ಶಿರಸಿ: ಅಳಿವಿನಂಚಿನಲ್ಲಿರುವ ಭಾರತೀಯ ಜಾನಪದ ಕಲೆಗಳಲ್ಲೊಂದಾಗಿರುವ ಬೊಂಬೆಯಾಟವನ್ನು ಶಿರಸಿಯ ಮಾರಿಕಾಂಭಾ ದೇವಿಯ ಸಭಾಭವನದಲ್ಲಿ ಶಿಕ್ಷಕ ಹಾಗೂ ಕಲೆಗಾರ ಮನೋಜ ಪಾಲೇಕರ ಮತ್ತವರ ತಂಡದವರು ಆಡಿ ತೋರಿಸುವ ಮೂಲಕ ನೆರೆದ ನೂರಾರು ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಬೊಂಬೆಯಾಟದಲ್ಲಿ ಗಣಪತಿ ಮಹಿಮೆ ಹಾಗೂ ಕೊಲ್ಲೂರು ಮೂಕಾಂಬಿಕೆಯ ಪ್ರದರ್ಶನ ಮಾಡಲಾಯಿತು. 9 ಗೊಂಬೆಗಳಲ್ಲಿ ಪ್ರದರ್ಶನ ಕಂಡ ಬೊಂಬೆಯಾಟಕ್ಕೆ ಮನಸೋತ ಜನರು ಜಾನಪದ ಲೋಕದಲ್ಲಿ ಕೆಲಕಾಲ ಮೈ ಮರೆತು ಹೋದರು.
ಈ ಕಾರ್ಯಕ್ರಮದ ಪೂರ್ವದಲ್ಲಿ ಯಕ್ಷಗಾನ ಬಾಲ ಪ್ರತಿಭೆ ಕು.ತುಳಸಿ ರಾಘವೇಂದ್ರ ಹೆಗಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಾರಿಕಾಂಭಾ ದೇವಾಲಯದ ಅಧ್ಯಕ್ಷ ರವಿ ನಾಯ್ಕ, ಡಾ.ವೆಂಕಟರಮಣ ಹೆಗಡೆ, ಪ್ರಭಾಕರ ಜೋಗಳೆಕರ್, ಸಿದ್ದಪ್ಪ ವೀರಭದ್ರಪ್ಪ ಬಿರದಾರ,ಶ್ರೀಧರ ಗುಡಿಗಾರ,ಡಿ ಎಸ್ ನಾಯ್ಕ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ.ವೆಂಕಟರಮಣ ಹೆಗಡೆಯವರು ಬೊಂಬೆಯಾಟದಂತಹ ಅಪರೂಪದ ಕಲೆಯನ್ನು ಮತ್ತೆ ಜಾನಪದ ಲೋಕಕ್ಕೆ ಪರಿಚಯಿಸುತ್ತಿರುವ ಮನೋಜ ಮತ್ತವರ ತಂಡದ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳ ಬೇಕಾದಲ್ಲಿ ದಿನಕ್ಕೆ ಆರು ತಾಸು ನಿದ್ದೆ, ನಾಲ್ಕು ಲೀಟರ್ ನೀರು, ಎರಡು ಬಾರಿ ಪ್ರಾರ್ಥನೆ, ಎರಡು ಬಾರಿ ಆಹಾರ ಹಾಗು ವಾರಕ್ಕೆ ಒಮ್ಮೆ ಉಪವಾಸ ಮಾಡಬೇಕೆಂದು ಆರೋಗ್ಯದ ಗುಟ್ಟನ್ನು ಹೇಳಿದರು.
ಲೇಖಕ ಡಿ ಎಸ್ ನಾಯ್ಕ ಮಾತನಾಡಿ ನಾವು ಎಷ್ಟೇ ಒತ್ತಡ ಬಂದರೂ ಸಮಾಧಾನದಿಂದ ಕೆಲಸ ಮಾಡಬೇಕೆಂದು ಹೇಳಿದರು.ಮಾರಿಕಾಂಭಾ ದೇವಾಲಯದ ಅಧ್ಯಕ್ಷ ರವಿ ನಾಯ್ಕ ಮಾತನಾಡಿ ನಶಿಸಿ ಹೋಗುತ್ತಿರುವ ಬೊಂಬೆಯಾಟದಂತಹ ಕಲೆಯನ್ನು ಮತ್ತೆ ನಮ್ಮ ದೇವಾಲಯದ ಮೂಲಕ ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದರು. ಶಿಕ್ಷಕ ಹಾಗು ಕಲೆಗಾರ ಮನೋಜ ಪಾಲೇಕರ್ ಸ್ವಾಗತಿಸಿದರೆ ಶಿಕ್ಷಕ ದೇವಿದಾಸ ನಾಯ್ಕ ನಿರ್ವಹಣೆ ಮಾಡಿದರು.
ಶಿರಸಿ ತಾಲೂಕಿನ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/GhPLlofxjaR1GYrAz8Rpi7
