ರಾಘು ಕಾಕರಮಠ.
ಅಂಕೋಲಾ : ತಾಲೂಕಿನ ಬೇಲೆಕೇರಿ ಮೂಲದವರಾದ, ಉಡುಪಿಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿರುವ ರಾಜೇಶ ಹಮ್ಮಣ್ಣ ನಾಯಕ ಅವರಲ್ಲಿ ಶೇ. 143.66 ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿಯಿರುವಾಗಿ ಲೋಕಾಯುಕ್ತ ಅಧಿಕಾರಿಗಳು ಆರೋಪಿಸಿ, ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ರಾಜೇಶ ನಾಯಕ ಅವರ ಕುಂದಾಪುರದಲ್ಲಿರುವ ಸ್ವಂತ ಮನೆ, ಉಡುಪಿಯಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಬೇಲೆಕೇರಿಯ ಜೈನ ಬೀರ ದೇವಸ್ಥಾನದ ಬಳಿ ಇರುವ ಮೂಲ ಮನೆ ಸೇರಿ ಮೂರು ಕಡೆ ಶೋಧ ನಡೆಸಿದಾಗ ಲೋಕಾಯುಕ್ತಕ್ಕೆ 1.10 ಕೋಟಿ ರೂ ಚರಾಸ್ತಿ, 1 ಕೋಟಿ ರೂ ಸ್ಥಿರಾಸ್ತಿ ಒಟ್ಟು ಸೇರಿ 2.10 ಕೋಟಿ ರೂ ಆದಾಯ ಮೀರಿದ ಆಸ್ತಿ ಇರುವದಾಗಿ ಆರೋಪಿಸಿ ಎಫ್.ಎಐ.ಆರ್. ದಾಖಲಾಗಿದೆ.
ಆದರೆ ರಾಜೇಶ ನಾಯಕ ಅವರಿಗೆ ಸೀಬರ್ಡ ಯೋಜನೆಯಿಂದಲೆ ಕೋಟ್ಯಾಂತರ ರೂಪಾಯಿ ಹಣ ಹಾಗೂ ಕುಟುಂಬದ ಕೃಷಿ ಆದಾಯ ಹಾಗೂ ಪತ್ನಿಯ ಮನೆಯವರಿಂದಲೂ ಆದಾಯವಿತ್ತು ಎನ್ನಲಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ರಾಜೇಶ ಹಮ್ಮಣ್ಣ ನಾಯಕ ಅವರು ನಿರಪರಾಧಿಯಾಗುತ್ತಾರೆ ಎಂದು ಕುಟುಂಬದವರು ಆತ್ಮವಿಶ್ವಾಸದ ಮೂಲಕ ಹೇಳಿಕೊಂಡಿದ್ದಾರೆ.
ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿರುವ ರಾಜೇಶ ನಾಯಕ ಏಳಿಗೆಯನ್ನು ಸಹಿಸದ ಕೆಲವರಿಂದ ಲೋಕಾಯುಕ್ತಕ್ಕೆ ದೂರು ಅರ್ಜಿಯು ಹೋಗಿರಬಹುದು ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ.
ಏನಾಗಿತ್ತು..?
ಉಡುಪಿಯ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿರುವ ರಾಜೇಶ ಹಮ್ಮಣ್ಣ ನಾಯಕ ಅವರ ಮೂಲ ಮನೆ ಬೇಲೆಕೇರಿಯಲ್ಲಿ ಸೋಮವಾರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.
ರಾಜೇಶ ನಾಯಕ ಅವರು ಆದಾಯಕ್ಕಿಂತಲೂ ಹೆಚ್ಚಿನದಾಗಿ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಬಲವಾದ ಆರೋಪದ ಮೇಲೆ ರಾಜೇಶ ನಾಯಕ ಅವರ ಕುಂದಾಪುರದಲ್ಲಿರುವ ಸ್ವಂತ ಮನೆ, ಉಡುಪಿಯಲ್ಲಿರುವ ವಾಣಿಜ್ಯ ತೆರಿಗೆ ಇಲಾಖೆ ಮತ್ತು ಬೇಲೆಕೇರಿಯ ಜೈನ ಬೀರ ದೇವಸ್ಥಾನದ ಬಳಿ ಇರುವ ಮೂಲ ಮನೆಗೆ ಸೋಮವಾರ ಬೆಳಿಗ್ಗೆ 6 ಗಂಟೆಯ ವೇಳೆಗೆ ಏಕ ಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.
ಮಂಗಳೂರಿನ ಲೋಕಾಯುಕ್ತ ಇನ್ಸ್ಪೆಕ್ಟರ ಸುರೇಶಕುಮಾರ ಬಿ ನೇತ್ರತ್ವದಲ್ಲಿ ಆರು ಸಿಬ್ಬಂದಿಗಳನ್ನೊಳಗೊಂಡ ತಂಡವು ಬೇಲೆಕೇರಿಯಲ್ಲಿ ದಾಳಿ ನಡೆಸಿ, ಮನೆಯಲ್ಲಿದ್ದ ತಂದೆ- ತಾಯಿ ಅವರಿಂದ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಲಾಗಿತ್ತು.
