ಅಂಕೋಲಾ : ರೇಬಿಸ್ ರೋಗಕ್ಕೆ ತುತ್ತಾದ ಹಸವೊಂದು, ದಾರಿ ಹೋಕರ ಮೇಲೆ ದಾಳಿ ನಡೆಸಿ ನೆಲಕ್ಕುರುಳಿಸಿದ ಗಾಯಗೊಳಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.
ಪಟ್ಟಣದ ಪುರಸಭಾ ವ್ಯಾಪ್ತಿಯ ವಾಜಂತ್ರಿಕೇರಿಯಲ್ಲಿ ಬೀಡಾಡಿ ಹಸು ಕಳೆದ 4 ದಿನಗಳಿಂದ ವಾಸವಾಗಿತ್ತು ಎನ್ನಲಾಗಿದೆ. ಕಳೆದ 15 ದಿನಗಳ ಹಿಂದೆ ಒಂದು ಪುಟ್ಟ ಕರುವಿಗೆ ಈ ಹಸು ಜನ್ಮ ನೀಡಿತ್ತು ಎಂದು ಸ್ಥಳೀಯರು ಹೇಳುತ್ತಾರೆ.
ಅಂತೆಯೇ ತಾಯಿ ಹಸುವಿನ ಸಂಗಡ ಪುಟ್ಟ ಕರುವೊಂದು ಇದ್ದು, ತನ್ನ ಕರುವಿಗೆ ಯಾವುದೇ ತೊಂದರೆ ನೀಡದೆ ಇನ್ನುಳಿದ ಜಾನುವಾರುಗಳು ಪಕ್ಕಕ್ಕೆ ಬಂದರೆ ಅವುಗಳನ್ನು ಈ ಹಸು ಓಡಿಸಿಕೊಂಡು ಹೋಗಿ ನೆಲಕ್ಕೆ ಉರುಳಿಸುತ್ತಿರುವ ಘಟನೆ ಸಾರ್ವಜನಿಕರ ಮುಂದೆ ನಡೆದಿದೆ.

ಹಿಂದೂ ಜಾಗರಣಾ ವೇದಿಕೆಯ ಯುವಕರು ಈ ಹಸುವನ್ನು ನೋಡಿ ವಾಜಂತ್ರಿಕೇರಿಯ ಕಟ್ಟೆಯ ಪಕ್ಕದಲ್ಲಿ ದೊಡ್ಡದಾದ ಹಗ್ಗದಿಂದ ಪರಿಶ್ರಮಪಟ್ಟು ಕಟ್ಟಿ ಪಶುಸಂಗೋಪನಾ ಇಲಾಖೆ, ಪುರಸಭೆಯವರಿಗೆ ದೂರವಾಣಿ ಮೂಲಕ ಕರೆ ಮಾಡಿದಾಗ ಅವರು ಸ್ಥಳಕ್ಕೆ ಬಂದು ಈ ಹಸುವನ್ನು ಯಾವ ರೀತಿ ನೋಡಿಕೊಳ್ಳುವುದು ಎಂದು ವಿಚಾರಿಸುತ್ತಿರುವಾಗಲೇ ಈ ಹಸು ತಪ್ಪಿಸಿಕೊಂಡು ಹೋಗಿ ದಾರಿಹೋಕ ಯುವಕನನ್ನು ಎತ್ತಿ ಬದಿಯಲ್ಲಿ ಎಸೆಯಿತು.
ನೋಡು ನೋಡುತ್ತಿರುವಾಗಲೇ ಈರ್ವರು ಮಹಿಳೆಯರನ್ನು ನೆಲದ ಮೇಲೆ ಉರುಳಿಸುತ್ತಾ ಅಂಬಾರಕೊಡ್ಲದವರೆಗೆ ಓಡುತ್ತಾ ತನ್ನ ಕುರುವಿನೊಂದಿಗೆ ಸಾಗಿತು. ಇದರ ಜೊತೆಯಲ್ಲಿಯೇ ಹಲವು ಯುವಕರು, ಸ್ಥಳೀಯರು ಸಾಗಿದರಾದರೂ, ಇದು ಓಡುವ ವೇಗಕ್ಕೆ ಅದನ್ನು ಹಿಂಬಾಲಿಸಲಾಗಲಿಲ್ಲ.
ಈ ಹಸುವಿಗೆ ರೇಬಿಸ್ ಕಾಯಿಲೆ ಭಾದಿಸಿದೆ ಎಂದು ಅರ್ಥೈಸಿಕೊಳ್ಳದ ನಾಗರಿಕರಿಗೆ ಸಾರ್ವಜನಿಕರೆ ತಿಳಿಸುತ್ತಾ ಹಸುವನ್ನು ಹಿಂಬಾಲಿಸಿದರು. ಓಡುತ್ತಾ ಅಂಬಾರಕೊಡ್ಲ ತಲುಪಿದ ಹಸು ಓಣಿಯೊಂದಕ್ಕೆ ನುಗ್ಗಿತು. ಅಂತೂ ಅಂಬಾರಕೊಡ್ಲದ ಓಣಿಯಲ್ಲಿ ನುಗ್ಗಿದ ಹಸುವನ್ನು ಹಗ್ಗವನ್ನು ಬಳಸಿ ಈ ಹಸುವನ್ನು ಹಿಡಿದು ಮರಕ್ಕೆ ಕಟ್ಟಿದರು. ಕೆಲಕಾಲ ಪಟ್ಟಣದಲ್ಲಿ ಈ ಹಸುವಿನ ರಂಪಾಟಕ್ಕೆ ಸಾರ್ವಜನಿಕರು ಹೆದರಿ ತಮ್ಮ ತಮ್ಮ ಮನೆಯ ಗೇಟ್‌ಗಳನ್ನು ಭದ್ರವಾಗಿಸಿಕೊಂಡರು.
ಪುರಸಭೆಯ ಸದಸ್ಯರಾದ ಪ್ರಕಾಶ ಗೌಡ, ಮಂಜುನಾಥ ನಾಯ್ಕ, ಕಾರ್ತಿಕ ನಾಯ್ಕ, ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಕಿರಣ ನಾಯ್ಕ, ಸುಂದರ ಖಾರ್ವಿ, ಮೂರ್ತಿ ನಾಯ್ಕ. ಲಕ್ಷಿö್ಮÃಕಾಂತ ನಾಯ್ಕ, ಗೋಪೇಶ ನಾಯ್ಕ, ಗಣೇಶ ನಾಯ್ಕ, ರವಿ ವಾಜಂತ್ರಿ ಸೇರಿದಂತೆ ಇತರ ಸ್ಥಳೀಯರು ಸೇರಿ ಈ ಹಸುವನ್ನು ಕಟ್ಟುವಲ್ಲಿ ಯಶಸ್ವಿಯಾದರು.
ರೇಬಿಸ್ ಕಾಯಿಲೆ ಭಾದಿಸಿದ ಮೇಲೆ ಯಾವುದೇ ಪ್ರಾಣಿಗಳನ್ನು ಉಳಿಸುವುದು ಕಷ್ಟ. ಈ ಹಸು ಇನ್ನುಳಿದ ಹಸುಗಳಿಗೂ ತೊಂದರೆ ನೀಡುವುದಕ್ಕೂ ಮೊದಲು ಅದನ್ನು ಕಟ್ಟಬೇಕು. ಇದರ ಸಮೀಪ ಬಂದ ಇನ್ನುಳಿದ ಜಾನುವಾರುಗಳಿಗೂ ಲಸಿಕೆ ನೀಡಬೇಕಾಗುತ್ತದೆ. ವೈದ್ಯರ ಸಲಹೆಯನ್ನು ಈ ವಿಚಾರದಲ್ಲಿ ಪಡೆಯುವುದು ಮುಖ್ಯ.
– ಎಂ.ಎ0.ಹೆಗಡೆ ಜಾನುವಾರು ಅಭಿವೃದ್ಧಿ ಅಧಿಕಾರಿ.
