ರಾಘು ಕಾಕರಮಠ.
ಅಂಕೋಲಾ : ಬೆಳೆಗಾರರ ಸಮಿತಿಯ ಆಶ್ರಯದಲ್ಲಿ ವಂದಿಗೆಯಲ್ಲಿ ಏರ್ಪಡಿಸಲಾಗಿದ್ದ ಕೃಷಿ ಉತ್ಸವವು ಅರ್ಥಪೂರ್ಣವಾಗಿ ನಡೆಯಿತು. ವಿದ್ಯಾರ್ಥಿಗಳನ್ನು ಗದ್ದೆಗೆ ಇಳಿಸಿ, ಅವರಿಂದಲೆ ನಾಟಿ ಮಾಡಿಸುವ ಮೂಲಕ ಕೃಷಿ ಜಾಗೃತಿಯ ಅಭಿಯಾನಕ್ಕೆ ಕಾರ್ಯಕ್ರಮ ಮುನ್ನುಡಿ ಬರೆಯಿತು.
ಕೃಷಿ ಹಬ್ಬಕ್ಕೆ ಚಾಲನೆ ನೀಡಿದ ತಾಲೂಕಾ ದಂಡಾಧಿಕಾರಿ ಪ್ರವೀಣ ಹುಚ್ಚಣ್ಣನವರ ಮಾತನಾಡಿ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ದೇಶದ ಅನ್ನದ ಭವಿಷ್ಯಕ್ಕಾಗಿ ಚಿಂತಿಸುವ ಉದಾತ್ತ ಕಾರ್ಯದೊಂದಿಗೆ, ನ್ಯಾಯವಾದಿ ನಾಗರಾಜ್ ನಾಯಕ ಅವರ ನೇತ್ರತ್ವದಲ್ಲಿ ಕೃಷಿ ಉತ್ಸವಕ್ಕೆ ಚಾಲನೆ ದೊರೆತಿರುವದು ಮಾದರಿಯಾಗಿದೆ ಎಂದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರ ನಾಯ್ಕ ಮಾತನಾಡಿ ಕೃಷಿ ಕ್ಷೇತ್ರಕ್ಕೆ ಹೊಸ ತಂತ್ರಜ್ಞಾನ ಹಾಗೂ ಪ್ರಯೋಗಗಳು ಬಂದಿದ್ದರೂ ಸಹ ಜನರು ಕೃಷಿಯತ್ತ ದೂರ ಸರಿಯುತ್ತಿರುವದು ದುರ್ದೈವದ ಸಂಗತಿ. ಇತಂಹ ಕಾರ್ಯಗಳ ಆಂದೋಲನವನ್ನು ಬೆಳೆಗಾರರ ಸಮಿತಿ ರೂಪಿಸಿರುವದು ಹರ್ಷ ತಂದಿದೆ ಎಂದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸನ್ನಾ ಮಾತನಾಡಿ ಮುಂದಿನ ಪೀಳಿಗೆಯ ಭವಿಷ್ಯ ಎಂದರೆ ಅದು ಮಕ್ಕಳು. ಈ ಮಕ್ಕಳನ್ನೆ ಮುಂದಿಟ್ಟುಕೊAಡು ಕಾರ್ಯಕ್ರಮವನ್ನು ಸಂಘಟಿಸಿ ಅವರಲ್ಲಿ ಕೃಷಿಯ ಜ್ಞಾನವನ್ನು ಹುಟ್ಟು ಹಾಕಲು ಪ್ರೇರೆಪಿಸುತ್ತಿರುವದು ಅರ್ಥಪೂರ್ಣವಾಗಿದೆ ಎಂದರು.

ಕಾರ್ಯಕ್ರಮದ ಸಂಘಟಕರು, ಬೆಳೆಗಾರರ ಸಮಿತಿಯ ಅಧ್ಯಕ್ಷರು ಆದ ನಾಗರಾಜ್ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ ಕರಾವಳಿಯ ಭಾಗಗಳಲ್ಲಿ ಶೇ. 70 ರಷ್ಟು ಕೃಷಿ ಭೂಮಿ ಬಂಜರು ಬೀಳುತ್ತಿರುವದು ಅತ್ಯಂತ ನೋವಿನ ಸಂಗತಿಯಾಗಿದೆ. ಈ ಕಾರ್ಯಕ್ರಮದ ಮೂಲಕ ನಮ್ಮ ಸಂಸ್ಕçತಿ- ಪರಂಪರೆಯನ್ನು ಜಾಗೃತಗೊಳಿಸುವ ಜೊತೆಗೆ ದೇಶದ ಅನ್ನದ ಕಣಜವನ್ನು ತುಂಬಿಸುವ ಅಭಿಲಾಸೆಯೊಂದಿಗೆ ಬೆಳೆಗಾರರರ ಸಮಿತಿ ಕಾರ್ಯಕ್ರಮ ರೂಪಿಸಿದೆ ಎಂದರು.
ನಿವೃತ್ತ ಡಿಡಿಪಿಐ ನಾಗರಾಜ್ ನಾಯಕ ಮಾತನಾಡಿ ಸುಮಾರು 140 ದೇಶಗಳಿಗೆ ಭಾರತದಿಂದ ಅಕ್ಕಿ ರಪ್ತಾಗುತ್ತಿದೆ. ಆದರೆ ಹೀಗೆ ಕೃಷಿ ಕ್ಷೇತ್ರ ಹಿನ್ನಡೆ ಸರಿಯುತ್ತ ಹೋದರೆ, ಭಾರತವೆ ಅಕ್ಕಿಯನ್ನ ಆಮದು ಮಾಡಿ ಕೊಳ್ಳುವ ದುಸ್ಥಿತಿ ಬಂದರೂ ಅಚ್ಚರಿ ಪಡುವಂತಿಲ್ಲ ಎಂದರು.

ಊರಿನ ಹಿರಿಯ ಹೊನ್ನಪ್ಪ ನಾಯಕ, ಬೆಳೆಗಾರರ ಸಮಿತಿಯ ಗೌರವಾಧ್ಯಕ್ಷರಾದ ಹನುಮಂತ ಗೌಡ, ದೇವರಾಯ ನಾಯಕ, ಕೃಷಿ ಹಬ್ಬಕ್ಕೆ ಭೂಮಿ ನೀಡಿದ ಮಾಲಕ ವೆಂಕಟರಮಣ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕರು, ಬೆಳೆಗಾರರ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಪ್ರಮುಖರಾದ ಸುರೇಶ ನಾಯಕ. ಅಲಗೇರಿ, ಜಗಧೀಶ ನಾಯಕ. ಹೊಸ್ಕೇರಿ, ಬಿಂದೇಶ ನಾಯಕ, ರಾಮಾ ನಾಯಕ, ಧೀರಜ್ ಬಾನಾವಳಿಕರ, ಮಹಾಂತೇಶ ರೇವಡಿ, ವಿಕಾಶ ನಾಯಕ, ನಾರಾಯಣ ನಾಯಕ. ಸೂರ್ವೆ, ಗೋವಿಂದ ನಾಯಕ. ವಂದಿಗೆ, ನಿತ್ಯಾನಂದ ಗಾಂವಕರ, ಶಾಂತಾ ನಾಯಕ, ಸಂಜೀವ ಗುನಗಾ, ಶಂಕರ ಗೌಡ, ವಿನಾಯಕ. ನಾಯಕ. ಮೊಗಟಾ, ಅಂಕೋಲಾ ನಂ 2 ಶಾಲೆಯ ಶಿಕ್ಷಕರು, ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
