ಶಿರಸಿ: ಉತ್ತರಕನ್ನಡ ಜಿಲ್ಲೆ ಶಿಕ್ಷಕ, ಶಿಕ್ಷಕಿಯರ ನಿರಂತರ ಸಹಾಯವಾಣಿಯಿಂದ ಜಿಲ್ಲೆಯ ಆಟೋ ಚಾಲಕ ಮಾಲಕರ ಸಂಘದ 20 ಕ್ಕೂ ಹೆಚ್ಚಿನ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗು ಮಾದ್ಯಮ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಹಾಗು ಪತ್ರಕರ್ತ ಪ್ರದೀಪ ಶೆಟ್ಟಿಯವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಪತ್ರಿಕಾ ಭವನದಲ್ಲಿ ನಡೆದ ಈ ಕಾರ್ಯಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆಯ ಅಧ್ಯಕ್ಷ ಗಣಪತಿ ನಾಯ್ಕರವರು ಆಟೋ ಚಾಲಕರ ಕಷ್ಟದ ಜೀವನ ನಡೆಸುತ್ತಿರುವುದರಿಂದ ಅವರ ಮಕ್ಕಳು ಕೂಡಾ ಬಡತನದಲ್ಲಿ ಕಲಿಯುತ್ತಿದ್ದಾರೆ. ಇಂತಹ ಮಕ್ಕಳು ಶಿಕ್ಷಣದಲ್ಲಿ ಮುಂದೆ ಬರಲು ಪ್ರತಿಭಾ ಪುರಸ್ಕಾರದ ಅಗತ್ಯವಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶೋಕ ಹಾಸ್ಯಗಾರವರು ಕೆಳ ವರ್ಗದ ಸಮಾಜವಿಲ್ಲದೇ ಮೇಲ್ವರ್ಗದ ಸಮಾಜ ನಡೆಯಲು ಸಾದ್ಯವೇ ಇಲ್ಲ. ಸಮಾಜವೆಂದರೆ ನೆಟ್ ಬೊಲ್ಟ್ ಇದ್ದಂತೆ. ಇಲ್ಲಿ ಯಾವುದೇ ಒಂದು ಬೊಲ್ಟ್ ಕಳಿಚಿದರೂ ಅದು ಸಮಾಜದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಇಂದಿನ ಮುಂದುವರೆದ ಯುಗದಲ್ಲಿ ಕಂಪ್ಯೂಟರ್, ರೊಬೊರ್ಟಗಳು ಬಂದು ನಮ್ಮ ಸಂಸ್ಕ್ರತಿಯನ್ನು ಹಾಳುಗೆಡವುತ್ತಿವೆ. ಕಾರಣ ಇವುಗಳಿಗೆ ಭಾವನೆಯಿಲ್ಲ ಮತ್ತು ಇವೆಲ್ಲವೂ ಕೂಡಾ ನಮ್ಮ ಮೂಲ ಸಂಸ್ಕ್ರತಿಗೆ ವಿರುದ್ಧವಾಗಿವೆ ಎಂದರು.
ಎಂಜಿಸಿ ಶಿಕ್ಷಣ ಸಂಸ್ಥೆಯ ಉಪಾದ್ಯಕ್ಷರಾದ ಶಶಿಭೂಷಣ ಹೆಗಡೆ ಮಾತನಾಡಿ ನಮ್ಮ ದೇಶದಲ್ಲಿ ಸುಮಾರು 81 ಲಕ್ಷ ಆಟೋಗಳಿದ್ದು ಆಟೋ ಮಾಲಕ ಚಾಲಕರು ತಿಂಗಳಿಗೆ ಕೇವಲ ಎಂಟರಿಂದ ಹತ್ತು ಸಾವಿರ ದುಡಿಯುತ್ತಿರುವುದರಿಂದ ಅವರೆಲ್ಲರೂ ಬಡತನದ ರೇಖೆಗಿಂತ ಕೆಳಗಿದ್ದಾರೆ. ಇಂತವರಿಗೆ ಸರಕಾರ ಸಹಾಯ ಮಾಡಲು ಮುಂದೆ ಬರಬೇಕೆಂದು ಹೇಳಿದರು.
ವೇದಿಕೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್, ಮನು ವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್, ಜಿ.ಪಂ.ಮಾಜಿ ಸದಸ್ಯೆ ಉಷಾ ಹೆಗಡೆ, ಎಕ್ಸ್ ಪರ್ಟ್ ಹ್ಯಾಂಡರೈಟಿಂಗ್ ತರಬೇತಿ ಸಂಸ್ಥೆಯ ಮುಖ್ಯಸ್ಥ ಶ್ರೇಯಸ್ ಆಚಾರ್ಯ, ಉತ್ತರಕನ್ನಡ ಜಿಲ್ಲಾ ಆಟೋ ಚಾಲಕರ ಮಾಲಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಉದಯ ನಾಯ್ಕ ಹಾಗೂ ಉತ್ತರಕನ್ನಡ ಜಿಲ್ಲಾ ಶಿಕ್ಷಕ ಶಿಕ್ಷಕಿಯರ ನಿರಂತರ ಸಹಾಯವಾಣಿಯ ಅಧ್ಯಕ್ಷ ವಿಶ್ವನಾಥ ಗೌಡ ಉಪಸ್ಥಿತರಿದ್ದರು.
