ಣಿ ಮಾತನಾಡಿ ತಾಲೂಕಿನಲ್ಲಿ  ಇದುವರೆಗೂ 212 ವಾಂತಿ ಬೇದಿ,26 ಕೊವಿಡ್ ಹಾಗು 7 ಹಾವು ಕಚ್ಚಿದ ಪ್ರಕರಣ ದಾಖಲಾಗಿದೆ ಎಂದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ಮಾಹಿತಿ ನೀಡಿ ಈ ಬಾರಿ ವಾಡಿಕೆ ಮಳೆಗಿಂತ 53 ಸೆಂ.ಮೀ. ಹೆಚ್ಚು ಮಳೆ ಸುರಿದಿದೆ.ಕಳೆದ ಬಾರಿ 1892 ಸೆಂ.ಮೀ.ಮಳೆ ಸುರಿದರೆ ಈ ಬಾರಿ 2245 ಸೆಂ.ಮೀ.ಮಳೆ ಸುರಿದಿದೆ ಎಂದರು.ಪೈಬರ್ ದೋಟಿಗೆ ಬಹಳಷ್ಟು ಬೇಡಿಕೆಯಿದೆ. ಆದರೆ ಖರೀದಿಗೆ ಸಹಾಯಧನ ಬಿಡುಗಡೆಯಾಗಿಲ್ಲವೆಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಗಣೇಶ ಹೆಗಡೆ ತಿಳಿಸಿದಾಗ ಕಾಗೇರಿಯವರು ರೈತರ ಅನುಕೂಲಕ್ಕಾಗಿ ಹೆಚ್ಚಿನ ಸಹಾಯಧನದ ಬೇಡಿಕೆಯಿರುವ ಪಟ್ಟಿಯನ್ನು ನೀಡಬೇಕು.ತಾಲೂಕಿನಲ್ಲಿ ಕನಿಷ್ಠ ಒಂದು ಸಾವಿರ ಪೈಭರ್ ದೋಟಿ  ಬೇಡಿಕೆ ಪಟ್ಟಿಯನ್ನು ಸಲ್ಲಿಸಿ ಎಂದರು.

ಹರಘರ ತಿರಂಗ ಕಾರ್ಯಕ್ರಮದಲ್ಲಿ ಈಗಾಗಲೇ ಮನೆ,ಖಾಸಗಿ ಕಚೇರಿ ಕಟ್ಟಡಗಳಲ್ಲಿ  ಕಟ್ಟಿ ಇಳಿಸಿರುವ ರಾಷ್ಟ್ರ ಧ್ವಜದ ಬಗ್ಗೆ ಒಮ್ಮೆ ಪೋಲಿಸರು ಗಮನ ಹರಿಸಬೇಕೆಂದರು. ತಾಲೂಕಿನಲ್ಲಿ ಮೊದಲ ಬಾರಿಗೆ ಕರಡಿ ದಾಳಿಗೆ ಸತ್ತ ವ್ಯಕ್ತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ ಕಾಗೇರಿಯವರು ಈಗಾಗಲೇ ಅವರ ಮನೆಗೆ ಹೋಗಿ ಸರಕಾರದಿಂದ ನೀಡಲಾಗುವ 7.50 ಲಕ್ಷ ರೂ ಸಹಾಯ ಧನದ ನೆರವಿನ ಆದೇಶದ ಪ್ರತಿಯನ್ನು ನೀಡಲಾಗಿದೆ ಎಂದರು.

ಸಭೆಯಲ್ಲಿ ಎಸಿ ದೇವರಾಜ ಆರ್,ತಹಶಿಲ್ದಾರ ಶ್ರೀಧರ ಮುಂದಲಮನಿ, ನಗರಸಭೆ ಉಪಾದ್ಯಕ್ಷೆ ವೀಣಾ ಶೆಟ್ಟಿ,ಪೌರಾಯುಕ್ತ ಕೇಶವ ಚೌಗುಲೆ,ಡಿವಾಯೆಸ್ಪಿ ರವಿ ಡಿ ನಾಯ್ಕ ಮುಂತಾದವರು ಇದ್ದರು…

ಶಿವಗಂಗಾ ಫಾಲ್ಸನಲ್ಕಿ ಕಾಣೆಯಾಗಿ ಇದುವರೆಗೂ ಪತ್ತೆಯಾಗದಿರುವ ಕಾಲೇಜು ವಿದ್ಯಾರ್ಥಿನಿಯು ನೀರಿನಲ್ಲಿಯೇ ಮುಳುಗಿ ಮೃತಪಟ್ಟಿದ್ದಾರೆ.ನೀರಿನಲ್ಲಿ  ಅವಳು ತೇಲಿ ಹೋಗಿರುವದನ್ನು ಅವಳ ಸಹಪಾಟಿಯೇ ನೋಡಿ ಹೇಳಿದ್ದಾರೆ.ಆದರೂ ಕೂಡಾ ವಿದ್ಯಾರ್ಥಿನಿಯ ಶೋಧ ಕಾರ್ಯಕ್ಕಾಗಿ ಎಸ್ ಡಿ ಆರ್ ಎಫ್ ತಂಡ ಕಾರ್ಯಚರಣೆ ನಡೆಸುತ್ತಿದೆ..ವಿಶ್ವೇಶ್ವರ ಹೆಗಡೆ ಕಾಗೇರಿ,ಸ್ಪೀಕರ್.

ಶಿರಸಿ ತಾಲೂಕಿನ  ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7