ಶಿರಸಿ:ನಾವೆಲ್ಲರೂ ಒಂದೇ ಕುಲದವರೆಂಬ ಜಗತ್ತಿಗೆ ಸಮಾನತೆಯ ಮಾರ್ಗದರ್ಶನ ಮಾಡಿದ ನಾರಾಯಣ ಗುರುಗಳು ಆದರ್ಶ ಸಮಾಜಮುಖಿ ಕೆಲಸ ಮಾಡುವವರಿಗೆ ಬಹು ದೊಡ್ಡ ಪ್ರೇರಣದಾರಕರು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಿಳಿಸಿದರು.

ಅವರು ಶನಿವಾರ ಅಂಬೇಡ್ಕರ್ ಭವನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ವೈಕಂ ಸತ್ಯಾಗ್ರಹದ ಮೂಲಕ ಇಡೀ ರಾಷ್ಟ್ರದ ಗಮನ ಸೆಳೆದಿದ್ದ ನಾರಾಯಣ ಗುರುಗಳ ಅಸ್ಪೃಷ್ಯತೆ ವಿರುದ್ಧದ ಹೋರಾಟ, ಸಮಾಜ ಪರಿಪರ್ತನೆಗೆ ಪ್ರಮುಖ ಕಾರಣವಾಗಿದೆ ಎಂದರು.
ನಾರಾಯಣಗುರುಗಳಿಗೆ ಎಂದೂ ಸಿಗಬೇಕಾಗಿದ್ದ ಪ್ರಾಮುಖ್ಯತೆ ಬಹಳಷ್ಟು ವರ್ಷಗಳ ನಂತರ ಸಿಕ್ಕಿದೆ. ಅದೂ ಕೂಡ ಸರಕಾರದಿಂದ ಮಾಡಲಾಗುವ ಜಯಂತಿಯಿಂದ ಮತ್ತು ಹಿಂದೂಳಿದ ವರ್ಗದವರ ಒಕ್ಕಟ್ಟಿನ ಪ್ರದರ್ಶನದಿಂದ ಅವರಿಗೆ ನ್ಯಾಯ ಸಿಕ್ಕಿದೆ ಎಂದರು. ಪರಕೀಯರ, ಬ್ರಿಟೀಷರ ಆಡಳಿತದ ದಿನಮಾನಗಳಲ್ಲಿ ನಾರಾಯಣ ಗುರುಗಳು ಜನ್ಮಿಸಿದ್ದರು. ಅಂದಿನ ದಿನಗಳಲ್ಲಿ ಕೇರಳದಲ್ಲಿ ಜಾತೀಯತೆ, ಅಸ್ಪ್ರಷ್ಯತೆ ತಾಂಡವಾಡುತ್ತಿತ್ತು. ಅದನ್ನೆಲ್ಲ ಮೆಟ್ಟಿ ನಿಂತವರು ಬ್ರಹ್ಮಶ್ರೀ ನಾರಾಯಣ ಗುರುಗಳು. ದೇವರ ಸೃಷ್ಠಿಯ ಈ ಭೂಮಿಯಲ್ಲಿ ಎಲ್ಲರೂ ಒಂದೇ, ದೈವೀ ಶಕ್ತಿಯ ಅಂಶ ಎಲ್ಲ ಜೀವಿಗಳಲ್ಲಿದೆ ಎಂದು ನಾರಾಯಣಗುರುಗಳು ಬಿಂಬಿಸಿದ್ದರು ಎಂದರು.
ದೇಶ ಮೊದಲು ಎಂದು ನಾವು ನಂಬುವವರೆಗೂ ಸುಖದ ಜೀವನ ಸಾಧ್ಯವಾಗುವುದಿಲ್ಲ. ಜಾತಿ ಉಪ ಜಾತಿಯನ್ನೇ ನಾವು ಪ್ರಮುಖ ಮಾಡಿಕೊಂಡರೆ ಉಳಿಗಾಲವಿಲ್ಲ. ನಾರಾಯಣ ಗುರುಗಳ ಜನ್ಮ ದಿನ ಆಚರಣೆ ಮೂಲಕ ನಾವು ಸಂಘಟಿತರಾಗಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಯೋಜನಾ ಪ್ರಾದಿಕಾರದ ಅದ್ಯಕ್ಷ ನಂದನ ಸಾಗರ, ಸಹಾಯಕ ಆಯುಕ್ತ ದೇವರಾಜ ಆರ್.,ತಹಸೀಲ್ದಾರ್ ಶ್ರೀಧರ ಮುಂದಲಮನಿ, ಪೌರಾಯುಕ್ತ ಕೇಶವ ಚೌಗುಲೆ, ಸಾಮಾಜಿಕ ಕಾರ್ಯಕರ್ತ ಗಣಪತಿ ನಾಯ್ಕ, ತಾಪಂ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ಲಮಕ್ಕಿ, ಡಿಎಸ್ಪಿ ರವಿ ನಾಯ್ಕ ಇತರರಿದ್ದರು.
ಇದಕ್ಕೂ ಮುನ್ನ ನಗರದ ಮಾರಿಕಾಂಬಾ ದೇವಾಲಯದಿಂದ ನಾರಾಯಣ ಗುರುಗಳ ಭಾವಚಿತ್ರದ ಆಕರ್ಷಕ ಮೆರವಣಿಗೆ ನಡೆಯಿತು.
