ಅಂಕೋಲಾ : ಲಖೀ0ಪುರ್ ಖೇರಿ ರೈತರ ಹತ್ಯಾಕಾಂಡದ ಪ್ರಮುಖ ಆರೋಪಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇಣಿ ಅವರನ್ನು ಸಂಪುಟದಿ0ದ ವಜಾ ಮಾಡಿ, ಬಂಧಿಸಲು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ, ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು ಅಂಕೋಲಾ ತಾಲೂಕ ಸಮಿತಿಗಳು ಜಂಟಿಯಾಗಿ ತಹಶೀಲ್ದಾರರ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿ ಕರಾಳ ದಿನ ಆಚರಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ, ಗೌರೀಶ ನಾಯಕ ಮಾತನಾಡಿ ರೈತ ವಿರೋಧಿ ಕಾರ್ಪೊರೇಟ್ ಪರ ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ಒಂದು ವರ್ಷಗಳ ನಡೆಸ ಐತಿಹಾಸಿಕ ಹೋರಾಟದ ಸಂದರ್ಭದಲ್ಲಿ ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇಣಿರವರ ಪುತ್ರ, ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿ ನಾಲ್ವರು ರೈತರು ಹಾಗೂ ಒಬ್ಬ ಪತ್ರಕರ್ತರನ್ನು ಹತ್ಯೆ ನಡೆಸಿದ ದಿನವಾದ ಇಂದು ದೇಶದಾದ್ಯಂತ ಈ ಹತ್ಯೆಯ ಪ್ರಮುಖ ಆರೋಪಿ ಅಜಯ್ ಮೀಶ್ರಾ ತೇಣಿ ಅವರನ್ನು ಕೂಡಲೇ ಕೇಂದ್ರ ಸಂಪುಟದಿ0ದ ವಜಾ ಮಾಡಿ ಬಂಧಿಸಬೇಕು.
ಸುಪ್ರೀ0 ಕೋರ್ಟ್ ನ ಮಧ್ಯಪ್ರವೇಶದ ನಂತರವಷ್ಟೇ ಆರೋಪಿಗಳ ಮೇಲೆ ಮೊಕದ್ದಮೆ ಹಾಗೂ ಆರೋಪ ಪಟ್ಟಿ ದಾಖಲು ಮಾಡಲಾಗಿದೆ. ಈ ಹತ್ಯಾಕಾಂಡ ನಡೆಸುವ ಮೊದಲೇ ಈ ಕೇಂದ್ರ ಮಂತ್ರಿಗಳು ಪ್ರತಿಭಟನೆ ನಡೆಸಿದರೆ ಸಹಿಸುವುದಿಲ್ಲ ಎಂದು ಬಹಿರಂಗ ವಾಗಿ ಬೆದರಿಸಿದ್ದರು. ಈ ಬೆದರಿಕೆಗೆ ಹೆದರದ ರೈತರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಪ್ರತಿಭಟನೆ ನಡೆಸಿದ್ದರು. ಇದರಿಂದ ಕುಪಿತಗೊಂಡ ಅಜಯ್ ಮಿಶ್ರಾ ತೇಣಿ ರವರ ಮಗ ಆಶಿಶ್ ಮಿಶ್ರಾ ತೇಣಿ, ತಮ್ಮ ತಂದೆಯ ಸರ್ಕಾರಿ ಕಾರನ್ನು ತಾನೇ ಚಲಾಯಿಸಿಕೊಂಡು ಏಕಾಏಕಿ ಪ್ರತಿಭಟನಾ ರೈತರ ಮೇಲೆ ಚಲಾಯಿಸಿ ನಾಲ್ವರು ರೈತರು ಹಾಗೂ ಒಬ್ಬ ಪತ್ರಕರ್ತರನ್ನು ಕೊಲೆ ಮಾಡಿದ ಆರೋಪ ಹೊತ್ತಿದ್ದಾರೆ.
ಈ ಹತ್ಯಾಕಾಂಡ ನಡೆದು ಎರಡು ವರ್ಷ ಆಗಿದ್ದರೂ, ಹಲವಾರು ಪ್ರತಿಭಟನೆಗಳ ಮೂಲಕ ಕ್ರಮ ವಹಿಸುವಂತೆ ಎಚ್ಚರಿಕೆ ನೀಡಿದ್ದರೂ ಕೇಂದ್ರ ಮಂತ್ರಿಯಾಗಿ ಪ್ರಮುಖ ಪಿತೂರಿ ವ್ಯಕ್ತಿಯನ್ನು ಮುಂದುವರೆಸುತ್ತಿರುವುದು ರೈತ ಸಮುದಾಯಕ್ಕೆ ಮಾಡಿರುವ ದ್ರೋಹವಾಗಿದೆ ಎಂದು ಆರೋಪಿಸಿದರು.
ತಹಶೀಲ್ದಾರರ ಪರವಾಗಿ ಶಿರಸ್ತೇದಾರ ಗಿರೀಶ ಜಾಂಬಾವಳಿಕರ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ, ಕಾರ್ಯದರ್ಶಿ ಸಂತೋಷ ನಾಯ್ಕ, ಉಪಾಧ್ಯಕ್ಷ ವೆಂಕಟರಮಣ ಗೌಡ, ರಾಜಗೋಪಾಲ್ ಶೇಟ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
