ರಾಘು ಕಾಕರಮಠ.

ಕನ್ನಡಪ್ರಭ ವಾರ್ತೆ ಅಂಕೋಲಾ :

ವರ ಮಹಾಲಕ್ಷ್ಮಿಯ ಪೂಜೆಗೆಂದು ಕಳಸದಲ್ಲಿ ದೇವಿಯ ಪಂಚಲೋಹದ ಮುಖಕ್ಕೆ ಹಾಕಿದ್ದ 27 ಗ್ರಾಂನ 1 ಲಕ್ಷ 2೦ ಸಾವಿರ ಮೌಲ್ಯದ ಬಂಗಾರದ ಹಾರವನ್ನು, ಪೂಜೆಗೆ ಬಂದ ಆಪ್ತರೊಬ್ಬರೆ ಸಿನಿಮೀಯ ರೀತಿಯಲ್ಲಿ ಕಳವು ಮಾಡಿಕೊಂಡ ಹೋದ ಘಟನೆ ಪಟ್ಟಣದ ಕೇಣಿಯಲ್ಲಿ ನಡೆದಿದೆ.

ನಡೆದದ್ದೇನು..?

ಈಗ ಎಲ್ಲೆಲ್ಲೂ ಕೂಡ ಶ್ರಾವಣ ಮಾಸದ ಸಂಭ್ರಮ. ಹೆಂಗಳೆಯರಿಗಂತೂ ವರ ಮಹಾಲಕ್ಷ್ಮಿಯ ಹಬ್ಬ ಎಂದರೆ ಅದೇನೋ ಒಂದು ರೀತಿಯ ಸಂತಸ. ಬೇಡಿದ ವರವನ್ನು, ಇಷ್ಠಾರ್ಥಗಳನ್ನ ಕರುಣಿಸುತ್ತಾಳೆ ಎಂಬ ಬಲವಾದ ನಂಬಿಕೆಯಿಂದ ಮನೆಯಲ್ಲಿ ವರ ಮಹಾಲಕ್ಷ್ಮಿಯನ್ನು ಚಿನ್ನಾಭರಣ ತೊಡಿಸಿ, ಅಲಂಕಾರ ಭೂಷಿತಳಾಗಿ ಪೂಜಿಸಿ ಮುತೈದೆಯರಿಗೆ ಉಡಿ ತುಂಬಿ, ಸಾಂಪ್ರದಾಯಿಕವಾಗಿ ಉಡುಗರೆಯನ್ನು ನೀಡಿ, ಅವರಿಂದ ಆರ್ಶಿವಾದ ಪಡೆಯುವ ಮೂಲಕ ಈ ಹಬ್ಬಕ್ಕೆ ಇನ್ನಷ್ಟು ಮೆರಗು ತರುವದು ಈ ಹಬ್ಬದ ವಿಶೇಷ.

ಆದರೆ ಸೆಪ್ಟಂಬರ್ 8 ರ ಶುಕ್ರವಾರದಂದು ಕೇಣಿಯ ಸಾರಿಗೆ ಇಲಾಖೆಯಲ್ಲಿ ಮೆಕ್ಯಾನಿಕ್ ಇಂಜಿನಿಯರ್ ಆಗಿರುವ ದೀಪಕ ಸುಭಾಷ ನಾಯ್ಕ ಅವರ ಮನೆಯಲ್ಲಿ ವರ ಮಹಾಲಕ್ಷ್ಮಿಯ ಪೂಜೆಯನ್ನ ವಿಜೃಂಬಣೆಯಿಂದ ಕೈಗೊಂಡಿದ್ದರು. ನೂರಾರು ಆಪ್ತೇಷ್ಠರು, ಭಕ್ತರು ಆಗಮಿಸಿ ವರ ಮಹಾಲಕ್ಷ್ಮಿಯ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ತೆರಳಿದ್ದರು.

ಸಂಜೆ ಸುಮಾರು 6-20 ಸುಮಾರಿಗೆ ದೇವಿಯ ಪಂಚಲೋಹದ ಮುಖಕ್ಕೆ ಹಾಕಿದ್ದ ಬಂಗಾರದ ಸರ ಇಲ್ಲದೆ ಇರುವದನ್ನ ಗಮನಿಸಿದ್ದಾರೆ.  ಆದರೆ  ಕಳ್ಳ ತನ್ನ ಚಾಣಾಕ್ಷತನದಿಂದ, ದೇವಿಗೆ ಮುಟ್ಟಿ ಆರ್ಶಿವಾದ ಪಡೆಯುವ ನಾಟಕವಾಡಿ ಚಿನ್ನದ ಹಾರವನ್ನು ಕಟ್ ಮಾಡಿ ಚಿನ್ನದ ಸರ್ ಎಗರಿಸಿ ಕಳ್ಳತನ ಎಸೆಗಿರುವದು ಕಂಡು ಬಂದಿದೆ. ದೇವಿಯ ಲೋಹದ ಮೂರ್ತಿಯ ಹಿಂಬದಿಯಲ್ಲಿ ಬಂಗಾರದ ತುಂಡು ಚೈನ್ ದೇವಿಯ ಬಳಿ ದೊರೆತಿದೆ.

ಈ ಘಟನೆಯಿಂದ ವರ ಮಾಹಲಕ್ಷ್ಮೀಯ ಪೂಜೆ ಮಾಡಿದ ಕುಟುಂಬಸ್ಥರು ಮಾತ್ರ ಆತಂಕಕ್ಕೆ ಒಳಗಾಗುವಂತೆ ಮಾಡಿತು. ಮನೆಗೆ ಬಂದ ಯಾರ ಮೇಲೆ ಅನುಮಾನ ಪಡುವದು ಎಂಬ ಕಳವಳ ಇವರದಾಗಿತ್ತು. ಎಲ್ಲರೂ ಆಪ್ತೇಷ್ಟರೆ, ಎಲ್ಲರ ಸಮ್ಮುಖದಲ್ಲಿ ಯಾರ ಕೈ ಚಳಕ ಕೆಲಸ ಮಾಡಿತು ಎಂಬ ಅನುಮಾನದಲ್ಲಿ ಕೊನೆಗೂ ಪ್ರಕರಣ ಅಂಕೋಲಾ ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದೆ

ಗುರುವಾರದಂದು ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸೈ ಜಯಶ್ರೀ ಪ್ರಭಾಕರ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

——–