ಕಾರವಾರ: ‘ಕಲ್ಲ ನಾಗರ ಕಂಡಡೆ ಹಾಲ ನೆರೆಯೆಂಬರು, ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ’ ಎಂಬುದು ಮಾನವನ ಗುಣ. ನಾಗರಹಾವು ಹಾಲು ಕುಡಿಯುವುದಿಲ್ಲವೆಂದು ತಿಳಿದಿದ್ದರೂ ನಾಗರ ಪಂಚಮಿಯಂದು ಹೀಗೆ ಕಲ್ಲಿನ ಮೂರ್ತಿಗಳಿಗೆ ಹಾಲೆರೆದು ಅದನ್ನು ವ್ಯರ್ಥ ಮಾಡುವ ಬದಲು ಬಡವರು, ಹಸಿದ ಮಕ್ಕಳಿಗೆ ನೀಡುವ ಮೂಲಕ ಹಬ್ಬವನ್ನ ಸಾರ್ಥಗೊಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜನಶಕ್ತಿ ವೇದಿಕೆಯ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ.ರಾಯ್ಕರ್ ಹೇಳಿದರು.

ನಗರದ ಆಶಾನಿಕೇತನ ಕಿವುಡ ಮತ್ತು ಮೂಗ ಮಕ್ಕಳ ಶಾಲೆಯಲ್ಲಿ ನಾಗರ ಪಂಚಮಿ ನಿಮಿತ್ತ ಜನಶಕ್ತಿ ವೇದಿಕೆ ಹಮ್ಮಿಕೊಂಡಿದ್ದ ಮಕ್ಕಳಿಗೆ ಹಾಲು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಲ್ಲಿಯ ಮಕ್ಕಳನ್ನು ನೋಡಿದಾಗ ನನಗೆ ಮಾತೇ ಹೊರಡಲ್ಲ. ದೇಹದಲ್ಲಿ ಕೆಲವು ಅಂಗಾಗಳ ನ್ಯೂನ್ಯತೆ ನೀಡಿದ್ದರೂ ಅವರಿಗೆ ದೇವರು ವಿಶೇಷ ಶಕ್ತಿಯೊಂದನ್ನ ನೀಡಿರುತ್ತಾನೆ ಎಂಬುದಕ್ಕೆ ಈ ಮಕ್ಕಳು ಸಾಕ್ಷಿ ಎಂದರು.

ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ದೇವರಿಲ್ಲ ಎಂಬುದನ್ನೂ ನಾನು ಒಪ್ಪುವುದಿಲ್ಲ. ದೇವರು ಎಲ್ಲೆಡೆ ಇದ್ದಾನೆ; ಈ ಮಕ್ಕಳಲ್ಲೂ ದೇವರಿದ್ದಾನೆ. ಹಾಗಿದ್ದರೂ ಕಲ್ಲಿನ ಮೂರ್ತಿಗಳಿಗೇ ನಾವು ಹಾಲನ್ನೆರದು ಅದು ಚರಂಡಿಗೆ ಹರಿದು ಹೋಗುವವರೆಗೆ ವ್ಯರ್ಥ ಮಾಡುತ್ತಿದ್ದೇವೆ. ಅದನ್ನು ಹೀಗೆ ಪ್ರತಿವರ್ಷ ಇಂಥ ಮಕ್ಕಳಿಗೆ ವಿತರಿಸುವ ಮೂಲಕ ನಾನು ಸಾರ್ಥಕತೆಯನ್ನ ಕಾಣುತ್ತಿದ್ದೇನೆ. ಇದ್ಕೆ ನನಗೆ ಸತೀಶ್ ಜಾರಕಿಹೊಳಿಯವರು ಪ್ರೇರಣೆ. ಅವರು ಮೂಢನಂಬಿಕೆಗಳನ್ನ ತೊಡದುಹಾಕುವ ನಿಟ್ಟಿನಲ್ಲಿ ಇಂಥ ವಿದಾಯಕ ಕಾರ್ಯಕ್ರಮಗಳನ್ನ ಮಾಡುತ್ತಿದ್ದರು ಎಂದರು. ಪೂಜೆ- ಪುನಸ್ಕಾರಗಳು ಬೇಕು, ಆದರೆ ಅದಕ್ಕಿಂತ ಹೆಚ್ಚಾಗಿ ಮೂಢನಂಬಿಕೆಗಳನ್ನ ಆಚರಿಸುವುದು ಸರಿಯಲ್ಲ. ವೈಜ್ಞಾನಿಕವಾಗಿ ಹಾವುಗಳು ಹಾಲನ್ನು ಕುಡಿಯುವುದೂ ಇಲ್ಲ; ಹುತ್ತಕ್ಕೆ ಎರೆದರೆ ಅದರಿಂದ ಸಾವನ್ನಪ್ಪಲೂಬಹುದು ಎಂಬ ಪ್ರಜ್ಞೆ ಜನರಲ್ಲಿ ಮೂಡಬೇಕಿದೆ ಎಂದರು.

ಈ ವೇಳೆ ಆಶಾನಿಕೇತನದ ಮಕ್ಕಳಿಗೆ ಹಾಲು, ಸಮೋಸಾ, ಲಡ್ಡು ವಿತರಿಸಲಾಯಿತು. ಖುದ್ದು ನ್ಯಾಯಾಧೀಶರಾದ ರೇಣುಕಾ ಡಿ.ರಾಯ್ಕರ್, ಮಾಧವ ನಾಯಕ ಹಾಗೂ ಅವರ ಪುತ್ರಿಯರಾದ ಮಧುರಾ ನಾಯಕ, ಯಶಸ್ವಿನಿ ನಾಯಕ ಇನ್ನಿತರರು ಮಕ್ಕಳಿಗೆ ಹಾಲು- ತಿಂಡಿಗಳನ್ನ ವಿತರಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯದ ಮೂಲಕ ಗಣ್ಯರನ್ನ ಸ್ವಾಗತಿಸಿಕೊಂಡರು. ವಕೀಲರಾದ ಸಪ್ನಾ ಗುನಗಿ, ಶಾಲೆಯ ಮೇಲ್ವಿಚಾರಕಿ ಸಿಸ್ಟರ್ ಲೈನೆಟ್, ವೇದಿಕೆಯ ಸದಸ್ಯರಾಧ ರಾಮಾ ನಾಯ್ಕ, ಬಾಬು ಶೇಖ್, ರಮೇಶ್ ಗುನಗಿ, ಖೈರುನ್ನಿಸಾ ಶೇಖ್, ಸುರೇಶ್ ನಾಯ್ಕ, ಶಿವಾನಂದ್ ನಾಯ್ಕ್, ಇದಿನ್ ಅಲ್ಫ್ಯಾನ್ಸೋ, ಫಕೀರಪ್ಪ ಭಂಡಾರಿ, ಚಂದ್ರಕಾಂತ್ ನಾಯ್ಕ, ಸೂರಜ್ ಕುರೂಮಕರ್, ಅಲ್ತಾಫ್ ಶೇಖ್, ಸಿ.ಎನ್.ನಾಯ್ಕ, ಸುಗಂಧಾ ನಾಯ್ಕ್, ವಿನಯಾ ಪ್ರಭಾ, ಸಿಸ್ಟರ್ ಪೂಜಾ, ಸಿಸ್ಟರ್ ವಿಜಯಾ, ಸಿಸ್ಟರ್ ಅಮಿಶಾ, ಶಿಕ್ಷಕಿಯರಾದ ಪುಷ್ಪಾ, ಶಿಕ್ಷಕಿ ಜಾನಕಿ, ಹತ್ತನೇ ತರಗತಿಯ ವಿದ್ಯಾರ್ಥಿನಿ ಕೃತಿಕಾ, ಅಡುಗೆ ಸಿಬ್ಬಂದಿ ಶೀಲಾ, ಮಂಗಲಾ ಹಾಗೂ ಇತರರು ಇದ್ದರು.

ಶೈಕ್ಷಣಿಕ ಸುಧಾರಣೆ.ಮಲ್ಟಿ ನ್ಯಾಷನಲ್ ಕಂಪನಿಗಳು ಯಾವುದಾದರೊಂದು ಗ್ರಾಮವನ್ನ ದತ್ತು ಪಡೆದು, ಅಲ್ಲಿಯ ಶೈಕ್ಷಣಿಕ ಮಟ್ಟವನ್ನ ಸುಧಾರಿಸಲು ಅಭಿವೃದ್ಧಿಕಾರ್ಯಗಳನ್ನ ನಡೆಸುವಂತೆ ಕಾನೂನು ಸೇವಾ ಪ್ರಾಧಿಕಾರವು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಈಗಾಗಲೇ ಹಳಿಯಾಳದಲ್ಲಿ ಎರಡು ಕಂಪನಿಗಳ ಮೂಲಕ ಎರಡು ಗ್ರಾಮಗಳಲ್ಲಿ ಶೈಕ್ಷಣಿಕ ಸುಧಾರಣೆ ತರಲಾಗುತ್ತಿದೆ. ಕಾರವಾರದಲ್ಲೂ ಬಿಣಗಾ ಗ್ರಾಸಿಂ ಇಂಡಸ್ಟ್ರೀಸ್ ಜೊತೆಗೆ ಈ ಬಗ್ಗೆ ಮಾತುಕತೆ ನಡೆಸಿ, ಇಲ್ಲಿಯೂ ಅನುಷ್ಠಾನಗೊಳಿಸುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ಸಹಕಾರ ಮಾಡಿಕೊಡಲಾಗುತ್ತದೆ ಎಂದು ನ್ಯಾ.ರೇಣುಕಾ ರಾಯ್ಕರ್ ತಿಳಿಸಿದರು.

ಆಶಾನಿಕೇತನ ಶಾಲೆಯ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿಯ ಬಳಿಕ ಉನ್ನತ ವ್ಯಾಸಂಗಕ್ಕೆ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಇಲ್ಲಿಂದ ಅವರು ಉತ್ತೀರ್ಣರಾದ ಬಳಿಕ ಅವರಿಗೆ ಸನ್ನೆಯ ಮೂಲಕ ಕಲಿಸುವ ಯಾವುದೇ ಶಿಕ್ಷಣ ಸಂಸ್ಥೆಗಳು ಸಿಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಇದಕ್ಕೆ ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳು ಮುಂದಾಗಿ ಕನಿಷ್ಠ ಮೂರು ವರ್ಷಗಳವರೆಗೆ ಇಲ್ಲಿನ ಮಕ್ಕಳಿಗೆ ಉದ್ಯೋಗಾವಕಾಶಗಳಿಗೆ ಅನುಕೂಲವಾಗುವಂತೆ ಸನ್ನೆಯ ಮೂಲಕ ಕಲಿಸುವ ಕೋರ್ಸ್ಗಳನ್ನ ನೀಡಲು ಮುಂದಾಗಬೇಕಿದೆ.

• ಮಾಧವ ನಾಯಕ, ಜನಶಕ್ತಿ ವೇದಿಕೆಯ ಅಧ್ಯಕ್ಷ