ಅಂಕೋಲಾ : ಪರಿಮಳದಂಗಳದಲ್ಲಿ ನಡೆದ ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಆಡಳಿತ ಮಂಡಳಿಯ ಸಭೆಯಲ್ಲಿ ಹಿರಿಯ ಸಾಹಿತಿ ವಿಷ್ಣು ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ಮೋಹನ ಹಬ್ಬು ಮಾತನಾಡಿ ಸಾಹಿತ್ಯ, ಸಂಸ್ಕೃತಿಯ ವಕ್ತಾರರಾಗಿರುವ ವಿಷ್ಣು ನಾಯ್ಕ ಸಮಾಜವಾದಿ ಚಿಂತನೆಗಳನ್ನುತಮ್ಮ ಕಾವ್ಯದ ಮೂಲಕ ಅಭಿವ್ಯಕ್ತಗೊಳಿಸಿದ ಅದ್ವಿತೀಯ ವ್ಯಕ್ತಿ ಎಂದರು.

ಜೆ. ಪ್ರೇಮಾನಂದ, ಜಗದೀಶ ನಾಯಕ ಹೊಸ್ಕೇರಿ, ಗೋಪಾಲಕೃಷ್ಣ ನಾಯಕ, ಎಂ.ಎಂ.ಕರ್ಕಿಕರ, ಫಾಲ್ಗುಣ ಗೌಡ, ಡಾ. ರಾಮಕೃಷ್ಣ ಗುಂದಿ. ಮಹಾಂತೇಶ ರೇವಡಿ, ರಾಮಾ ನಾಯ್ಕ ಮೊದಲಾದವರು ಈ ಸಂದರ್ಭದಲ್ಲಿ ಶ್ರೀಯುತರ ಕನ್ನಡ ಮತ್ತು ಸಾಹಿತ್ಯ ಸೇವೆ, ವಿಸ್ತೃತ ಸಾಹಿತ್ಯರಚನೆ, ಸಂಘಟನೆ, ಪ್ರಕಾಶನ, ಸಾಮಾಜಿಕ ಕಾರ್ಯಗಳನ್ನು ಉದ್ಧರಿಸಿ ಅವರ ಸೇವೆಯನ್ನು ಉತ್ತರ ಕನ್ನಡ ಜಿಲ್ಲೆ ಸದಾ ನೆನೆಸಿಕೊಳ್ಳಬೇಕಿದೆ ಎಂದರು.
ಸರ್ವರ ಸೂಚನೆಯ ಮೇರೆಗೆ ಪ್ರತಿಷ್ಠಾನ ಸ್ಥಳೀಯ ಸಮಾನ ಮನಸ್ಕ ಸಂಸ್ಥೆಗಳ ಸಹಕಾರದೊಂದಿಗೆ ವಿಷ್ಣು ನಾಯ್ಕ ಅವರು ೮೦ ವಸಂತಗಳನ್ನು ಪೂರೈಸುವ ಸಂದರ್ಭದಲ್ಲಿ ಅವರ ಸಮಗ್ರ ಸಾಹಿತ್ಯದ ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಬೇಕು ಎಂಬ ಪ್ರಸ್ತಾಪವನ್ನು ಸಭೆ ಸರ್ವಾನುಮತದಿಂದ ಸ್ವೀಕರಿಸಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಜಗದೀಶ ನಾಯಕ ವಂದಿಸಿದರು.
