ಶಿರಸಿ: ವಿದ್ಯಾರ್ಥಿಗಳನ್ನು ಕೇವಲ ಅಂಕ ಗಳಿಕೆಗೆ ಸಿದ್ಧಗೊಳಿಸಿದರೆ ಸಾಲದು ಜೊತೆಗೆ ರಾಷ್ಟ್ರ ನಿರ್ಮಾಣದಲ್ಲಿ ಕೈ ಜೋಡಿಸುವಂತಹ ವಿದ್ಯಾರ್ಥಿಗಳನ್ನು ತಯಾರು ಮಾಡುವಂತಹ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಅವರು ಅಂಬೇಡ್ಕರ್ ಭವನದಲ್ಲಿ ಶಿಕ್ಷಕರ ದಿನಾಚರಣೆ ಹಾಗು ಗುರು ಗೌರವಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಜಿಲ್ಲಾ ಹಾಗು ತಾಲೂಕಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಕಿರಿಯ, ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಾಗು ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನಿಸಿ ಮಾತನಾಡಿದರು.

ಮಕ್ಕಳಿಗೆ ಅಂಕಗಳಿಕೆ ಬೇಕು. ಆದರೆ ಆ ಅಂಕ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಬಾರದೆ ಹೋದರೆ ಯಾವುದೇ ಪ್ರಯೋಜನವಿಲ್ಲವೆಂದರು. ಇಂದಿನ ಮಕ್ಕಳು ಭವಿಷ್ಯದಲ್ಲಿ ಮನೆ ಕಟ್ಟುವ ಕನಸು ಕಾಣುವುದಕ್ಕಿಂತ ಸೌಹಾರ್ದಯುತವಾದ ಸಮಾಜ ನಿರ್ಮಿಸುವ ಕನಸು ಕಟ್ಟಬೇಕು. ಇದು ಕೇವಲ ಸಿಲೆಬಸ್ ಶಿಕ್ಷಣದಿಂದ ಸಾಧ್ಯವಿರದ ಕಾರಣ ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಹೊರತಾಗಿಯೂ ಸುಜ್ಞಾನ ತುಂಬುವಂತಹ ಶಿಕ್ಷಣ ನೀಡಿ ಅವರನ್ನು ದೇಶ ಮತ್ತು ಸಮಾಜಕ್ಕಾಗಿ ಸದೃಡಗೊಳಿಸಬೇಕೆಂದು ಹೇಳಿದರು. ಮಕ್ಕಳ ಭವಿಷ್ಯ ಶಿಕ್ಷಕರನ್ನು ಅವಲಂಬಿಸಿರುವುದರಿಂದ ಶಿಕ್ಷಕರೂ ಕೂಡಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಬೇಕಾಗುವ ಶಿಕ್ಷಣ ನೀಡಬೇಕೆಂದರು.
ಸರ್ವಪಲ್ಲಿ ರಾಧಾಕೃಷ್ಣರವರು ಕೇವಲ ಶಿಕ್ಷಣ ಕ್ಷೇತ್ರಕಷ್ಟೇ ಕೊಡುಗೆ ನೀಡಿಲ್ಲ. ಸಾಹಿತ್ಯ ಕ್ಷೇತ್ರಕ್ಕೂ ತಮ್ಮ ಅಮೂಲ್ಯವಾದ ಕೊಡುಗೆ ನೀಡುವುದರ ಮೂಲಕ ತತ್ವಜ್ಞಾನಿಯಾಗಿ ಹೊರ ಹೊಮ್ಮಿದವರು. ಅವರು ಬಹುಮುಖ ಪ್ರತಿಭೆಯ ವ್ಯಕ್ತಿತ್ವದವರಾಗಿದ್ದರೆಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾಗೇರಿಯವರು ನಿವೃತ್ತ ಶಿಕ್ಷಕ ಎಚ್ ಆರ್ ಅಮರನಾಥರವರ “ಒಗ್ಗಟ್ಟಿನಲ್ಲಿ ಬಲವಿದೆ” ಪುಸ್ತಕ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಎಸಿ ದೇವರಾಜ ಆರ್,, ಡಿಡಿಪಿಆಯ್ ಬಸವರಾಜ ಪಿ, ಬಿಇಒ ಎಂ ಎಸ್ ಹೆಗಡೆ, ಶಿಕ್ಷಣ ಸಂಯೋಜಕ ವಸಂತ ಬಂಡಾರಿ, ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ನಾರಾಯಣ ನಾಯ್ಕ, ತಾಪಂ ಕಾರ್ಯನಿರ್ವಹಣಾದಿಕಾರಿ ದೇವರಾಜ ಹಿತ್ತಲಮನಿ ಮುಂತಾದವರು ಉಪಸ್ಥಿತರಿದ್ದರು.
ಬಾಕ್ಸ್ ನ್ಯೂಸ್: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಅರುಣೋದಯ ಸಂಸ್ಥೆಯಿಂದ ಉತ್ತಮ ಶಿಕ್ಷಕರಿಗೆ ನೀಡಲಾಗುವ ಪಾಂಡುರಂಗ ಪ್ರಶಸ್ತಿಯನ್ನು ನಾಗರಾಜ ನಾಯ್ಕ, ಮನೋಜ ಪಾಲೇಕರ್ ಹಾಗು ಅಬಿನಾಬಿ ಮೈದಿನ್ ಇವರಿಗೆ ನೀಡಿ ಗೌರವಿಸಿದರು.ಈ ಸಂಧರ್ಭದಲ್ಲಿ ಅರುಣೋದಯ ಸಂಸ್ಥೆಯ ಸಂಸ್ಥಾಪಕ ಸತೀಶ ನಾಯ್ಕ ಇದ್ದರು
