ಅಂಕೋಲಾ : ಪೊಲೀಸ್ ಠಾಣಾ ವ್ಯಾಪ್ತಿಯ ಬಾಸಗೋಡ ಕೊಗ್ರೆಯ ನಿವೃತ್ತಿ ಶಿಕ್ಷಕಿ ಶಾಂತಿ ಕೃಷ್ಣ ನಾಯಕ ಇವರ ಮನೆಯಲ್ಲಿ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೊಬ್ರುವಾಡದ ನಿವಾಸಿ ಪ್ರಶಾಂತ ಕಿಶೋರ ನಾಯ್ಕ (25) ಈತನೇ ಕಳ್ಳತನದ ಆರೋಪಿಯಾಗಿದ್ದು ಬಂಧಿತನಿಂದ ಬೆಳ್ಳಿಯ ದೀಪದ ಸಮಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಗಸ್ಟ 27 ರಿಂದ ಅ.28 ರ ಅವಧಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಅವಧಿಯಲ್ಲಿ ಮನೆಯ  ಬಾಗಿಲನ್ನು ಮತ್ತು ಕಪಾಟಿನ ಬೀಗ ಮುರಿದು ಅದರಲ್ಲಿದ್ದ ನಗದು  ಹಣ, ಬಂಗಾರದ ಕಿವಿ ಓಲೆ, ಬೆಳ್ಳಿಯ ದೀಪದ ಸಮಯಗಳು, ಬೆಳ್ಳಿಯ ಲೋಟಗಳು ಹಾಗೂ ಬ್ಯಾಂಕ್ ಮತ್ತು ಪೋಸ್ಟ್ ಆಪೀಸ್ ದಾಖಲಾತಿಗಳನ್ನು ಕಳ್ಳತನ ಮಾಡಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಳ್ಳತನ ಪ್ರಕರಣದ ಪತ್ತೆ ಕಾರ್ಯಕ್ಕಿಳಿದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಪ್ರಶಾಂತ ಕಿಶೋರ ನಾಯ್ಕ ಈ ಹಿಂದೆ ಸುಮಾರು 20 ಕ್ಕಿಂತ ಹೆಚ್ಚಿನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಜೈಲು ಸೇರಿದ್ದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎನ್ನಲಾಗಿದೆ. ಈತನೊಂದಿಗೆ ಇದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ತನಿಖೆಯ ವೇಳೆ ಪ್ರಶಾಂತ ಈತನು ಬಾಸಗೋಡ ಕೊಗ್ರೆಯಲ್ಲಿ ಒಂದು ಮನೆ ಕಳ್ಳತನ ಮಾಡಿದ್ದಲ್ಲದೆ ಇನ್ನೊಂದು ಮನೆಯ ಬಾಗಿಲು ಮುರಿದು ಕಳ್ಳತನಕ್ಕೆ ಪ್ರಯತ್ನಿಸಿದ ಬಗ್ಗೆ ಒಪ್ಪಿಕೊಂಡಿದ್ದಾನೆ.ಉತ್ತರ ಕನ್ನಡ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾದ  ವಿಷ್ಣುವರ್ಧನ ರವರ ನಿರ್ದೇಶನದದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ. ಟಿ. ಜಯಕುಮಾರ ಹಾಗೂ ಕಾರವಾರ ಉಪವಿಭಾಗದ ಪೊಲೀಸ ಉಪಾಧೀಕ್ಷಕರಾದ ವೆಲೆಂಟೈನ್ ಡಿಸೋಜಾ ರವರ ಮಾರ್ಗದರ್ಶನದಂತೆ, ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ ನಿರೀಕ್ಷಕ ಸಂತೋಷ ಶೆಟ್ಟಿ ರವರ ನೇತೃತ್ವದಲ್ಲಿ ಠಾಣೆಯ ಪಿ.ಎಸ್.ಐ. ಸುಹಾಸ್ ಆರ್.ಮತ್ತು ಸಿಬ್ಬಂದಿಗಳಾದ ವೆಂಕಟ್ರಮಣ ನಾಯ್ಕ, ಶ್ರೀಕಾಂತ ಕಟಬರ, ಮನೋಜ. ಡಿ., ಆಸಿಫ್ ಕುಂಕೂರು, ಗುರುರಾಜ ನಾಯ್ಕ ಹಾಗೂ ಸಲೀಮ್ ಮೊಖಾಶಿ ರವರು ಈ ಪ್ರಕರಣದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.