ಅಂಕೋಲಾದಲ್ಲಿ ಹೆಚ್ಚಿದ ನಕಲಿ ನೋಟಿನ ಹಾವಳಿ
ಎರಡು ವರ್ಷದ ಹಿಂದೆ ಖೋಟಾ ನೋಟಿನ ಬೃಹತ ಜಾಲವನ್ನು ಭೇಧಿಸಿದ್ದ ಪತ್ರಕರ್ತ ಅಕ್ಷಯ ನಾಯ್ಕ. ಬೊಬ್ರವಾಡ
ದಿನಕರ ನಾಯ್ಕ. ಅಲಗೇರಿ
ಅಂಕೋಲಾ : ಪಟ್ಟಣದ ಹಲವೆಡೆ 500 ರೂ. ಮುಖ ಬೆಲೆಯ ನಕಲಿ ನೋಟಿನ ಚಲಾವಣೆ ಹೆಚ್ಚಾಗಿದ್ದು ಸಣ್ಣ ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇದರಿಂದ ನಾಗರಿಕರು ಆತಂಕಕ್ಕೆ ಒಳಗಾಗುವಂತಾಗಿದೆ.
ನಕಲಿ ನೋಟುಗಳನ್ನು ಚಲಾವಣೆ ಮಾಡುವ ಒಂದು ತಂಡವೇ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದ್ದು, ಹೆಚ್ಚಾಗಿ ಅಂಕೋಲಾದ ಶನಿವಾರದ ಸಂತೆಯಲ್ಲಿ ಖೋಟಾ ನೋಟು ತನ್ನ ಕರಾಳ ಮುಖ ಪ್ರದರ್ಶಿಸುತ್ತಲಿದೆ.
500 ರೂ. ಮುಖಬೆಲೆಯ ನೋಟುಗಳನ್ನಷ್ಟೆ ಆಯ್ದ ಕೆಲವು ವ್ಯಕ್ತಿಗಳಿಗೆ ಕೊಟ್ಟು ಜನದಟ್ಟಣೆ ಇರುವ ವ್ಯಾಪಾರ ಕೇಂದ್ರಗಳಲ್ಲಿ ವಸ್ತುಗಳನ್ನು ಖರೀದಿಸುವುದು ನೋಟು ವಿನಿಮಯ ಮಾಡಿಕೊಳ್ಳಲಾಗುತ್ತಿದೆ.
ಕೆಲವು ಕಡೆ ಅಸಲಿ ನೋಟಿನ ಜತೆಗೆ ನಕಲಿ ನೋಟುಗಳನ್ನು ಸೇರಿಸಿ ಕೊಡುವುದು ಮತ್ತು ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುವ ಸಣ್ಣ ವ್ಯಾಪಾರಿಗಳ ಬಳಿ ವಸ್ತುಗಳನ್ನು ಖರೀದಿಸಿ ಕಲರ್ ಪ್ರಿಂಟ್ ನೋಟುಗಳನ್ನು ಕೊಟ್ಟು ಹೋಗುತ್ತಿದ್ದಾರೆ.
ಅಸಲಿ ನೋಟನ್ನು ಕಲರ್ ಪ್ರಿಂಟ್ ಮಾಡಿ ನೋಟಿನ ಮಧ್ಯಭಾಗದಲ್ಲಿ ಬರುವ ಆರ್ಬಿಐ ಗೆರೆಯನ್ನು ಮಾರ್ಕ್ರ್ ಪೆನ್ಬಳಸಿ ಗೆರೆ ಎಳೆಯಲಾಗಿದೆ. ಆದರೆ, ಈ ನಕಲಿ ನೋಟಿಗೆ ಬಳಸಲಾಗಿರುವ ಪೇಪರ್ ತೆಳುವಾಗಿದ್ದು, ಕೈಯಲ್ಲಿ ಮುದುರಿದರೆ ಸಂಪೂರ್ಣವಾಗಿ ಪೇಪರ್ ಉಂಡೆಯಾಗುತ್ತದೆ. ಅಲ್ಲದೆ ಈ ನೋಟುಗಳು ಸಾರ್ವಜನಿಕರ ಕೈನಿಂದ ಕೈಗೆ ಚಲಾವಣೆಯಾಗುತ್ತಿದ್ದಂತೆ ಬಣ್ಣವೆಲ್ಲಾ ಮಾಸಿ ಬೇಗನೆ ಹರಿದು ಹೋಗುತ್ತದೆ. ಇದರಿಂದ ಪ್ರತಿದಿನ ಬ್ಯಾಂಕ್ಗಳಲ್ಲಿ ವ್ಯವಹಾರ ನಡೆಸುವ ಪೆಟ್ರೋಲ್ ಬಂಕ್ ಹಾಗೂ ಇತರ ವ್ಯಾಪಾರಿಗಳು ಬ್ಯಾಂಕ್ಗಳಿಗೆ ಹಣ ಕಟ್ಟಲು ಹೋದಾಗ ನೋಟು ಎಣಿಕೆ ಯಂತ್ರಕ್ಕೆ ಹಾಕಿದಾಗ ನಕಲಿ ನೋಟುಗಳು ಬೇರ್ಪಡುತ್ತವೆ.
ಇವುಗಳನ್ನು ಬ್ಯಾಂಕ್ ಸಿಬ್ಬಂದಿ ಹಣ ಕಟ್ಟಿದ ಗ್ರಾಹಕನಿಗೆ ವಾಪಸ್ ಕೊಡದೆ ಹರಿದು ಬಿಸಾಡುತ್ತಾರೆ. ಇಂತಹ ಬಹಳಷ್ಟು ಸನ್ನಿವೇಶಗಳು ಪಟ್ಟಣದಲ್ಲಿ ಪ್ರತಿನಿತ್ಯ ಸಾರ್ವಜನಿಕ ವಲಯದಲ್ಲಿ ಕಾಣಸಿಗುತ್ತಿದ್ದು, ಸಾರ್ವಜನಿಕರು ಯಾವುದು ನಕಲಿ, ಅಸಲಿ ನೋಟು ಎಂದು ಗೊತ್ತಾಗದೆ ಪೇಚಿಗೆ ಸಿಲುಕುವಂತಾಗಿದೆ.
ಪೊಲೀಸ್ ಇಲಾಖೆಯಲ್ಲಿ ಮಾಹಿತಿದಾರರಿಗೆ ಮಾನ್ಯತೆ ಇಲ್ಲ ;
ಕಳೆದ ಎರಡು ವರ್ಷದ ಹಿಂದೆ ಅಂಕೋಲಾದಲ್ಲಿ ಖೋಟಾ ನೋಟು ಜಾಲ ಪತ್ತೆಯಾಗಿತ್ತು. ಪತ್ರಕರ್ತ ಅಕ್ಷಯ ನಾಯ್ಕ. ಬೊಬ್ರವಾಡ ಅವರು ಖೋಟಾ ನೋಟಿನ ಜಾಲ ಹಿಂದೆ ಬಿದ್ದು, ಈ ಕರಾಳ ಜಾಲದ ಸಂಪೂರ್ಣ ಜಾಲ ಮಾಹಿತಿ ಕಲೆ ಹಾಕಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಿಶೇಷ ತಂಡಕ್ಕೆ ಮಾಹಿತಿ ನೀಡಿದ್ದರು.
ಈ ಮಾಹಿತಿಯ ಮೇರೆಗೆ ಅಂಕೋಲಾದಲ್ಲಿ ಬೃಹತ ಖೋಟಾ ನೋಟಿನ ಜಾಲವನ್ನ ಪೊಲೀಸರು ಭೇಧಿಸುವಂತಾಗಿತ್ತು. ಕಾಮಾ ಭೂರ್ತಿ ಮಾಮಾ ಎನ್ನುವಂತೆ ಪೊಲೀಸರು ಮಾತ್ರ ಸೌಜನ್ಯಗೋಸ್ಕರವು ಸಹ ಪತ್ರಕರ್ತ ಅಕ್ಷಯ ನಾಯ್ಕ ಅವರನ್ನು ಕರೆದು ಪ್ರಶಂಸಿಸುವ ಕೆಲಸ ಮಾಡಿರಲಿಲ್ಲ.
ತಮ್ಮ ಜೀವದ ಹಂಗನ್ನು ತೊರೆದು ಪತ್ರಕರ್ತ ಅಕ್ಷಯ ನಾಯ್ಕ ರಿಯಾಲಿಟಿ ಚೆಕ್ ನಡೆಸಿ ಪ್ರಕರಣವನ್ನು ಭೇಧಿಸುವಲ್ಲಿ ಕಾರಣರಾಗಿದ್ದರು. ಈ ಪ್ರಕರಣ ಬೆಳಕಿಗೆ ಬಂದ ನಂತರ ಅಂಕೋಲಾದಲ್ಲಿ ಖೋಟಾ ನೊಟು ಕಣ್ಮರೆಯಾಗಿತ್ತು. ಈಗ ಮತ್ತೆ ಖೋಟಾ ನೋಟು ಸಂತೆಯಲ್ಲಿ ನುಸಳಿ ಬರುತ್ತಿರುವದು ಆರ್ಥಿಕತೆಯ ಭಯೋತ್ಪಾದಕತೆ ಸೃಷ್ಠಿಸುವಂತಾಗಿದೆ. ಮಾಹಿತಿ ನೀಡಿದವರಿಗೆ ಗೌರವ ನೀಡದ ಇಲಾಖೆಯಲ್ಲಿ ಮತ್ತೆ ಈ ಖೋಟಾ ನೋಟಿನ ಜಾಲದ ಪತ್ತೆ ಮಾತ್ರ ಸವಾಲಾಗಿ ಪರಿಗಣಿಸಿದೆ.

ನಾನು ದಿನನಿತ್ಯ ಸಣ್ಣಪುಟ್ಟ ವ್ಯಾಪಾರ ಮಾಡುತ್ತೇನೆ. ನಕಲಿ ನೋಟು ವ್ಯಾಪಾರ ದಲ್ಲಿ ಬರುತ್ತಿರುವದರಿಂದ ನಮಗೆ ದಿಕ್ಕು ತೋಚದಂತಾಗಿದೆ. ಪೊಲೀಸರು ಈ ಬಗ್ಗೆ ಕ್ರಮವಹಿಸುವಂತಾಗಬೇಕು.
ಬೇಬಿ ಗೌಡ.
ಬೆಳಂಬಾರ.
ನಕಲಿ ನೋಟು ಬಂದಾಗ ಅದನ್ನು ಪೊಲೀಸರ ಗಮನಕ್ಕೂ ತರಲು ನಾಗರಿಕರು ಭಯಪಡುತ್ತಿದ್ದಾರೆ. ಏಕೆಂದರೆ ಪೊಲೀಸರು ಎಲ್ಲಿ ತಮ್ಮನ್ನೆ ಆರೋಪಿಯನ್ನಾಗಿಸಿ ವಿಚಾರಣೆಗೆ ಕರೆದೊಯ್ಯಬಹುದು ಎಂಬ ಆತಂಕದಲ್ಲಿ ಖೋಟಾ ನೋಟು ಮಾತ್ರ ನಿರಾತಂಕ ಚಲಾವಣೆಗೊಳ್ಳುತ್ತಿರುವದು ತಾಲೂಕಿನ ಆರ್ಥಿಕ ವ್ಯವಸ್ಥೆಯ ಮೇಲೆ ಕರಿ ನೆರಳು ಚೆಲ್ಲುವಂತಾಗಿದೆ.

