ರಾಘು ಕಾಕರಮಠ.

ಅಂಕೋಲಾ : ಜಗತ್ತಿನ ಅಸಂಖ್ಯ ಕ್ರೀಡಾ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವದರೊಂದಿಗೆ ವಿಶ್ವಕಪ್ ಕ್ರಿಕೆಟ್ ಇಂದಿನಿ0ದ ವಿದ್ಯುಕ್ತವಾಗಿ ತೆರೆದುಕೊಳ್ಳಲಿದೆ. ಕ್ರಿಕೇಟಿಗೂ ಅಂಕೋಲೆಗೂ ಅವಿನಾಭಾವ ಸಂಬ0ಧ ಹೊಂದಿದ್ದು, ಘಟಾನುಘಟಿ ಕ್ರಿಕೆಟ್ ಆಟಗಾರರನ್ನು ಹೊಂದಿರುವ ಅಂಕೋಲೆಗೆ ವಿಶ್ವಕಪ್‌ನ ಭಾಂಧವ್ಯ ಮೆಲಕು ಹಾಕುವಂತಿದೆ.

ಈ ಬಾರಿ ವಿಶ್ವಕಪ್ ಭಾರತದ ಪಾಲಾಗುವ ನೀರಿಕ್ಷೆ ಹೆಚ್ಚಿದ್ದರಿಂದ ಈ ಬಾರಿ ಭಾರತೀಯರ ಮನದಲ್ಲಿ ವಿಶೇಷ ಕುತೂಹಲ ಹಾಗೂ ಆಸಕ್ತಿ ಹೊರಹೊಮ್ಮಿದೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಶುಭವನ್ನು ಕೋರುತ್ತಾ ಅಂಕೋಲೆಯ ಲೆದರ್‌ಬಾಲ್ ಕ್ರಿಕೆಟ್ ಆಟದ ಕುರಿತು ಒಂದು ಮೆಲುಕು ನೋಟ ಇಂತಿದೆ.

        ಅಂಕೋಲೆಯಲ್ಲಿ ಕ್ರಿಕೆಟ್ :

ಅಂತರರಾಷ್ಟಿçÃಯ ಕ್ರೀಡಾ ಪಟು ಉದಯ ಪ್ರಭು ಅವರ ತವರೂರಾದ ಅಂಕೋಲೆಯಲ್ಲಿ ಕ್ರಿಕೆಟ್ ಅಟಕ್ಕೂ ತನ್ನದೇ ಇತಿಹಾಸ ಇದೆ. ೭೦ ರ ದಶಕದಲ್ಲಿ, ಇಲ್ಲಿ ಪ್ರತಿಷ್ಠೆಯ ಆಟವಾಗಿ ಸಂಘಟಿಸಲ್ಪಡುತ್ತಿದ್ದ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಜಿಲ್ಲಾ ಮಟ್ಟದಲ್ಲಿ ಹೆಸರು ಪಡೆದಿತ್ತು. ಹಿರಿಯ ಸ್ವಾತಂತ್ರö್ಯ ಹೋರಾಟಗಾರರಾದ ದಿವಂಗತ ಹರಿ ಅನಂತ ಪೈ ಅವರ ಪುತ್ರ ಸುಧಾಕರ ಪೈ ಓರ್ವ ಉತ್ತಮ ಕ್ರೀಡಾಪಟು ಆಗಿದ್ದರು. ಅವರ ಅಕಾಲಿಕ ಅಗಲುವಿಕೆಯಿಂದ ಅವರ ನೆನಪಿಗಾಗಿ ಇಲ್ಲಿಯ ಮಠಾಕೇರಿಯ ಪೈ ಕುಟುಂಬದವರು ಅಂಕೋಲಾ ಸ್ಪೋರ್ಟ್ಸ ಕ್ಲಬ್ಬಿನ ಸಹಕಾರದೊಂದಿಗೆ ಪ್ರಾರಂಭಿಸಿದ ‘ಸುಧಾಕರ ಮೆಮೋರಿಯಲ್ ಕ್ರಿಕೆಟ್ ಟ್ರೊಫಿ’ ಅನೇಕ ವರ್ಷಗಳವರೆಗೆ ಇಲ್ಲಿಯ ಜೈಹಿಂದ್ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆದು ಜಿಲ್ಲೆಯ ಮಾತ್ರವಲ್ಲ, ರಾಜ್ಯ ಹಾಗೂ ಹೊರ ರಾಜ್ಯದ ಖ್ಯಾತ ಆಟಗಾರರು ಬಂದು ಆಡಲು ಸಂದರ್ಭ ಒದಗಿಸಿತ್ತು.

        ಪ್ರೋತ್ಸಾಹ ಹಾಗೂ ಸೌಲಭ್ಯದ ಕೊರತೆಯ ನಡುವೆಯೂ…

ಗ್ರಾಮೀಣ ಪ್ರದೇಶವಾದ ಅಂಕೋಲೆಯಲ್ಲಿ ಸಾಕಷ್ಟು ಪ್ರತಿಭೆಗಳಿದ್ದರೂ ಸಹ, ಪ್ರೋತ್ಸಾಹ ಹಾಗೂ ಸೌಲಭ್ಯದ ಕೊರತೆ ಇದ್ದ ಆ ದಿನಗಳಲ್ಲಿ, ಇಲ್ಲಿಯ ಹನುಮಟ್ಟಾದ ಹಿರಿಯ ಕ್ರೀಡಾಭಿಮಾನಿ ಶಿಕ್ಷಕರಾದ ಸದಾನಂದ ನಾಗ್ವೇಕರ ಅವರು ಬಹಳ ಆಸಕ್ತಿಯಿಂದ ‘ಮಹಾಮಾಯಾ ಕ್ರಿಕೆಟ್ ಕ್ಲಬ್’ (ಎಮ್.ಸಿ.ಸಿ.) ಎಂಬ ಕ್ರಿಕೆಟ್ ಬಳಗವನ್ನು ಸ್ಥಾಪಿಸಿಕೊಂಡು ಹಲವಾರು ವರ್ಷಗಳವರೆಗೆ ತಂಡದ ನಾಯಕರಾಗಿ ಸ್ಥಳೀಯ ಆಟಗಾರರಿಗೆ ಹುರುಪನ್ನು ತುಂಬಿ ಮಾರ್ಗದರ್ಶನ ನೀಡುತ್ತ ಗ್ರಾಮೀಣ ಪ್ರತಿಭೆಗಳನ್ನು ಸೂಕ್ತವಾಗಿ ಬೆಳಕಿಗೆ ತರುವಲ್ಲಿ ಯಶಸ್ವಿಯಾದರು. ಅವರ ನೇತೃತ್ವದಲ್ಲಿ ಅಂದು ಹುಟ್ಟಿಕೊಂಡ ಎಮ್.ಸಿ.ಸಿ. ಟೀಮ್ ಆಗ ಜಿಲ್ಲೆಯಲ್ಲಿಯೇ ಉತ್ತಮ ತಂಡವಾಗಿ ಹೊರಹೊಮ್ಮಿತ್ತು.

        ಈ ನಡುವೆ ಅಂಕೋಲೆಯ ಕ್ರಿಕೆಟ್ ಇತಿಹಾಸದಲ್ಲಿ ನೆನಪಿಸಲೇಬೇಕಾದ ಇನ್ನೊರ್ವ ಉತ್ಸಾಹಿ ಕ್ರಿಕೆಟ್ ಪಟುವಾದ ಕಿರಣ ನಾರ್ವೇಕರ ಅವರು, ಜಿಲ್ಲೆಯಲ್ಲಿಯೇ ಪ್ರಪ್ರಥಮ ‘ಯುನಿವರ್ಸಿಟಿ ಬ್ಲೂ’ ಆಗಿ ಹೆಸರು ಮಾಡಿದವರು. ತಮ್ಮ ತನು, ಮನ, ಧನದಿಂದ ಕ್ರಿಕೆಟ್ ಕ್ರೀಡೆಯನ್ನು ಪ್ರೋತ್ಸಾಹಿಸಿದ್ದು ಮಾತ್ರವಲ್ಲ, ಅಂಕೋಲೆಯ ಗ್ರಾಮೀಣ ನೆಲದಲ್ಲಿ ರಾಜ್ಯ ಹಾಗೂ ಅಂತರರಾಜ್ಯ ಮಟ್ಟದ ಕ್ರೀಡಾ ಪಟುಗಳು ಬಂದು ಆಡುವಂತೆ ಅವಕಾಶ ಕಲ್ಪಿಸಿ, ಅಂಕೋಲೆಯ ಯುವ ಪ್ರತಿಭೆಗಳಲ್ಲಿ ಹೊಸ ಛಲವನ್ನು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ತದನಂತರದ ವರ್ಷದಲ್ಲಿ ಯುವ ಕ್ರೀಡಾಭಿಮಾನಿಯಾದ ಮನೋಹರ ನಾಯ್ಕ ಅವರ ನೇತೃತ್ವದಲ್ಲಿ ಅಂಕೋಲೆಯ ಶ್ರೀ ಶಾಂತಾದುರ್ಗಾ ಕ್ರಿಕೆಟ್ ಬಳಗದ ಆಶ್ರಯದಲ್ಲಿ ‘ಅಂಕೋಲಾ ಚಾಲೆಂಜ್ ಕಪ್’ ಎಂಬ ಹೆಸರಿನಲ್ಲಿ ಅನೇಕ ವರ್ಷ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿ ಉತ್ತಮ ರೀತಿಯಲ್ಲಿ ಜರುಗಿತು. ಆ ಕಾಲ ಘಟ್ಟದಲ್ಲಿ ಇಲ್ಲಿಯ ಹೆಸರುವಾಸಿ ಎಮ್.ಸಿ.ಸಿ. ತಂಡವನ್ನೂ ಒಳಗೊಂಡು ಕಿರಣ ಟೀಮ್, ಗುಣು ಮೇಸ್ತಿç ಅವರ ಚಂದನ್ ಟೀಮ್, ಪ್ರಕಾಶ ಮಹಾಲೆ, ಬಾಬು ನಾರ್ವೆಕರ ನೇತೃತ್ವದ ಅಂಕೋಲಾ ಇಲೆವೆನ್ ಟೀಮ್, ಬಂಡಿಬಜಾರದ ಗುರುದತ್ ಟೀಮ್ ಮುಂತಾದವು ಹಲವಾರು ವರ್ಷ ಉತ್ತಮ ಪ್ರದರ್ಶನ ನೀಡಿ ಅಂಕೋಲೆಯ ಕ್ರೀಡಾ ಪ್ರೇಕ್ಷರಿಗೆ ಕ್ರಿಕೆಟ್ ಆಟದ ರಸದೌತಣವನ್ನು ನೀಡಿದ್ದವು.

        ಅಂದು ತಾಲೂಕಿನಲ್ಲಿ ಉತ್ತಮ ಪ್ರತಿಭೆಗಳಾಗಿ ಹೊರಹೊಮ್ಮಿದ ಪ್ರಮೋದ ಮಹಾಲೆ, ಅಬ್ದುಲ್ ಸೈಯದ್ ಹಾಗೂ ಗಂಗಾಧರ ಅಂಕೋಲೆಕರ ಅವರು ಮೊದಲ ಬಾರಿಗೆ ಲೆದರ್‌ಬಾಲ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿ ಜನಪ್ರೀಯರಾಗಿದ್ದರು. ಮಾತ್ರವಲ್ಲ, ಇವರೊಂದಿಗೆ ಯುನಿವರ್ಸಿಟಿ ಬ್ಲೂ ಆಗಿ ಗಮನಸೆಳೆದ ದಾಮೋದರ ರಾಯ್ಕರ, ವಿವೇಕಾನಂದ ನಾಗ್ವೇಕರ, ಶಾಂತಾರಾಮ ಐಗಳ್, ಗೋಪಿನಾಥ ಹನುಮಟ್ಟೇಕರ್, ಪ್ರಕಾಶ ವಾಜಂತ್ರಿ, ಶ್ರೀಕಾಂತ ನಾಯ್ಕ, ಗುರುದತ್ತ ಅಂಕೋಲೆಕರ್, ಶೇಖರ್ ನಾಗ್ವೇಕರ, ಉದಯ ನಾರ್ವೇಕರ, ರಾಮಚಂದ್ರ ಪೆಡ್ನೇಕರ, ಪ್ರಕಾಶ ಕುಂಜಿ, ಅನ್ವರ್ ಮುಲ್ಲಾ ಮುಂತಾದ ಪ್ರತಿಭಾವಂತರ ಕ್ರೀಡಾ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರೊಂದಿಗೆ ಇಲ್ಲಿಯ ಜನಪ್ರಿಯ ಅಂಪಾಯರ್‌ಗಳಾಗಿದ್ದ ಮೋಹನ ಮಹಾಲೆ ಹಾಗೂ ಮೋಹನ ನಾಯ್ಕ ಅವರ ಸೇವೆ ಶ್ಲಾಘನೀಯ. ಮಾತ್ರವಲ್ಲ, ಅಂಕೋಲೆಯ ಲೆದರ್‌ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಬೆನ್ನೆಲುಬಾಗಿ ನಿಂತ ಅಂಕೋಲಾ ಸ್ಪೋರ್ಟ್ಸ ಕ್ಲಬ್‌ನ ಪಾತ್ರ ಮತ್ತು ಜೈಹಿಂದ ಪ್ರೌಡಶಾಲೆಯ ಅಂದಿನ ಮುಖ್ಯಾಧ್ಯಾಪಕರಾಗಿದ್ದ ಆರ್.ಕೆ. ನಾಯಕ ಅವರ ಕ್ರೀಡಾ ಆಸಕ್ತಿ ಹಾಗೂ ಪ್ರೋತ್ಸಾಹ ಸಹ ಅಭಿನಂದನೀಯ.

        ಮಾಯವಾದ ಲೆದರ ಬಾಲ್ :

ಇತ್ತೀಚಿನ ವರ್ಷಗಳಲ್ಲಿ ಅಂಕೋಲೆಯಲ್ಲಿ ‘ಲೆದರ್ ಬಾಲ್ ಕ್ರಿಕೆಟ್’ ಆಟ ಸಂಪೂರ್ಣ ಮಾಯವಾಗಿದ್ದು, ಈಗಿನ ಕ್ರೀಡಾಳುಗಳು ಕೇವಲ ಟೆನಿಸ್ ಪಂದ್ಯಾವಳಿಗೆ ಮಾತ್ರ ಸೀಮಿತರಾಗಿದ್ದಾರೆ. ಈ ದಿಶೆಯಲ್ಲಿ ರಜತÀ ವರ್ಷ ದಾಟಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಾಸಗೋಡದ ಜನತಾ ಕ್ರಿಕೆಟ್ ಪಂದ್ಯಾವಳಿ, ಅಂಕೋಲಾ ಚಾಂಪಿಯನ್ಸ್ ಟ್ರೋಪಿ ಹಾಗೂ ಕೇಣಿ, ಬೇಲೆಕೇರಿ, ಅವರ್ಸಾ, ಹಿಚ್ಕಡ ಮುಂತಾದ ಕಡೆಗಳಲ್ಲಿ ನಡೆಯುವ ಮುಕ್ತವಲಯ ಕ್ರೀಡೆಗಳೆಲ್ಲವೂ ಟೆನಿಸ್ ಬಾಲ್ ಪಂದ್ಯಾವಳಿಗಳೇ ಆಗಿವೆ. ಜಿಲ್ಲೆಯ ಲೆದರ್ ಬಾಲ್ ಕ್ರಿಕೆಟ್ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದ್ದ ಅಂಕೋಲೆಯಲ್ಲಿ ಇಲ್ಲಿಯ ತಮ್ಮಾಣಿ ಪ್ರೇಂಡ್ಸ್ ತಂಡದ ಆಟಗಾರ ಸಂತೋಷ ಅಶೋಕ ಕಾಳೆ ಅವರು ಯುನಿವರ್ಸಿಟಿ ಬ್ಲೂ ಆಗಿ ಗೌರವ ಪಡೆದಿದ್ದು ಇಲ್ಲಿ ಉಲ್ಲೇಖನೀಯ.

ಮುಂಬರುವ ದಿನಗಳಲ್ಲಿ ಲೆದರ್‌ಬಾಲ್ ಕ್ರಿಕೆಟ್ ಆಟ ಮರುಜೀವ ಪಡೆದು ಅಂಕೋಲೆಯ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ಮಿಂಚುವ0ತಾಗಬೇಕು. ಸರಕಾರ ಕೂಡ ವಿಶೇಷವಾಗಿ ಪ್ರೋತ್ಸಾಹ ನೀಡಿದರೇ ಇಲ್ಲಿಯ ನೆಲದ ನೂರಾರು ಪ್ರತಿಭೆಗಳು, ಎಲೆಯ ಮರೆಯ ಕಾಯಿಯಂತೆ ದೂರ ಉಳಿದಿದ್ದನ್ನು ಬೆಳಕಿಗೆ ತರಬಹುದಾಗಿದೆ.

                                                                 ಜೆ. ಪ್ರೇಮಾನಂದ. ಪುರಲಕ್ಕಿಬೇಣಾ.

2007 ರ ವಿಶ್ವಕಪ್‌ನಲ್ಲಿ ಅಂಕೋಲಾದ ಸಲೀಲ ಅಂಕೋಲಾ ಆಡುವದರ ಮೂಲಕ ಅಂಕೋಲಾದ ಹೆಮ್ಮೆಯನ್ನು ಜಾಗತಿಕ ಭೂಪಟದಲ್ಲಿ ಗುರುತಿಸಲು ಕಾರಣರಾದರು. ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದನ್ನು ಸ್ಮರಿಸಬಹುದು. ಇದೀಗ ಸಲೀಲ ಅಂಕೋಲÁ ಮುಂಬೈಯಲ್ಲಿ ಕ್ರಿಕೇಟ್ ಕೋಚರ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂಕೋಲೆಗೆ ಅಂತರಾಷ್ಟಿçÃಯ ಕ್ರಿಕೇಟ್ ಪಟುಗಳಾದ ಸೈಯ್ಯದ ಕಿರ್ಮಾನಿ, ವೆಂಕಟೇಷ ಪ್ರಸಾದ ಆಗಮಿಸಿ ಬಾಸ್ಗೋಡಕ್ಕೆ ಆಗಮಿಸಿ ಜನತಾ ಕ್ರಿಕೇಟ್ ಕ್ಲಭ್‌ನ ಕ್ರಿಕೇಟ್ ವೀಕ್ಷಿಸಿದ್ದು ಅವಿಸ್ಮರಣೀಯ

ಅಂಕೋಲೆಯಲ್ಲಿ ಅನೇಕ ಉತ್ತಮ ಕ್ರಿಕೆಟ್ ಪಟುಗಳಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಭೇತಿ ನೀಡಿದಲ್ಲಿ ಅಂತರಾಷ್ಟಿçÃಯ ಮಟ್ಟದಲ್ಲಿ ಮಿಂಚುವದು ಖಂಡಿತ. ಈ ಬಗ್ಗೆ ಕ್ರೀಡಾ ಪೋತ್ಸಾಹಕರು ವಿಶೇಷವಾಗಿ ಚಿಂತಿಸಿ ರೂಪುರೇಷೆ ಸಿದ್ದ ಪಡಿಸಬೇಕಿದೆ ಎಂಬ ಆಗ್ರಹ ಎಲ್ಲರ ಮನದಲ್ಲಿದೆ.

ಮಂಜುನಾಥ ಲಕ್ಮಾಪುರ.

ಕ್ರಿಕೇಟ್ ಪ್ರೇಮಿ.