ಅಂಕೋಲಾ : ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯನ್ನು ವೃತ್ತಿಯಾಗಿ ಸ್ವೀಕರಿಸಿ ನಿರಂತರವಾಗಿ ಪರೀಕ್ಷೆಗಳನ್ನು ಬರೆಯುತ್ತಿರಬೇಕು. ಯಾವುದೇ ಪರೀಕ್ಷೆಯಲ್ಲಿಯ ಯಶಸ್ಸು ಕೇವಲ ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯವಿಲ್ಲ. ಸುಮಾರು 20 % ನಿರ್ಣಾಯಕ ಅಂಕಗಳು ಪರೀಕ್ಷಾ ದಿನದಂದಿನ ವಿದ್ಯಾರ್ಥಿಯ ಮನಸ್ಸಿನ ಉಪಸ್ಥಿತಿ, ಉದ್ವೇಗ ಮುಕ್ತ ಮನಸ್ಸು, ಜಾಗೃತ ಮನಸ್ಥಿತಿಯಿಂದ ಸಾಧ್ಯ ಎಂದು ಅಂಕೋಲಾ ಠಾಣೆಯ ಪಿಎಸೈ ಉದ್ದಪ್ಪ ದರೆಪ್ಪನವರ್ ಹೇಳಿದರು.
ಅವರು ಪಟ್ಟಣದ ಶ್ರೀರಾಮ ಸ್ಟಡಿ ಸರ್ಕಲ್ ಅಂಕೋಲಾ ಮತ್ತು ಯೋಜನಾ ಉದ್ಯೋಗ ವಿನಿಮಯ ಕಚೇರಿ ಕಾರವಾರ ಇವುಗಳ ಸಂಯುಕ್ತ ಆಶ್ರಯದಲ್ಲಿ 10 ದಿನಗಳ ಉಚಿತ ‘ಸ್ಟಡಿ ಸರ್ಕಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಸಿದ್ದ ಶ್ರೀರಾಮ ಸ್ಟಡಿ ಸರ್ಕಲ್‌ನ ನಿರ್ದೇಶಕ ಸೂರಜ ನಾಯಕ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ‘ಆರಾಮ ವಲಯದಿಂದ’ ಹೊರಬಂದು ಕನಿಷ್ಟ 6 ತಿಂಗಳು ಆಳವಾಗಿ ಅಭ್ಯಸಿಸಿದರೆ ಯಶಸ್ಸು ನಿಶ್ಚಿತ ಎಂದರು.
ಕಾರವಾರದ ಉದ್ಯೋಗ ವಿನಿಮಯ ಕಚೇರಿಯ ವಿನೋದ ನಾಯ್ಕ ಮಾತನಾಡಿ ಸುಮಾರು 2 ವರ್ಷಗಳಿಂದ ಸರಕಾರಿ ಉದ್ಯೋಗವಕಾಶ ಕಡಿಮೆಯಿದ್ದು, ಈ ವರ್ಷದಿಂದ ಸತತವಾಗಿ ನೇಮಕಾತಿ ನಡೆಯುವ ಸಾಧ್ಯತೆಯಿರುವುದರಿಂದ ಹಾಜರಾದ ವಿದ್ಯಾರ್ಥಿಗಳು ಕಾರ್ಯಕ್ರಮದ ಸಂಪೂರ್ಣ ಲಾಭ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ದಿವ್ಯಾ ಭಟ್ ಯಲ್ಲಾಪುರ ಪ್ರಾರ್ಥಿಸಿದರು. ಉದ್ಯೋಗ ವಿನಿಮಯ ಕಚೇರಿ ಶಿವರಾಜ ವಂದಿಸಿದರು. ವಿದ್ಯಾ ಭಟ್ಕಳ ನಿರೂಪಿಸಿದರು. ಶಿವಮೊಗ್ಗಾ, ಹಾವೇರಿ, ಭಟ್ಕಳ, ಉಡುಪಿ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು ಹಾಜರಾಗಿ ಶಿಬಿರದ ಪ್ರಯೋಜನ ಪಡೆದರು.
ಉಚಿತ ‘ಸ್ಟಡಿ ಸರ್ಕಲ್ ಕಾರ್ಯಕ್ರಮದಲ್ಲಿ ಎಸ್‌ಡಿಎ, ಎಫ್‌ಡಿಎ, ಪಿಎಸ್‌ಐ ಪೊಲೀಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 2023 ರಲ್ಲಿ ಪ್ರೌಡಶಾಲೆಗೆ ನೇಮಕಾತಿಯಲ್ಲಿ ಆಯ್ಕೆಯಾದ 69 ವಿದ್ಯಾರ್ಥಿಗಳಿಗೆ ಮತ್ತು ಬೋಧಕ ಸಿಬ್ಬಂದಿಗಳನ್ನು ಗೌರವಿಸಲಾಯಿತು.
