ವರದಿ: ದಿನಕರ ನಾಯ್ಕ ಅಲಗೇರಿ

ಅಂಕೋಲಾ: ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ದೇಶದ ಹಲವಾರು ಜಟಿಲ ಪ್ರದೇಶಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಾಗರಾಜ ನಾಯ್ಕ ಅವರನ್ನು ಭಾರತೀಯ ಜೀವ ವಿಮಾ ನಿಗಮ (LIC) ಅಂಕೋಲಾ ಶಾಖೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ರೂವಾರಿ LIC ಅಂಕೋಲಾ ಶಾಖೆಯ ಹಿರಿಯ ಅಭಿವೃದ್ದಿ ಅಧಿಕಾರಿ ಸಾಯಿಶ ಕುಮಾರ ಕೇಣಿಕರ್ ಪ್ರಾಸ್ತಾವಿಕ ಮಾತನಾಡಿ ಇಂದಿನ ದಿನಗಳಲ್ಲಿ ಯುವಕ ಯುವತಿಯರು ಮೊಬೈಲ್ ಗಳ ದಾಸರಾಗಿದ್ದಾರೆ. ಕೇವಲ ಮನರಂಜನೆ ಹಾಗೂ ಅನಗತ್ಯ ಚಟುವಟಿಕೆಗಳಿಗೆ ಬಳಸುತ್ತಾರೆ ಆದರೆ ತಮ್ಮ ಜೀವನದ ಅದೇ ಯುವ ವಯಸ್ಸಿನಲ್ಲಿ ನಾಗರಾಜ ನಾಯ್ಕ ಅವರು ದೇಶದ ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ದೇಶ ಸೇವೆ ಮಾಡಿರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ LIC ಕುಮಟಾ ಶಾಖೆಯ ಸೀನಿಯರ್ ಬ್ರಾಂಚ್ ಮ್ಯಾನೇಜರ್ ಶ್ರೀಕೃಷ್ಣ ಭಟ್ ಮಾತನಾಡಿ ವಿಮಾ ಸಂಸ್ಥೆಯು ಸಾಮಾನ್ಯ ಜನರ ಜೀವ ಭದ್ರತೆ ಹಾಗೂ ಆದಾಯ ತರುವ ಉದ್ಯೋಗವಾಗಿ ಬೆಳೆದು ಬಂದ ಇತಿಹಾಸವನ್ನು ವಿವರಿಸಿದರು.

LIC ಅಂಕೋಲಾ ಶಾಖೆಯ ಬ್ರಾಂಚ್ ಮ್ಯಾನೇಜರ್ ವಿ.ಜಿ. ಭಟ್ ಮಾತನಾಡಿ ಸೈನಿಕನು ದೇಶಕ್ಕೆ ಭದ್ರತೆ ಒದಗಿಸಲು ಚಳಿ , ಮಳೆ ಲೆಕ್ಕಿಸದೆ ಶೌರ್ಯದಿಂದ ದಕ್ಷವಾಗಿ ಕೆಲಸ ಮಾಡುತ್ತಾನೆ. ದೇಶದ ಭದ್ರತೆಗೆ ಬೇಕಾದ ಆರ್ಥಿಕ ಸಹಾಯ ಮಾಡುವುದರಲ್ಲಿ LIC ಸಂಸ್ಥೆಯು ಅತ್ಯಂತ ನಿರ್ಣಾಯಕ ಪಾತ್ರ ವಹಿಸಿದೆ ಎಂದರು.

ಈ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ವಿಮಾ ಪ್ರತಿನಿಧಿಗಳಾದ ಎಚ್. ಆರ್. ಮಂಜುನಾಥ, ಚೈತ್ರ ನಾಯಕ, ರೋಹಿದಾಸ ನಾಯಕ ಹಾಗೂ ದಿನಕರ ನಾಯ್ಕ ಹಾಗೂ ಇತರರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಸೈನಿಕ ನಾಗರಾಜ ನಾಯ್ಕ ನಾನು ಸೇನೆಗೆ ಆಯ್ಕೆಯಾಗಿ ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾದಾಗ ನನಗೆ ಸಿಕ್ಕಿದ ಮೊದಲ ಡ್ಯೂಟಿ ಲೊಕೇಶನ್ ಜಮ್ಮು ಮತ್ತು ಕಾಶ್ಮೀರ. ಅಲ್ಲಿ ಹಲವಾರು ಕಷ್ಟ ನಷ್ಟಗಳನ್ನು ಅನುಭವಿಸಿ ಸೇವೆ ಸಲ್ಲಿಸಿದ ಮೇಲೆ ಸೇನೆಯು ನನ್ನನು ಮಾನಸಿಕ ಹಾಗೂ ದೈಹಿಕವಾಗಿ ಸಾಧೃಢವಾಗುವಂತೆ ಮಾಡಿತು. ತದನಂತರ 22 ವರ್ಷಗಳ ಕಾಲ ದೇಶದ ಹಲವಾರು ದುರ್ಗಮ ಪ್ರದೇಶಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದಿದ್ದೇನೆ. ನನ್ನ ಸೇವೆಯನ್ನು ಗುರುತಿಸಿ ನನಗೆ ಮಾಡಿದ್ದಕ್ಕೆ ಭಾರತೀಯ ಜೀವ ವಿಮಾ ನಿಗಮ ಅಂಕೋಲಾ ಶಾಖೆಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ವಿಮಾ ಪ್ರತಿನಿಧಿ ಶ್ರೀಕಾಂತ್ ದುರ್ಗೇಕರ್ ನಿರೂಪಿಸಿದರು, ದಿನಕರ ನಾಯ್ಕ ಸ್ವಾಗತಿಸಿದರು, ವಿಷ್ಣು ದೇವನಮನೆ ಸನ್ಮಾನಿತರ ಪರಿಚಯ ವಾಚಿಸಿದರು, ಶಂಕರ್ ಗೌಡ ವಂದಿಸಿದರು. ಈ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯ ಓಂ ಸಾಯಿ ಘಟಕದ ಎಲ್ಲ ವಿಮಾ ಪ್ರತಿನಿಧಿಗಳು ಉಪಸ್ಥಿತರಿದ್ದರು.