ಜೋಯಿಡಾ –  ತಾಲೂಕಿನಾಧ್ಯಂತ ಅಡಿಕೆ ಬೆಳೆಗಾರರು ಅತಿಯಾದ ಕೊಳೆ ರೋಗದಿಂದಾಗಿ ತತ್ತರಿಸಿ ಹೋಗಿದ್ದಾರೆ. ಕೊಳೆರೋಗದಿಂದ ವರ್ಷದ ಬೆಳೆ ಹಾಳಾಗಿದ್ದು ರೈತರು ಕಣ್ಣೀರು ಸುರಿಸುವಂತಾಗಿದೆ.

    ಜೋಯಿಡಾ ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತಿ, ನಾಗೋಡಾ, ಉಳವಿ, ಕುಂಬಾರವಾಡ, ಅಣಶಿ ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಅತಿಯಾದ ಮಳೆಯಿಂದಾಗಿ ಅಡಿಕೆಗೆ ಕೊಳೆರೋಗ ಬಂದು ಎಳೆ ಅಡಿಕೆಗಳು ಉದುರುತ್ತಿವೆ. ಗುಂದ ಭಾಗದ ದೇವರಾಜ ಹೆಗಡೆ ಅವರ ತೋಟದಲ್ಲಿ ಪ್ರತಿಯೊಂದು ಮರಕ್ಕೆ ಕೊಳೆ ಬಂದ ಕಾರಣ ಸಂಪೂರ್ಣ ಅಡಿಕೆ ಬೆಳೆ ನಾಶವಾಗಿದೆ. ಇನ್ನೂ ಕೆಲ ರೈತರು ಬಿದ್ದ ಕೊಳೆ ಅಡಿಕೆಗಳನ್ನು ಆರಿಸಿ ತಂದು ಒಣಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಒಮ್ಮೆ ಕೊಳೆ ಬಂದರೆ ಈ ವರ್ಷದ ಬೆಳೆಯ ಜೊತೆಗೆ ಅಡಿಕೆ ಮರವು ಸಾಯುತ್ತಿರುವುದು ರೈತರಿಗೆ ಬಹಳಷ್ಟು ನಷ್ಟ ಉಂಟು ಮಾಡಿದೆ.

 ಲಕ್ಷಾಂತರ ರೂ ನಷ್ಟ ಅನುಭವಿಸಿದ ರೈತರಿಗೆ  ಸರ್ಕಾರದಿಂದ ಪರಿಹಾರವು ಸಿಗುತ್ತಿಲ್ಲ. ಸಾಲಸೂಲ ಮಾಡಿ ಅಡಿಕೆ ಬೆಳೆ ಬೆಳೆದ ರೈತರಿಗೆ ಬಹಳಷ್ಟು ನಷ್ಟ ಉಂಟಾಗಿದೆ. ಈ ಬಗ್ಗೆ ತಾಲೂಕಾ ಆಡಳಿತ, ತೋಟಗಾರಿಕಾ ಇಲಾಖೆ, ಜನಪ್ರತಿನಿಧಿಗಳು , ಸರ್ಕಾರ ಕೂಡಲೇ ರೈತರಿಗೆ ಪರಿಹಾರ ನೀಡಬೇಕಿದೆ.

 ನಾನು ಸಣ್ಣ ರೈತನಾಗಿದ್ದು ಈ ಬಾರಿ ನನ್ನ  ಅಡಿಕೆ ತೋಟಕ್ಕೆ ಅತಿಯಾದ ಕೊಳೆ ರೋಗ ಬಂದ ಕಾರಣ ಎಳೆ ಅಡಿಕೆಗಳು ನೆಲಕ್ಕೆ ಬಿದ್ದಿವೆ. ಅಡಿಕೆ ಬೆಳೆಯನ್ನು ನಂಬಿ ನಾನು ಸಂಸಾರ ನಡೆಸುತ್ತಿದ್ದೇನೆ. ಕೊಳೆಯಿಂದಾಗಿ ಸಂಪೂರ್ಣ ಅಡಿಕೆ ಬೆಳೆ ನೆಲಕಚ್ಚಿದೆ. ಸರ್ಕಾರದ ನಮ್ಮಂತ ಬಡ ರೈತರಿಗೆ ಪರಿಹಾರ ನೀಡಬೇಕಿದೆ.

ದೇವರಾಜ ಹೆಗಡೆ – ರೈತ ಕಣಿಕಂಬಾ.ಗುಂದ.