ಅಂಕೋಲಾ : ತಾಲೂಕಿನ ಬಯಲು ಜಾಗದಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿರುವ ಅಲೆಮಾರಿ ಜನಾಂಗ ಮತ್ತು ಗುಜರಿ ಆಯುವ ಕುಟುಂಬದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಸಿಐಡಿ ಇನ್ಸ್‌ಪೆಕ್ಟರ್ ಜಯರಾಜ್ ಎಚ್ ಅವರ ಹುಟ್ಟು ಹಬ್ಬದ ನಿಮಿತ್ತ ಸ್ಕೂಲ್ ಬ್ಯಾಗ್ ಸೇರಿದಂತೆ ಶೆಕ್ಷಣಿಕ ಪರಿಕರಗಳನ್ನು ವಿತರಿಸುವ ಮೂಲಕ ಹುಟ್ಟು ಹಬ್ಬವನ್ನು ವಿನೂತನವಾಗಿ ಆಚರಿಸಲಾಯಿತು.

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ವಿತರಿಸಿ ಮಾತನಾಡಿದ ವಕೀಲರ ಸಂಘದ ತಾಲೂಕಾಧ್ಯಕ್ಷ ವಿನೋದ ಶಾನಭಾಗ ಮಾತನಾಡಿ ಸರಕಾರದಿಂದ ಮಾತ್ರ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಲ್ಲ. ಅದಕ್ಕೆ ಶಿಕ್ಷಣ ಪ್ರೇಮಿಗಳು, ದಾನಿಗಳು ಕೈ ಜೋಡಿಸುವ ಮೂಲಕ ಸಾಮಾಜಿಕ ಕೊಡುಗೆ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಸಿಪಿಐ ಜಯರಾಜ್ ಎಚ್ ಅವರ ಹುಟ್ಟು ಹಬ್ಬದ ನಿಮಿತ್ತ ಶೈಕ್ಷಣಿಕ ಕೊಡುಗೆ ನೀಡಿರುವದು ಶ್ಲಾಘನೀಯ ಸಂಗತಿಯಾಗಿದೆ ಎಂದರು.

ಪತ್ರಕರ್ತ ಸುಭಾಷ ಕಾರೇಬೈಲ ಮಾತನಾಡಿ, ದಕ್ಷತೆಯ ಮೂಲಕ ಕಾರ್ಯ ನಿರ್ವಹಿಸಿ, ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಜಯರಾಜ್ ಎಚ್ ಅವರು ಅಂಕೋಲಾದಲ್ಲಿ ತನ್ನ ಸಾಂಸ್ಕೃತಿಕ ಬಳುವಳಿಯನ್ನು ಬಿಟ್ಟು ತೆರಳಿದ್ದಾರೆ ಎಂದರು.

ನ್ಯಾಯವಾದಿ ಉಮೇಶ ನಾಯ್ಕ ಮಾತನಾಡಿ ಅಂಕೋಲಾ ಭಾಗದ ಜನರು ಬೆಂಗಳೂರಿಗೆ ತೆರಳಿದಾಗ ಏನಾದರೂ ಕಷ್ಟಕ್ಕೆ ಸಿಲುಕಿದಾಗ ತಕ್ಷಣ ಸ್ಪಂದಿಸುವ ಅಧಿಕಾರಿ ಎಂದರೆ ಅವರು ಜಯರಾಜ್. ಇಂಥ ಸ್ನೇಹಮಯಿ ಅಧಿಕಾರಿಗಳು ನಮ್ಮ ನಾಡಿನಲ್ಲಿ ಇರುವದು ಹೆಮ್ಮೆ ತಂದಿದೆ ಎಂದರು.

ಯುವ ಒಕ್ಕೂಟದ ತಾಲೂಕಾಧ್ಯಕ್ಷ ಗೋಪು ನಾಯಕ ಅಡ್ಲೂರು ಮಾತನಾಡಿ ಅಂಕೋಲೆಯ ಪೊಲೀಸ್ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲಿ ಸಿಪಿಐ ಜಯರಾಜ್ ಅವರು ಹೆಗ್ಗರತನ್ನು ಇಟ್ಟು ತೆರಳಿದ್ದಾರೆ. ಇಂಥ ಅಧಿಕಾರಿಗಳಿಂದ ಅಂಕೋಲೆಯ ಪ್ರಗತಿಗೆ ನಾಂದಿಯಾಗಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಶ್ರೀಮತ ಚೌಹ್ಹಾಣ ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ದಿನಕರ ನಾಯ್ಕ ವಂದಿಸಿದರು.