ಶಿರಸಿ: ಕೊಂಕಣಿ ಭಾಷೆ ಮತ್ತು ಸಾಹಿತ್ಯ ಈ ನೆಲದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಲು ತನ್ನದೇ ಆದ ವಿಶಿಷ್ಠವಾದ ಕೊಡುಗೆ ನೀಡಿದೆ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ತಿಳಿದರು.
ಅವರು ಭಾನುವಾರ ಇಲ್ಲಿನ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಆಯೋಜಿಸಲಾದ್ದ ಕೊಂಕಣಿ ಲೋಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೊಂಕಣಿ ಭಾಷೆಯನ್ನು 42ಕ್ಕೂ ಹೆಚ್ಚು ಸಮುದಾಯಗಳು ತಾಯಿ ಭಾಷೆಯಾಗಿ ಬಳಸುತ್ತಿದ್ದಾರೆ. ಕೊಚ್ಚಿಯಿಂದ ಹಿಡಿದು ಗೋವಾ, ಕರ್ನಾಟಕ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಜನರು ಕೊಂಕಣಿಯನ್ನೆ ತಮ್ಮ ಭಾಷೆಯನ್ನಾಗಿರಿಸಿ ಕೊಂಡಿದ್ದಾರೆ. ಸಾಹಿತ್ಯ, ಕ್ರೀಡೆ, ಸಿನೇಮಾ, ಸಂಗೀತ ಕ್ಷೇತ್ರದಲ್ಲಿ ಭಾರತ ರತ್ನ, ಜ್ಞಾನಪೀಠದಂತಹ ಪ್ರಶಸ್ತಿಯನ್ನು ಕೊಂಕಣಿ ಭಾಷಿಗರು ಪಡೆದುಕೊಳ್ಳುವ ಮೂಲಕ ಈ ದೇಶದ ಹಿರಿಮೆಯನ್ನು ಹೆಚ್ಚಿಸಿದ್ದಾರೆಂದರು.
ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಜಗದೀಶ ಪೈ ಮಾತನಾಡಿ ನಮ್ಮ ದೇಶದ ಸಂಸ್ಕೃತಿ ಶಿಕ್ಷಣವನ್ನು ಹಾಳುಮಾಡಿದವರೇ ಬ್ರಿಟೀಷರು. ಇವರು ನಮ್ಮ ಮೂಲ ಗುರುಕುಲ ಪದ್ದತಿಯನ್ನು ನಾಶಮಾಡಿ ಹೊಸ ಶಿಕ್ಷಣ ಪದ್ದತಿಯನ್ನು ಜಾರಿಗೆ ತರುವ ಮೂಲಕ ನಮ್ಮ ಮೂಲ ಆಶಯ ಭಾಷೆಗಳಿಗೆ ದಕ್ಕೆ ತಂದರೆಂದು ಹೇಳಿದರು. ನಮ್ಮ ಮಕ್ಕಳಿಗೆ ಕೊಂಕಣಿ ಭಾಷೆಯ ಮೇಲೆ ಪ್ರಭುತ್ವ ಸಾಧಿಸಲು ಬಾಲ್ಯದಿಂದಲೇ ಹೇಳಿ ಕೊಡಬೇಕು. ನಮಗೆ ಮೊದಲು ನಮ್ಮ ತಾಯಿ ಭಾಷೆಯ ಮೇಲೆ ಅಭಿಮಾನ ಬಂದಾಗಲೇ ಭಾಷೆ ಹೆಚ್ಚು ಶಕ್ತಿಯುತವಾಗಿ ಬೆಳೆಯುತ್ತದೆ. ಬದಲಾದ ಕಾಲದಲ್ಲಿ ಕೊಂಕಣಿಯ ಮೂಲ ಸ್ವರೂಪ ಬದಲಾಗ ಬಾರದು. ಏಕೆಂದರೆ ಕೊಂಕಣಿ ಮುಂದಿನ ತಲೆಮಾರಿಗೆ ಹಸ್ಥಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಕೊಂಕಣಿ ಅಕಾಡಮಿ ಕೂಡಾ ಹೆಚ್ಚಿನ ಪರಿಶ್ರಮವಹಿಸಿ ಕೆಲಸಮಾಡುತ್ತಿದೆ ಎಂದರು.
ಉಪನ್ಯಾಸ ನೀಡಿದ ಲೋಕ ಮಿತ್ರ ಫೌಂಡೇಶನ್ ಅಧ್ಯಕ್ಷ ರಾಮು ಹರಿ ಕಿಣಿಯವರು , ಬಳಕೆಗೆ ಹಿಂದೇಟು ಹಾಕಿದ ಭಾಷೆಗಳು ನಶಿಸುವ ಹಂತದಲ್ಲಿದೆ. ಕೊಂಕಣಿಗೆ ಅಂತಹ ಸ್ಥಿತಿ ಎದುರಾಗಬಾರದು. ಕೊಂಕಣಿ ಭಾಷಿಕರು ಇತರ ಭಾಷೆ ಕಲಿತರೂ ಮಾತೃಭಾಷೆಯ ನಂಟು ಬಿಡಬಾರದು ಎಂದರು.
ಕನ್ನಡದ ಹೆಮ್ಮೆಯ ರಾಷ್ಟ್ರಕವಿಗಳಾದ ಕುವೆಂಪು ಮತ್ತು ಗೋವಿಂದ ಪೈ ಇವರು ಕೊಂಕಣಿ ಭಾಷಿಕರೆ ಆಗಿದ್ದರು. ಕೊಂಕಣಿ ಭಾಷಿಕರು ದೇಶದಲ್ಲಷ್ಟೇ ಅಲ್ಲದೇ ವಿದೇಶದಲ್ಲೂ ಸಾಧನೆ ತೋರಿದ್ದಾರೆ. ಕ್ರಿಕೇಟ ದಂತ ಕಥೆ ಸಚಿನ್ ತೆಂಡೂಲ್ಕರ್, ಸಂಗೀತದ ಗಾನ ಕೋಗಿಲೆ ದಿ.ಲತಾ ಮಂಗೇಶ್ಕರ್ ಇವರು ನಮ್ಮ ಕೊಂಕಣಿ ಭಾಷಿಗರೆನ್ನುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ ಎಂದರು. ನಮ್ಮ ನಮ್ಮ ಭಾಷೆಯನ್ನು ಮನೆಯಿಂದಲೇ ಗಟ್ಟಿಗೊಳಿಸುವ ಕೆಲಸಮಾಡಬೇಕು.ಸಂಸ್ಕಾರ, ಸಂಸ್ಕೃತಿ ಇದು ತಾಯಿ ಗರ್ಭದಿಂದ ಆರಂಭಗೊಳ್ಳುತ್ತದೆ ಎಂದರು.
ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಕೊಂಕಣಿಗರು ಸಾಧನೆ ಪ್ರೀಯರು. ಅವರು ತಮ್ಮ ಮಾತು ಮತ್ತು ವೃತ್ತಿಯಲ್ಲಿ ಜಾಣತನವನ್ನು ಮೆರೆಯುತ್ತಾರೆ ಮತ್ತು ಪೈಪೋಟಿಗೆ ಇಳಿಯದೆ ತಮ್ಮ ಶ್ರಮ, ಶಕ್ತಿಯನ್ನು ಸಮಾಜದ ಒಳಿತಿಗೆ ಧಾರೆ ಎರೆಯುತ್ತಾರೆ. ದೇಶದ ಹಲವು ಉಪಭಾಷೆಗಳಲ್ಲಿ ಕೊಂಕಣಿ ಹೆಚ್ಚು ಭಾಷಿಕರನ್ನು ಹೊಂದಿದೆ ಎಂದರು.
ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯ ವಸಂತ ಬಾಂದೇಕರ್, ಸಾಹಿತ್ಯ ಕ್ಷೇತ್ರಕ್ಕೆ ಕೊಂಕಣಿ ಭಾಷಿಕರ ಕೊಡುಗೆ ಮಹತ್ತರವಾಗಿದೆ. ಪೋರ್ಚುಗೀಸರ ದಾಳಿಯಿಂದ ಗೋವಾ ಪ್ರಾಂತ್ಯದಲ್ಲಿದ್ದ ಅಮೂಲ್ಯ ಕೊಂಕಣಿ ಸಾಹಿತ್ಯ ಕೃತಿಗಳು ನಾಶವಾಗಿವೆ ಎಂದರು.
ದೈವಜ್ಞ ವಾಹಿನಿ ಜಿಲ್ಲಾ ಅಧ್ಯಕ್ಷ ಸುಧಾಕರ ರಾಯ್ಕರ್, ಅಕಾಡೆಮಿ ಸದಸ್ಯ ಸುರೇಂದ್ರ ಪಾಲನಕರ್ ಇದ್ದರು.
ಇದೇ ಸಂದರ್ಭದಲ್ಲಿ ಕೊಂಕಣಿ ಭಾಷೆ ಸಾಧಕರಾದ ಮಹಾವಿಷ್ಣು ದೇವಸ್ಥಾನದ ಮುಕ್ತೇಸರರಾದ ವಿಷ್ಣುದಾಸ ಕಾಸರಕೋಡ, ಕೊಂಕಣಿ ರಂಗ ಕಲಾಕಾರರಾದ ಸಾಂತಾ ಥಾಮಸ್ ಫರ್ನಾಂಡಿಸ್,ಹಾಗು ಅಕಾಡಮಿ ಸದಸ್ಯ ವಸಂತ ಬಾಂದೇಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕೊಂಕಣಿ ಅಕಾಡಮಿ ಮಾಜಿ ಸದಸ್ಯ ಹಾಗು ಸಾಹಿತಿ ವಾಸುದೇವ ಶಾನಭಾಗ ಕಾರ್ಯಕ್ರಮ ರೂಪಿಸಿದರು
