ಅಂಕೋಲಾ : ತಾಲೂಕಿನ ಸುಂಕಸಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡ್ಲಗದ್ದೆ ಗ್ರಾಮದ ನಿವಾಸಿ ಸೀತಾ ಸುಕ್ರು ಅಂಬಿಗ (54) ಎಂಬುವವರಿಗೆ ಮನೆಯಬಳಿ ನಾಗರ ಹಾವು ಕಚ್ಚಿದ ಪರಿಣಾಮ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ಹಾವು ಕಡಿದ ಬಳಿಕ ಆಕೆಯನ್ನು ಯಲ್ಲಾಪುರ‌ ತಾಲೂಕಾಸ್ಪತ್ರೆಗೆ ಸೇರಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಹುಬ್ಬಳ್ಳಿಯ ಕಿಮ್ಸ್ ಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಸಲಹೆ ನೀಡಿದ ಮೇರೆಗೆ ಆಕೆಯನ್ನು ಹುಬ್ಬಳ್ಳಿಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯ ಅವರು ಕೊನೆಯುಸಿರೆಳೆದರು.

ವೈದ್ಯರಿಗೆ ಚಿಕಿತ್ಸೆ ನೀಡಲು ಸಹಾಯವಾಗಲೆಂದು ಕಚ್ಚಿದ ಹಾವಿನ ಪೊಟೊವನ್ನು ತೋರಿಸಿದೆವು. ಯಲ್ಲಾಪುರ ತಾಲೂಕಾಸ್ಪತ್ರೆಯಲ್ಲಿ‌ ಹಾವು ಕಚ್ಚಿದ್ದಕ್ಕೂ ಔಷಧಿ, ಚಿಕಿತ್ಸೆ ಸಿಗುವುದಿಲ್ಲವೇ? ಎಂದು ಗ್ರಾ‌.ಪಂ ಸದಸ್ಯ ಚಂದು ನಾಯ್ಕ ಕೊಡ್ಲಗದ್ದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಯಲ್ಲಾಪುರ ತಾಲೂಕಾಸ್ಪತ್ರೆಯ ತಾಲೂಕು ವೈದ್ಯಾಧಿಕಾರಿ ನರೇಂದ್ರ ಪವಾರ್ ರನ್ನು ಸಂಪರ್ಕಿಸಿದಾಗ ಹಾವು ಕಚ್ಚಿದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತರಲು ತಡಮಾಡಿದ ಪರಿಣಾಮ ವಿಷ ದೇಹದ ತುಂಬೆಲ್ಲ ಪಸರಿಸಿಕೊಂಡಿತ್ತು. ನಾವು ನಮಗೆ ಸಿಕ್ಕಿದ 20 ನಿಮಿಷಗಳ ಅವಧಿಯಲ್ಲಿ ಹಾವು ಕಡಿತದ ಚುಚ್ಚು ಮದ್ದು ಸೇರಿದಂತೆ ಅಗತ್ಯವಿರುವ ಎಲ್ಲಾ ಚಿಕಿತ್ಸೆ ನೀಡಿದ್ದೆವೆ. ಹಾವು ಕಚ್ಚಿದ ವ್ಯಕ್ತಿಗೆ ಹೃದಯ ಸಂಬಂಧಿ ಸಮಸ್ಯೆಗಳು, ಇನ್ನಿತರ ಆರೋಗ್ಯ ಸಂಬಂಧಿತ ಸಮಸ್ಯೆ ಹಾಗೂ ರಕ್ತದ ಒತ್ತಡ ಹೆಚ್ಚಾದ ಕಾರಣ ಆಸ್ಪತ್ರೆಯ ಅಂಬುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ಕಳುಹಿಸಿಕೊಡಲಾಗಿತ್ತು. ಆದರೆ ದುರದೃಷ್ಟವಶಾತ್ ಮಾರ್ಗಮಧ್ಯ ಅವರು ಸಾವನಪ್ಪಿದ್ದಾರೆ ಎಂದು ತಿಳಿಸಿದರು.