ವರದಿ ದಿನಕರ ನಾಯ್ಕ ಅಲಗೇರಿ

ಅಂಕೋಲಾ: ತಾಲೂಕಿನ ಅಲಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ಮಶಾನದ ಹತ್ತಿರದಲ್ಲಿ ಹಸುವೊಂದು ನಾಲ್ಕು ಕಾಲು ಕಟ್ಟಿರುವ ಸ್ಥಿತಿಯಲ್ಲಿ ಸಾವನ್ನಪ್ಪಿದ ಅಮಾನವೀಯ ಘಟನೆ ನಡೆದಿದೆ.
ಸಾಕಿದ ಹಸು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮಣ್ಣು ಮಾಡಿದರೆ ಹಣ ಖರ್ಚಾಗುತ್ತದೆ ಎನ್ನುವ ಲೆಕ್ಕಾಚಾರದಿಂದ ನಾಲ್ಕು ಕಾಲುಗಳನ್ನು ಕಟ್ಟಿ ಕಾಲುಗಳ ಮಧ್ಯೆ ಉದ್ದನೆಯ ಕಟ್ಟಿಗೆ ನುಗ್ಗಿಸಿ ಹೆಗಲ ಮೇಲೆ ಹೊತ್ತುಕೊಂಡು ಬಂದು ಯಾರು ಇಲ್ಲದ ಸಮಯದಲ್ಲಿ ಅಲಗೇರಿಯ ಹತ್ತಿರದ ರಸ್ತೆ ಬದಿಯ ಕಾಲುವೆಯಲ್ಲಿ ಬಿಸಾಡಿ ಹೋಗಿದ್ದಾರೆ ಎನ್ನಲಾಗಿದೆ.
ಬುಧವಾರ ಬೆಳಗಿನ ಹೊತ್ತಿಗೆ ಕಂಡುಬಂದ ಈ ಘಟನೆ ಹಲವಾರು ಅನುಮಾನಗಳಿಗೆ ಕಾರಣವಾಗಿದ್ದು ಹತ್ತಿರದ ಅಲಗೇರಿ, ಬಾಳೆಗುಳಿ, ಅವರ್ಸಾ, ಹಟ್ಟಿಕೇರಿ ಊರುಗಳ ನಿದ್ದೆಗೆಡಿಸಿದೆ.
ಕರುಣೆ, ಮಾನವೀಯತೆ ಅನುಕಂಪ ಮರೆತು ಕ್ರೂರ ಪ್ರಾಣಿಗಳು ಸಹ ಮಾಡದ ಇಂತಹ ಹೀನ ಕೃತ್ಯ ಎಸಗಿರುವದು ನಿಜಕ್ಕೂ ಅರಗಿಸಿಕೊಳ್ಳಲಾಗದ ವರ್ತನೆಯಾಗಿದೆ.
ಬದುಕಿರುವ ತನಕ ಎಲ್ಲ ರೀತಿಯ ಪ್ರಯೋಜನ ಪಡೆದು ಸತ್ತಾಗ ಕೊನೆ ಪಕ್ಷ ಮಣ್ಣು ಮಾಡುವ ವ್ಯವಧಾನವೂ ಇಲ್ಲದ ಇಂತಹ ಕ್ರೂರ ವ್ಯಕ್ತಿಗಳು ನಿಜಕ್ಕೂ ಸಮಾಜಕ್ಕೆ ಮಾರಕ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಮಾತನಾಡಿದ ಪ್ರಾಣಿ ಪ್ರೇಮಿ ಸತೀಶ್ ನಾಯ್ಕ, ಪರ ಊರಿನಿಂದ ಇಲ್ಲಿಯ ವರೆಗೆ ಬಂದು ಇಂತಹ ಕೃತ್ಯ ಮಾಡಲು ಸಾಧ್ಯವಿಲ್ಲ. ಊರಿನಲ್ಲಿಯೇ ಇರುವ ಕೆಲವು ನಿರ್ದಯಿ ದುಷ್ಟರಿಂದಲೆ ಈ ಕೃತ್ಯ ನಡೆದಿರಬಹುದು ಎಂದು ಅಭಿಪ್ರಾಯಪಟ್ಟಿದ್ದು ಈ ಗೋವಿಗೆ ಆದ ಮರಣದ ರೀತಿಯಲ್ಲೇ ಅವರಿಗೂ ಸಹ ಮರಣ ಉಂಟಾಗಲಿ ಎಂದು ತಮ್ಮ ಕ್ರೋಧ ಹಾಗೂ ಪ್ರಾಣಿಗಳ ಮೇಲಿನ ಕಳಕಳಿಯನ್ನು ಹೊರಹಾಕಿದ್ದಾರೆ.
ಪಂಚಾಯತ್ ಸಿಬ್ಬಂದಿಯೂ ಆಗಿರುವ ಇವರು ಅಲಗೇರಿ ಗ್ರಾಮ ಪಂಚಾಯತ್ ಅಭವೃದ್ಧಿ ಅಧಿಕಾರಿ ಗಿರೀಶ್ ತಳವಾರ್ ಮಾರ್ಗದರ್ಶನದಲ್ಲಿ ಇನ್ನೋರ್ವ ಪ್ರಾಣಿ ಪ್ರೇಮಿ ಮಂಗೇಶ್ ನಾಯ್ಕ ಅವರ ಸಹಕಾರದಲ್ಲಿ ಹಸುವನ್ನು ಮಣ್ಣು ಮಾಡುವ ಮೂಲಕ ಮುಕ್ತಿ ನೀಡಿದ್ದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
ಬದುಕಿರುವಾಗ ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಂಡು ಸತ್ತಾಗ ಕಿಂಚಿತ್ ಮನುಷ್ಯತ್ವವನ್ನು ತೋರದೆ ಪಶುಗಳನ್ನು ಅನಾಥವಾಗಿ ಬಿಸಾಡುವ ಇಂತಹ ದುಷ್ಕೃತ್ಯಕ್ಕೆ ಕಡಿವಾಣ ಬೀಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.



