ವರದಿ : ಅಕ್ಷಯ ಆರ್.
ಅಂಕೋಲಾ: ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ 73 ನೇ ವರ್ಷದ ವಾರ್ಷಿಕ ಸರ್ವಸಾಧಾರಣ ಸಭೆಯು ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯರ ಅಧ್ಯಕ್ಷತೆಯಲ್ಲಿ ಸೋಮವಾರ ಮಧ್ಯಾಹ್ನ ಸಂಘದ ಕಚೇರಿಯಲ್ಲಿ ನಡೆಯಿತು.
ಸಂಘದ ವಾರ್ಷಿಕ ಲೆಕ್ಕಪತ್ರದ ಬಗ್ಗೆ ಮುಖ್ಯ ಕಾರ್ಯನಿರ್ವಾಹಕ ಎಸ್.ಎನ್ ಹೆಗಡೆ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ವಾರ್ಷಿಕ ವರದಿ ವಾಚಿಸಿದರು. 2022-23 ನೇ ಆರ್ಥಿಕ ವರ್ಷದ ಸಂಘದ ಶೇರು ಬಂಡವಾಳ 2 ಕೋಟಿ 49 ಲಕ್ಷ, ದುಡಿಯುವ ಬಂಡವಾಳ 48.92 ಲಕ್ಷ, 23 ಕೋಟಿ 16 ಲಕ್ಷ ಠೇವಣಿಯನ್ನು ಹೊಂದಿದ್ದು ಒಟ್ಟು 44 ಲಕ್ಷದ 6 ಸಾವಿರ ಲಾಭವನ್ನು ಗಳಿಸಿದೆ. 7.5% ಡಿವಿಡೆಂಟ್ ನ್ನು ಸದಸ್ಯರಿಗೆ ನೀಡುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಕೃಷಿ ಸಾಲ ಹೊರತು ಪಡಿಸಿ ಉಳಿದೆಲ್ಲ ಸಾಲಗಳನ್ನು ಸಂಘವು ಸ್ವಂತ ಬಂಡವಾಳದಿಂದ ನೀಡುವಷ್ಟು ಸಶಕ್ತವಾಗಿದೆ. ಸತತ 6 ವರ್ಷಗಳಿಂದ ಸಂಘವು ‘ಅ’ ವರ್ಗದ ಶ್ರೇಣಿಯಲ್ಲಿದೆ. ಹಳವಳ್ಳಿಯಲ್ಲಿ ಸಂಘದ ನೂತನ ಶಾಖಾ ಕಟ್ಟಡದ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಇ-ಸ್ಟಾಂಪಿಂಗ್ ಗಾಗಿ ದೂರದ ಅಂಕೋಲಾ, ಯಲ್ಲಾಪುರದ ಪಟ್ಟಣಕ್ಕೆ ತೆರಳಬೇಕಿತ್ತು. ಜನರಿಗೆ ಅನುಕೂಲವಾಗಲು ಸದ್ಯದಲ್ಲೇ ಇ-ಸ್ಟಾಂಪಿಂಗ್ ಸೌಲಭ್ಯದ ವ್ಯವಸ್ಥೆಯನ್ನು ಸಂಘದ ಕಚೇರಿಯಲ್ಲಿ ಆರಂಭಿಸಲಿದ್ದೇವೆ ಎಂದು ಹೇಳಿದರು. ಸಂಘದ ನಿರ್ದೇಶಕ ಆನಂದ ನಾಯ್ಕ ಮಾತನಾಡಿ ನಮ್ಮ ಸಂಘವು ಇಷ್ಟು ಸಮೃದ್ಧವಾಗಿ ಬೆಳೆಯಲು ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಎಸ್.ಎನ್ ಹೆಗಡೆ ಅವರ ಪರಿಶ್ರಮ ಹೆಚ್ಚಿದೆ ಎಂದು ಹೇಳಿದರು.
ಸಂಘದ ಮುಖ್ಯಕಾರ್ಯನಿರ್ವಾಹಕರಾದ ಎಸ್.ಎನ್ ಹೆಗಡೆ ಮಾತನಾಡಿ 2022-23 ನೇ ಸಾಲಿನ ಆರ್ಥಿಕ ವರ್ಷಾಂತ್ಯದಲ್ಲಿ ಬಾಕಿ ಇರುವ ಸಾಲದ ವಿವರಣೆಯ ಅಂಕಿ-ಅಂಶವನ್ನು ಹೀಗೆ ವಿವರಿಸಿದರು.
11 ಕೋಟಿ 34 ಲಕ್ಷದ 57 ಸಾವಿರ ಬೆಳೆಸಾಲ, 9 ಕೋಟಿ 5 ಲಕ್ಷದ 19 ಸಾವಿರ ಮಾಧ್ಯಮಿಕ ಸಾಲ, ಇತರೆ ಸಾಲ 7 ಕೋಟಿ 76 ಲಕ್ಷದ 42 ಸಾವಿರ ರು. ಎಂದು ಸಭೆಗೆ ತಿಳಿಸಿದರು. ಬಳಿಕ ಟಿ.ಎಸ್.ಎಸ್ ಸಂಸ್ಥೆಯ ನೂತನ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮತ್ತಿಘಟ್ಟರಿಗೆ ಹಾಗೂ ಈ ಹಿಂದಿನ ಆಡಳಿತ ಮಂಡಳಿಯವರಿಗೆ ಗೌರವ ಸಮರ್ಪಿಸಿದರು.
ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಗಜಾನನ ಹೆಗಡೆ, ನಿರ್ದೇಶಕರುಗಳಾದ ಶ್ರೀಪಾದ ಭಟ್ಟ, ಆನಂದ ನಾಯ್ಕ, ಕೃಷ್ಣ ಸಿದ್ದಿ, ಸಂತೋಷ ಭಟ್ಟ, ಪೂರ್ಣಿಮಾ ಹೆಗಡೆ, ಇಂದಿರಾ ವೈದ್ಯ, ಶಿವಾನಂದ ಆಗೇರ, ಮಂಜುನಾಥ ಭಟ್ಟ, ಪ್ರಕಾಶ ಗಾಂವಕರ್, ವಿನಯ ಹೆಗಡೆ ಇದ್ದರು. ಸಂಘದ ಉಪಾಧ್ಯಕ್ಷ ಗಜಾನನ ಹೆಗಡೆ ಸ್ವಾಗತಿಸಿದರು. ಶ್ರೀಪಾದ ಭಟ್ಟ ವಂದಿಸಿದರು. ಶಶಾಂಕ ಹಳವಳ್ಳಿ ನಿರೂಪಿಸಿದರು.
