ವರದಿ: ದಿನಕರ ನಾಯ್ಕ ಅಲಗೇರಿ
ಅಂಕೋಲಾ: ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇಲ್ಲದೆ ಶಾಲೆಗಳನ್ನು ಮುಚ್ಚುತ್ತಿರುವ ಸಮಯದಲ್ಲಿ ತಾಲೂಕಿನ ಅಲಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ವಿಧ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸ್ವಾತಂತ್ರೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದು ಗುಣಾತ್ಮಕ ಬದಲಾವಣೆಗೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಉಮೇಶ ಆಗೇರ, ಇಂದಿನ ದಿನಗಳಲ್ಲಿ ಪೋಷಕರಿಗೆ ಸರಕಾರಿ ಶಾಲೆಗಳು ರುಚಿಸುತ್ತಿಲ್ಲ ಹೀಗಿರುವಾಗ ಸ.ಹಿ.ಪ್ರಾ.ಶಾಲೆ ಅಲಗೇರಿ 100 ಕ್ಕೂ ಹೆಚ್ಚಿನ ಮಕ್ಕಳನ್ನು ಹೊಂದಿದ್ದು ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಶಾಲೆಯಾಗಿ ಹೊರಹೊಮ್ಮಿದ್ದು ತಾಲೂಕಿಗೆ ಮಾದರಿಯಾಗಿದೆ ಎಂದರು.
ದಾನಿಗಳಿಂದ ಶಾಲಾ ಪರಿಕರಗಳ ಕೊಡುಗೆ:ನಮ್ಮ ಶಾಲೆ ನಮ್ಮ ಹೆಮ್ಮೆ ಘೋಷವಾಕ್ಯದಿಂದ ಪ್ರೇರಣೆಗೊಂಡ ಹಲವಾರು ದಾನಿಗಳು ಶಾಲೆಗೆ ಅಗತ್ಯವಿರುವ ಹಲವು ಪರಿಕರಗಳನ್ನು ನೀಡಿದರು. ಅದರಲ್ಲಿ ಊರಿನ ಹಿರಿಯರಾದ ಗಿರಿಯಪ್ಪ ರಾಮ ನಾಯ್ಕ 7500 ರು ಮೌಲ್ಯದ ಬ್ಯಾಂಡ್ ಸೆಟ್ ನೀಡಿ ಶಾಲೆಯ ಅಭಿವೃದ್ಧಿಗೆ ತಮ್ಮ ಸಹಕಾರ ಯಾವತ್ತೂ ಇದೆ ಎಂಬುದನ್ನು ಸಾದರಪಡಿಸಿದರು.
ಎಲ್ಲಾ ವಿಧ್ಯಾರ್ಥಿಗಳಿಗೆ ಐ.ಡಿ. ಕಾರ್ಡ್ ವಿತರಿಸಿ ಮಾತನಾಡಿದ ಸಣ್ಣಮ್ಮ ದೇವಿ ತರುಣ ಮಿತ್ರ ಮಂಡಳಿಯ ಅಧ್ಯಕ್ಷ ದಿನಕರ ನಾಯ್ಕ ಪೋಷಕರು ಶಾಲೆಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕಾದರೆ ವಿಧ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವಾತಾವರಣ ಹಾಗೂ ಕಲಿಕಾ ಪರಿಕರಗಳ ಅವಶ್ಯಕತೆ ಇದೆ. ಇವೆಲ್ಲವೂ ಸಮತೋಲಿತ ಪ್ರಮಾಣದಲ್ಲಿದ್ದಾಗ ಮಾತ್ರ ಹೆಚ್ಚು ಮಕ್ಕಳು ಸರಕಾರಿ ಶಾಲೆಗೆ ದಾಖಲಾತಿ ಹೊಂದಲು ಸಹಕಾರಿ ಎಂದರು.
ಈ ಸಂದರ್ಭದಲ್ಲಿ ಇತರ ದಾನಿಗಳಾದ ಆನಂದು ಆರ್. ಗಾಂವಕರ ಕುಕ್ಕರ್, ರವಿ ಗಿರಿಯಪ್ಪ ನಾಯ್ಕ ಹಾಗೂ ನಿಲೇಶ್ ರಮೇಶ್ ನಾಯ್ಕ ತಲಾ 5000 ರೂ, ರಾಜು ಮಾದೇವ ನಾಯಕ, ಸಂಜೀವ ಗಣು ನಾಯ್ಕ, ಶಿವಾನಂದ ರಾಕು ಗೌಡ ಟೈ ಹಾಗೂ ಬೆಲ್ಟ್, ಯೋಗೇಶ್ ರಾಮಾ ನಾಯ್ಕ ನಲ್ಲಿ ರಿಪೇರಿ, ಸಂಜನಾ ಜೀವನ ನಾಯ್ಕ, ರಾಜು ಪುಂಡಲಿಕ ನಾಯ್ಕ ನಲಿಕಲಿ ಜಮಖಾನೆ ನೀಡುವುದರ ಜೊತೆಗೆ ಸರಕಾರಿ ಶಾಲೆ ಪ್ರೋತ್ಸಾಹಿಸಲು ತಮ್ಮ ಕಿರು ಸಹಾಯ ಮಾಡಿದರು.
ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಾಜು ಪುಂಡಲಿಕ ನಾಯ್ಕ ಮಾತನಾಡಿ ನೂತನವಾಗಿ ಶಾಲೆಗೆ ಆಗಮಿಸಿದ ಮುಖ್ಯಾಧ್ಯಾಪಕರ ಸಹಕಾರದಿಂದ ನಮ್ಮ ಶಾಲೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ವಾರ್ಷಿಕ ಪಲಿತಾಂಶದಲ್ಲು ಮೈಲುಗಲ್ಲು ಸಾಧಿಸಿದ್ದು ಈ ಸಾಧನೆಗೆ ಪ್ರಮುಖ ಕಾರಣ ಎಂದರೆ ಶಾಲೆಯ ಸಹ ಶಿಕ್ಷಕ ವರ್ಗದವರಾದ ವಿಜಯಲಕ್ಷ್ಮಿ ನಾಯಕ, ಪಿಲೀಪ್ ಫರ್ನಾಂಡಿಸ್, ಶುಭಾ ನಾಯಕ, ಭಾರತಿ ಬಂಟ್, ಪವಿತ್ರ ಪೀಲನಕರ್, ಮುಕ್ತಾ ಮಡಿವಾಳ ಅವರುಗಳನ್ನು ಸ್ಮರಿಸಿ ಹುರಿದುಂಬಿಸಿದರು.
ಗಮನ ಸೆಳೆದ ಕವಾಯತು:
ಸ್ವಾತಂತ್ರೋತ್ಸವದ ಶುಭ ಸಂದರ್ಭದಲ್ಲಿ ಏನಾದರೂ ವಿನೂತನ ಪ್ರಯೋಗ ಮಕ್ಕಳಿಂದ ಮಾಡಿಸಬೇಕೆಂಬ ದೃಷ್ಟಿಯಿಂದ ದೈಹಿಕ ಶಿಕ್ಷಕಿ ಭಾರತಿ ಬಂಟ್ ಹಾಗೂ ಪಿಲೀಪ್ ಫರ್ನಾಂಡಿಸ್ ಸಹಯೋಗದೊಂದಿಗೆ ವಿಧ್ಯಾರ್ಥಿಗಳಿಗೆ ಅತೀ ಕಡಿಮೆ ಅವಧಿಯಲ್ಲಿ ಕವಾಯತು ಕಲಿಸಿ ಪ್ರಯೋಗಿಸಿದ್ದು ಹೊಸ ನಿರೀಕ್ಷೆಗಳಿಗೆ ಸಾಕ್ಷಿಯಾಯಿತು.

ಎಸ್ಡಿಎಂಸಿ ಉಪಾಧ್ಯಕ್ಷೆ ಸಂಜನಾ ನಾಯ್ಕ, ರಾಜು ನಾಯಕ, ಶಿವಾನಂದ ಗೌಡ, ಯೋಗೇಶ್ ನಾಯ್ಕ, ವಿನಯ್ ದೇಸಾಯಿ, ದಿನೇಶ್ ನಾಯ್ಕ ಹಾಗೂ ಸರ್ವ ಸದಸ್ಯರು, ಶಾಲೆಯ ನಾಮ ನಿರ್ದೇಶಿತ ಸದಸ್ಯೆ ಜೀವಿತಾ ಗಾಂವಕರ, ಗ್ರಾ.ಪಂ. ಸದಸ್ಯ ನಾಗರಾಜ ನಾಯ್ಕ, ನಾಗರಾಜ ಓಮು ನಾಯ್ಕ, ಪ್ರೀತಿ ಪೆಡ್ನೇಕರ್ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.


