ಶಿರಸಿ: ವಿದ್ಯುತ್ ಅವಘಡಕ್ಕೆ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ತಾಲೂಕಿನ ಸೊಂದಾ ಪಂಚಾಯತಿ ವ್ಯಾಪ್ತಿಯ ಔಡಾಳ ಗ್ರಾಮದ ಬಾದುಂಬೆಯಲ್ಲಿ ಸಂಭವಿಸಿದೆ. ಲೋಕೇಶ ಮಹಾಬಲೇಶ್ವರ ನಾಯ್ಕ (35) ಮೃತಪಟ್ಟ ವ್ಯಕ್ತಿಯಾಗಿದ್ದು ಇವನ ಸಾವಿಗೆ ಹೆಸ್ಕಾಂನ ಲೈನ್ ಮನ್ ಗಳ ನಿರ್ಲಕ್ಷತನವೇ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಲೋಕೇಶನ ಮನೆಯ ಮುಂದಿನ ತೋಟದಲ್ಲಿ ವಿದ್ಯುತ್ ತಂತಿಗೆ ತಾಗುವಷ್ಟು ಮರ  ಬೆಳೆದು ನಿಂತಿತ್ತು. ಗಾಳಿ ಮಳೆಗೆ ಮರದ ರೆಂಬೆ ಕೊಂಬೆಗಳು ವಿದ್ಯುತ್ ತಂತಿಗೆ ತಾಗಿ ಮನೆಯ ವಿದ್ಯುತ್ತಿಗೆ ಸಮಸ್ಯೆಯಾಗುತ್ತಿತ್ತು. ಇದನ್ನು ಸರಿಪಡಿಸಲು ಲೋಕೇಶ ಸಹಾಯಕ ಲೈನ್ ಮನ್ ಶಶಿ ಹಾಗೂ ಜ್ಯೂನಿಯರ್ ಲೈನ್ ಮನ್ ತಿಮ್ಮಾ ಸಹಾಯದಿಂದ  ಮರದ ಕೊಂಬೆಗಳನ್ನು ತೆಗೆಸಲು ವಿದ್ಯುತ್ ಡಿಸ್ ಕನೆಕ್ಟ್ ಮಾಡಿಸಿ ತಂತಿಯನ್ನು ಮರದಿಂದ ಬೇರ್ಪಡಿಸುತ್ತಿದ್ದನು. ಆದರೆ ದುರ್ದೈವ ಎಂಬಂತೆ ಲೈನ್ ಮನಗಳ ನಿರ್ಲಕ್ಷತನಕ್ಕೆ ವಿದ್ಯುತ್ ಡಿಸ್ ಕನೆಕ್ಟ್ ಆಗದ ಕಾರಣ ಹರಿಯುತ್ತಿದ್ದ ವಿದ್ಯುತ್ ತಂತಿಗೆ ಲೋಕೇಶನ ದೇಹ ಸ್ಪರ್ಷಗೊಂಡು ಮೃತಪಟ್ಟಿರಬೇಕೆಂದು ತಿಳಿದು ಬಂದಿದೆ.

ಗ್ರಾಮೀಣ ಠಾಣೆಯ ಪೋಲಿಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.  ಲೋಕೇಶನ ಸಾವು ಯಾರ ನಿರ್ಲಕ್ಷತನದಿಂದ ಸಂಭವಿಸಿರಬಹುದೆಂದು ಪೋಲಿಸರ ತನಿಖೆಯಿಂದ ತಿಳಿದು ಬರಬೇಕಾಗಿದೆ. 

ಲೋಕೇಶ ಪತ್ನಿ, ಎರಡು ವರ್ಷದ ಪುತ್ರ ಹಾಗೂ ಬಂಧು ಬಳಗದವರನ್ನು ಅಗಲಿದ್ದಾನೆ. ಲೋಕೇಶ ಶಿರಸಿಯ ಶ್ರೀ ರಾಘವೇಂದ್ರ ಸರ್ಕಲ್ ನಲ್ಲಿ ಚಿಕನ್ ಸೆಂಟರ್ ನಡೆಸುತ್ತ ಸುತ್ತಮುತ್ತಲಿನ ಜನರ ಪ್ರೀತಿ ಗಳಿಸಿದ್ದನು. ಈತನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಾಘವೇಂದ್ರ ಮಠದ ಸರ್ಕಲ್ ಸುತ್ತ ಸೂತಕದ ಛಾಯೆ ಆವರಿಸಿತು.