ಅಂಕೋಲಾ : ಎಲ್ಲೋ ಕಾಡಿನ ಮಧ್ಯೆ, ಇನ್ನೆಲ್ಲೋ ಮರದ ಪೊಟರೆಯೊಳಗೆ, ಮತ್ತೆಲ್ಲೋ ಗುಹೆಯೊಳಗೆ ಉಡ(ಚಾಪಿ)ಗಳು ಇದ್ದಕ್ಕಿದ್ದಂತೆ ನಾವು ವಾಸಿಸುವ ಮನೆಯಲ್ಲಿ ಕಾಣಸಿಕ್ಕರೆ ಹೇಗಾಗಬೇಡ. ಒಮ್ಮೆಲೇ ಭಯ, ಆತಂಕ, ಆಶ್ಚರ್ಯ, ಕುತೂಹಲ, ಖುಷಿ ಎಲ್ಲವೂ ಏಕಕಾಲದಲ್ಲಿ ಸಂಭವಿಸದೇ ಇರುತ್ತದೆಯೇ..?
ಅದರಲ್ಲೂ ಇಲ್ಲಿನ ದೃಶ್ಯ ಕಂಡು ಬಂದಿದ್ದು, ನಗರದ ಹೆಸ್ಕಾಂ ಇಲಾಖೆ ಸಮೀಪದ ಮನೆಯೊಂದರಲ್ಲಿ. ಎರಡು ಉಡಗಳು ಪರಸ್ಪರ ಕಾಳಗದಲ್ಲಿ ತೊಡಗಿಕೊಂಡು ಭಯ ಹುಟ್ಟಿಸಿದ್ದ ಈ ಅತಿ ವಿರಳ ಹಾಗೂ ವಿನಾಶದ ಅಂಚಿನಲ್ಲಿರುವ ಉಡವನ್ನು ಅರಣ್ಯ ಇಲಾಖೆ ಸಿಬ್ಬಂದಿಯವರು ಹಿಡಿದು ಕಾಡಿಗೆ ಬಿಟ್ಟಿರುವ ಘಟನೆ ನಡೆದಿದೆ.
ಒಂದೆರಡು ನಿಮಿಷವಲ್ಲ..
ಬರೋಬ್ಬರಿ ಮುಕ್ಕಾಲು ಗಂಟೆ ಪರಸ್ಪರ ಕಾದಾಡಿದ ಉಡಗಳೆರಡು ಕೊನೆಗೂ ಯಾರೂ ಗೆಲ್ಲದೆ, ಯಾರೂ ಸೋಲದೆ ನಿಂತಿದ್ದವು. ಈ ಕಾಳಗವು ಮನೆಯಲ್ಲಿ ಮಾತ್ರ ಆತಂಕದ ಸ್ಥಿತಿಯನ್ನು ನಿರ್ಮಾಣ ಮಾಡಿತ್ತು. ಕೂಡಲೆ ಅರಣ್ಯ ಇಲಾಖೆಗೆ ಈ ವಿಷಯವನ್ನು ಗಮನಕ್ಕೆ ತರಲಾಗಿತ್ತು. ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯವರು ಉಡ ಸಂರಕ್ಷಿಸಿ ಕಾಡಿಗೆ ಬಿಡುವಲ್ಲಿ ತಮ್ಮ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಅತಿ ವಿಶಿಷ್ಟ ಸರಿಸೃಪ.
ಉಡಗಳು ಸರಿಸೃಪ ಜಾತಿಗೆ ಸೇರಿದ ಸಸ್ತನಿ. ಒಂದೇ ಸಮಯಕ್ಕೆ ಸುಮಾರು ಮೂವತ್ತರಷ್ಟು ಮೊಟ್ಟೆ ಇಡುವ ಸಾಮರ್ಥ್ಯ ಇವುಗಳಿವೆ. ಮೊಟ್ಟೆಗಳನ್ನು ಮಣ್ಣಿನಲ್ಲಿ ಹೂತಿಡುವ ಇಲ್ಲವೇ, ಮರದ ಬೇರಿನ ಪೊಟರೆಯಲ್ಲಿ ಅಡಗಿಸಿಡುವ ಅಭ್ಯಾಸ ಇವುಗಳಿಗಿದೆ.
ತಮ್ಮ ಕಾಲಿನ ಮೇಲೆ ನಿಂತುಕೊ0ಡು ಸುತ್ತಲ ಪರಿಸರ ಅವಲೋಕನ ಮಾಡುವ ಸಾಮರ್ಥ್ಯ ಇದಕ್ಕಿದೆ. ಪ್ರಮುಖವಾಗಿ ಆಫ್ರಿಕಾ ಖಂಡದಲ್ಲಿ ಹೇರಳವಾಗಿ ಕಾಣ ಸಿಗುವ ಉಡಗಳು, ಏಷ್ಯಾದ ಎಲ್ಲ ರಾಷ್ಟ್ರಗಳಲ್ಲೂ ಇವೆ. ಸಾಮಾನ್ಯವಾಗಿ ಕಾಡಿನಲ್ಲಿ ವಾಸಿಸುವ ಉಡಗಳು ನೀರಿನ ಆಸರೆ ಹುಡುಕಿಕೊಂಡು ಕೆಲವೊಮ್ಮೆ ಕಾಡಿನ ಹೊರಾವರಣಕ್ಕೆ ಬರುತ್ತದೆ.
ಉಡಗಳ ಹಿಡಿತ ಅತ್ಯಂತ ಬಿಗಿ.
ಉಡ ಮನೆಯೊಳಗೆ ಬರಬಾರದು, ಹಾಗೇನಾದರೂ ಬಂದರೆ ಅದರಿಂದ ಅಪಶಕುನ ಎಂಬ ನಂಬಿಕೆ ಜನಪದರಲ್ಲಿದೆ. ಎಲಬು ರೋಗಕ್ಕೆ ಉಡದ ಎಣ್ಣೆ ಉಪಯುಕ್ತವಾಗಿದ್ದು, ಈ ಹಿನ್ನಲೆಯಲ್ಲೆ ಹೆಚ್ಚಿನದಾಗಿ ಉಡವನ್ನು ಕೊಲ್ಲಲಾಗುತ್ತಿದೆ ಎಂದು ತಿಳಿದುಬಂದಿದೆ.
ಉಡಗಳನ್ನು ಕೊಲ್ಲುವುದು ನಿಷಿದ್ಧ:
ಹಿಂದೆಲ್ಲ ಉಡಗಳನ್ನು ಕೊಂದು ಮಾಂಸ ಮಾಡಿ ತಿನ್ನುತ್ತಿದ್ದರು. ಈಗ ಕಾನೂನು ಕಟ್ಟುನಿಟ್ಟಾಗಿದೆ. ಅವುಗಳನ್ನು ಕೊಲ್ಲುವಂತಿಲ್ಲ ಎಂದು ಅರಣ್ಯ ಅಧಿಕಾರಿ ಪ್ರಮೋದ ಪಟಗಾರ ಹೇಳುತ್ತಾರೆ.
ಮನೆಯೊಳಗೆ ಸೇರಿ ಉಪಟಳ ನೀಡುತ್ತಿದ್ದ ಉಡವನ್ನು ವನ್ಯಜೀವಿ ಸಂರಕ್ಷಕ ಶ್ಯಾಮ್ಯೂಲ್ ಅವರ ಸಹಾಯದಿಂದ ಸಂರಕ್ಷಿಸಿ ಗೂಳೆ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.ಈ ಸಂದರ್ಭದಲ್ಲಿ ಉಪವಲಯ ಅರಣ್ಯ ಅಧಿಕಾರಿ ಪ್ರಮೋದ ಪಟಗಾರ, ಗಸ್ತು ಅರಣ್ಯ ರಕ್ಷಕ ಲಿಂಗಣ್ಣ, ಅರಣ್ಯ ವೀಕ್ಷಕರದ ಸುಧಾಕರ ಗಾಂವಕರ, ಚೇತನ ನಾಯ್ಕ, ವಿಶ್ವನಾಥ ನಾಯ್ಕ, ಸುಧಾಕರ ನಾಯ್ಕ ಮುಂತಾದವರು ಇದ್ದರು.