ಕಾರವಾರ: ನಿರ್ಗಮಿತ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಜನ್ಮ ದಿನದ ನಿಮಿತ್ತ ಜನಶಕ್ತಿ ವೇದಿಕೆಯ ಕಾರ್ಯಕರ್ತರು ಸನ್ಮಾನಿಸಿ ಶುಭಾಶಯ ಕೋರಿ, ಜಿಲ್ಲೆಯಿಂದ ಬೀಳ್ಕೊಟ್ಟರು.
ಜಿಲ್ಲಾಧಿಕಾರಿ ಬಂಗಲೆಯಲ್ಲಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಧರ್ಮಪತ್ನಿ ಹಾಗೂ ಮಗಳು ಸನ್ನಿಧಿಯ ಜೊತೆಗೂಡಿ ಶಾಲು ಹೊದಿಸಿ, ಪೇಟ ತೊಡಿಸಿ, ಉತ್ತರ ಕನ್ನಡದ ಉತ್ಪನ್ನಗಳಾದ ಜೇನುತುಪ್ಪ, ಅಪ್ಪೆಮಿಡಿ ಉಪ್ಪಿನಕಾಯಿ, ಗಳನ್ನ ಉಡುಗೊರೆಯಾಗಿ ನೀಡಿ ಸನ್ಮಾನಿಸಲಾಯಿತು. ಅವರಿಗೆ ಜನ್ಮ ದಿನದ ಶುಭಾಶಯ ಕೋರಿ, ಒಳಿತಾಗಲಿ ಎಂದು ಹಾರೈಸಲಾಯಿತು.

ಇದೇ ವೇಳೆ ಮಾತನಾಡಿದ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಕವಳಿಕಟ್ಟಿಯವರು ಜಿಲ್ಲೆ ಕಂಡ ಕೆಲವು ಉತ್ತಮ ಜಿಲ್ಲಾಧಿಕಾರಿಗಳ ಪೈಕಿ ಒಬ್ಬರಾಗಿದ್ದರು. ಜನಪರವಾಗಿ, ಸ್ನೇಹಪರವಾಗಿದ್ದ ಅವರು, ಯಾವತ್ತೂ ಕಪ್ಪುಚುಕ್ಕೆ ತರುವಂಥ ಯಾವುದೇ ಕೆಲಸಗಳನ್ನು ಮಾಡಿರಲಿಲ್ಲ. ಜಿಲ್ಲೆಗೆ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಆಗಮಿಸಿ, ಚುನಾವಣೆಯನ್ನ ಸಮರ್ಥವಾಗಿ ನಿಭಾಯಿಸಿ, ಎಲ್ಲಿಯೂ ಯಾವುದೇ ಲೋಪಗಳಾಗದಂತೆ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ್ದರು ಎಂದರು.
ಚುನಾವಣೆ ಮುಗಿಯುತ್ತಿದ್ದಂತೆ ಇನ್ನಿತರ ಸರ್ಕಾರಿ ಕಾರ್ಯಕ್ರಮಗಳು, ಮಳೆ, ಪ್ರವಾಹ ಪರಿಸ್ಥಿತಿಗಳನ್ನು ನೋಡುವಂತಾಯಿತು. ಬಿಡುವಿಲ್ಲದಂತೆ ಕರ್ತವ್ಯ ನಿರ್ವಹಿಸಿದ್ದ ಅವರಿಗೆ ಜಿಲ್ಲೆಯನ್ನ ಸುತ್ತಾಡಿ ಇಲ್ಲಿನ ಕಲೆ, ಸಂಪ್ರದಾಯಗಳನ್ನ ಅರಿಯುವಷ್ಟರಲ್ಲೇ ವರ್ಗಾವಣೆಯಾಗಿದ್ದು ಬೇಸರದ ಸಂಗತಿ. ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಬೇಕೆಂಬ ಉದ್ದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರ ಕರ್ತವ್ಯಪ್ರಜ್ಞೆ ಇತರ ಅಧಿಕಾರಿಗಳಿಗೂ ಮಾದರಿಯಾಗಿತ್ತು ಎಂದರು.
ಜನಶಕ್ತಿ ವೇದಿಕೆಯ ಪ್ರಮುಖರಾದ ರಾಮಾ ನಾಯ್ಕ, ಡಿ.ಕೆ.ನಾಯ್ಕ, ಸತೀಶ್ ಬೇಳೂರಕರ್, ಸೂರಜ್ ಕುರೂಮಕರ್ ಈ ವೇಳೆ ಇದ್ದರು.
