ಶಿರಸಿ: ತಾಲ್ಲೂಕಿನ ಗುಡ್ನಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಗುಡ್ನಾಪುರ ಕ್ರಾಸ್‍ನಿಂದ ಮಧುರವಳ್ಳಿಗೆ ಸಂಪರ್ಕಿಸುವ ರಸ್ತೆಯಲ್ಲಿದ್ದ ಹೊಂಡಗಳನ್ನು ಗ್ರಾಮಸ್ಥರು ಸ್ವತಃ ಶ್ರಮದಾನ ಮಾಡುವ ಮೂಲಕ ಶನಿವಾರ ದುರಸ್ಥಿಪಡಿಸಿಕೊಂಡಿದ್ದಾರೆ

ಸ್ಥಳೀಯ ಯುವಕರು, ಗುಡ್ನಾಪುರ ಗ್ರಾಮ ಅಭಿವೃದ್ಧಿ ಸಮಿತಿ ಸದಸ್ಯರು ಸೇರಿದಂತೆ ಹತ್ತಾರು ಜನರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಚಂದ್ರಪ್ಪ ಚೆನ್ನಯ್ಯ ಮೂರು ಟ್ರ್ಯಾಕ್ಟರ್ ಚಿರೇಕಲ್ಲು ಉಚಿತವಾಗಿ ಒದಗಿಸಿದ್ದರು.

ಸುಮಾರು 2 ಕಿ.ಮೀ. ಉದ್ದದ ರಸ್ತೆಯಲ್ಲಿ ಬಿದ್ದಿರುವ ನೂರಾರು ಹೊಂಡಗಳನ್ನು ಚಿರೇಕಲ್ಲು, ಕಲ್ಲಿನ ಪುಡಿ ಬಳಸಿ ಭರ್ತಿ ಮಾಡಲಾಯಿತು.

ರಸ್ತೆ ದುರಸ್ಥಿಪಡಿಸಲು ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ, ಸ್ಥಳೀಯ ಗ್ರಾಮ ಪಂಚಾಯ್ತಿಗೆ ಮನವಿ ನೀಡಿದ್ದರೂ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಶ್ರಮದಾನಕ್ಕೆ ಇಳಿಯಬೇಕಾಯಿತು ಎಂದು ಸ್ಥಳೀಯ ಪ್ರಮುಖ ಮಧುಕೇಶ್ವರ ನಾಯ್ಕ ತಿಳಿಸಿದರು. ಈ ಭಾಗದಲ್ಲಿ ಸರ್ವೃತು ರಸ್ತೆಯನ್ನು ಆದಷ್ಟು ಬೇಗನೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.