ಮಹಿಳಾ ಕಂಡಕ್ಟರನಿಂದ ಹಲ್ಲೆ ಪ್ರಕರಣ : 

ನನ್ನ ಪತ್ನಿಯಿಂದ ಯಾವುದೇ ತಪ್ಪು ನಡೆದಿಲ್ಲ.

ಇಲಾಖೆಯವರ ಒಳ ಸಂಚಿನಿಂದ ತೆಜೋವಧೆ ನಡೆದಿದೆ.

ಅಂಕೋಲಾ: ಇಲ್ಲಿಯ  ಬಸ್ ನಿಲ್ದಾಣದಲ್ಲಿ  ಬುಧವಾರ ಮಹಿಳಾ  ನಿರ್ವಾಹಕಿಯೊಬ್ಬಳು ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು. ಆದರೆ ನನ್ನ ಪತ್ನಿ ಪಲ್ಲವಿ ಬಿ.ಎಸ್. ಮೇಲೆ ಆ ಪ್ರಯಾಣಿಕ ಮಾಡಿದ ಅಸಭ್ಯ ಕಿರುಕುಳದಿಂದ ರೊಚ್ಚಿಗೆದ್ದು ಅವನ ಕೊರಳು ಪಟ್ಟಿ ಹಿಡಿದಿದ್ದು ನಿಜಾ. ಆದರೆ ಪ್ರಯಾಣಿಕನ ಮೇಲೆ ದೌರ್ಜನ್ಯ ನಡೆಸಿಲ್ಲ ಎಂದು ನಿರ್ವಾಹಿಕಯ ಪತಿ ಎಚ್. ನಾಗರಾಜ್ ಸ್ಪಷ್ಠನೆ ನೀಡಿದ್ದಾರೆ. 

ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಆತ ನನ್ನ ಪತ್ನಿಯ ಪಕ್ಕದ ಸೀಟಿನಲ್ಲಿ ಕುಳಿತಿದ್ದ. ಬಸ್ ಬರುಬರುತ್ತಲೆ ದೈಹಿಕವಾಗಿ ಸ್ಪರ್ಷಿಸಿ ಅಸಭ್ಯ ವರ್ತನೆ ಮಾಡುತ್ತ ಬಂದಿದ್ದಾನೆ.

ಆಕೆ ಇದನ್ನು ದೊಡ್ಡದು ಮಾಡುವುದು ಬೇಡ ಎಂದು ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದಾಳೆ. ಆದರೆ ಅಂಕೋಲಾ ಹತ್ತಿರ ಬರುತ್ತಿದ್ದಂತೆ ಆ ಪ್ರಯಾಣಿಕನ ಕಿರುಕುಳ ಹೆಚ್ಚಾಗುತ್ತ ಸಾಗಿತು. ಆಗ ನನ್ನ ಪತ್ನಿಯ ಸಹನೆ ಮೀರಿತ್ತು. ಕೋಪ ಬಂದು ಆತನ ಕೊರಳ ಪಟ್ಟಿ ಹಿಡಿದು ಎಳೆದು ತಂದಿದ್ದಾಳೆ. ಯಾವುದೇ ಮಹಿಳೆಯಾದರೂ ಸಹ ತನ್ನ ಮೇಲೆ ದೈಹಿಕ ಕಿರುಕುಳವಾದರೆ ಎಷ್ಟರಮಟ್ಟಿಗೆ ಸಹಿಸಿಕೊಳ್ಳಲು ಸಾಧ್ಯ? ಇಷ್ಟೆಲ್ಲಾ ಮಾಡಿಯೂ ಆ ಪ್ರಯಾಣಿಕ ತಾನು ಏನು ಮಾಡಿಯೇ ಇಲ್ಲ ಎಂಬಂತೆ ನಟಿಸಿದ್ದಾನೆ. 

ಹೀಗಾಗಿ ನನ್ನ ಪತ್ನಿಯ ಮೇಲೆ ನಮ್ಮದೇ ಸಾರಿಗೆ ಇಲಾಖೆಯವರ  ಒಳ ಸಂಚಿನಿಂದಲೆ ಈ ರೀತಿಯ ಸುಳ್ಳು ಆರೋಪ ಮಾಡಿ ನಮ್ಮ ತೇಜೋವಧೆಗೆ ಪ್ರಯತ್ನಿಸಿದ್ದಾರೆ. 

ನನ್ನ ಪತ್ನಿ 9 ವರ್ಷದಿಂದ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯಲ್ಲಿ ದಕ್ಷವಾಗಿ ಕಾರ್ಯ ನಿರ್ವಹಿಸಿ ಇಲಾಖೆಯಲ್ಲಿ ಪ್ರಶಂಸೆಗೆ ಪಾತ್ರರಾದವರು, ಇದುವರೆಗೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ, ನಾವೇ ಇತರರಿಗೆ ಹಲವಾರು ಬಾರಿ ಸಹಾಯ ಮಾಡಿ ಸಂಸ್ಥೆಯಲ್ಲಿ ಹಾಗೂ ಸಾಮಾಜಿಕವಾಗಿ ಹೆಸರು ಮಾಡಿದ್ದೇವೆ. ಆದರೆ ಇಂತಹ ಸುಳ್ಳು ಆರೋಪ ನಮ್ಮ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಈ ರೀತಿ ತೇಜೋವಧೆ ಮಾಡುವುದನ್ನು ನಾನು ಸಹಿಸುವುದಿಲ್ಲ. 

ನಾನು ಕೂಡ 14 ವರ್ಷದಿಂದ ಅಂಕೋಲಾ ಡಿಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಅನೇಕ‌ ಬಾರಿ ಉತ್ತಮ‌ ನಿರ್ವಾಹಕ ಪ್ರಶಸ್ತಿಯು ಅರಸಿ ಬಂದಿದೆ. ಇವೆಲ್ಲವನ್ನು ಸಹಿಸದ ನಮ್ಮ ಇಲಾಖೆಯ ಕೆಲ ಸಿಬ್ಬಂದಿಗಳ ಒಳ  ಸಂಚು ನಾವು ಅರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

——–

ಪ್ರಕರಣ ಏನಾಗಿತ್ತು..? ಅಂಕೋಲಾ ಬಸ್ ನಿಲ್ದಾಣದಲ್ಲಿ  ಬುಧವಾರ ಮಹಿಳಾ  ನಿರ್ವಾಹಕಿಯೊಬ್ಬಳು ಪ್ರಯಾಣಿಕನ ಮೇಲೆ ಹಲ್ಲೆ  ನಡೆಸಿದ ಸುದ್ದಿ ಜಿಲ್ಲೆಯಾದ್ಯಂತ ಸುದ್ದಿಯಾಗಿತ್ತು. ಮಹಿಳಾ ನಿರ್ವಾಹಕಿ ಕುಮಟಾದಿಂದ ಅಂಕೋಲಾ ಕಡೆಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬನ ಕೊರಳ ಪಟ್ಟಿ ಹಿಡಿದು ಬಸ್ ನಿಂದ ಕೆಳಗೆ ಎಳೆದುಕೊಂಡು ಬಂದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಸುದ್ದಿ ತಿಳಿದ ಆಕೆಯ ಪತಿ ತನ್ನ ಪತ್ನಿಗೆ  ಬಂದ ಆರೋಪದ ಬಗ್ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.