ಲಫಂಗ್ ಜ್ಯೋತಿಷಿಗಳ ಮಾತಿನ ಮೋಡಿಗೆ ಮರುಳಾಗುವ ಲವ್ ಬಡ್ಸ್೯ಗಳು.!

ರಾಘು ಕಾಕರಮಠ.

ಅಂಕೋಲಾ. ಪ್ರೀತಿ-ಪ್ರೇಮದ ಹುಚ್ಚು ಲೋಕದಲ್ಲಿರುವ ಪ್ರೇಮಿಗಳಿಗೆ, ನಿಮ್ಮ ಪ್ರೇಮ ಅಮರವಾಗಲು ಹಾಗೆ ನಿಮ್ಮ ತಂದೆ ತಾಯಿಗಳಿಂದ ಯಾವುದೇ ತಕರಾರು ಬರದಿರುವಂತೆ ಜ್ಯೋತಿಷ್ಯದ ಮೂಲಕ ಪರಿಹಾರ ನೀಡುತ್ತೇವೆ ಎಂದು ಬೊಗಳೆ ಬಿಟ್ಟು ಪ್ರೇಮದ ಅಮಲಿನಲ್ಲಿರುವ ಲವ ಬರ್ಡ್ಸ್ಗಳಿಂದ ಹಣ ಕೀಳುತ್ತಿರುವ ಜ್ಯೋತಿಷಿಗಳು ಅಂಕೋಲಾದಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ಹೌದು.. ಅಂಕೋಲಾದ  ಪ್ರೇಮಿಗಳ ಅಡ್ಡೆಯಂತಾಗಿರುವ ಕೋಟೆ ದೇವಾಸ್ಥಾನದ ಆವಾರ, ನಗರದ ಕಾಲೇಜು ಹಾಗೂ ಸಿನಿಮಾ ಥೇಟರ್ ಎದುರು ನಿಂತು ತಮ್ಮ ಪ್ರೇಮದ ವೇದನೆಯಲ್ಲಿರುವ ಪ್ರೇಮಿಗಳಿಗೆ ಜೋತಿಷಿಗಳು ಪ್ರೇಮದ ಜೋತಿಷ್ಯ ಹೇಳಲು ನಿಲ್ಲುತ್ತಾರೆ.

ತಮ್ಮದೇ ಆದ ಲೋಕದಲ್ಲಿರುವ ಪ್ರೇಮಿಗಳ ಬಳಿ ಬಂದು ನಿಮ್ಮ ಪ್ರೀತಿಯ ಸುಗಮ ದಾರಿಗೆ ನಾನು ಪರಿಹಾರ ಮಾಡಿಕೊಡುತ್ತೇನೆ. ಏನು ಹೆದರುವದು ಬೇಡಾ ಎಂದು ಹೇಳುತ್ತಾ, ಅವರನ್ನು ನಂಬಿಸಿ ಹಣ ಕೀಳುವದನ್ನೆ ಇವರು ದಂದೆಯನ್ನಾಗಿ ಮಾಡಿಕೊಂಡಿರುವದು ತಿಳಿದುಬಂದಿದೆ.

ಹಾಗೆ ಚಪಲ ತಿರಿಸಿಕೊಂಡ ಚೆನ್ನಿಗರಾಯನಿಗೆ ಪ್ರಿಯತಮೆಯಿಂದ ಮುಕ್ತಿ ಹೊಂದಲು ಈ ಜೋತಿಷ್ಯಗಳು ಪರಿಹಾರ ನೀಡುತ್ತೇವೆ ಎಂದು ಅವರಿಂದಲೂ ಹಣ ಕೀಳುವ ಈ ಲಫಂಗ್ ಜ್ಯೋತಿಷಿಗಳ ಮೋಸಕ್ಕೆ ಅಂಕೋಲಾದ ಎಷ್ಟೋ ಪ್ರೇಮಿಗಳು ಬಲಿಯಾಗಿದ್ದು ಕೂಡ ವಿರಹದಷ್ಟೇ ವಿಪರ್ಯಾಸದ ಸಂಗತಿಯಾಗಿದೆ.

“ಉದರ ಪೋಷಣಂ ಬಹುಕೃತ ವೇಷಂ” ಎಂಬ ಗಾದೆಯಂತೆ ಉತ್ತರ ಕರ್ನಾಟಕದ ಬಾಗಲಕೋಟ ಸೇರಿದಂತೆ ಇನ್ನಿತರ ಜಿಲ್ಲೆಗಳಿಂದ ಇಲ್ಲಿಗೆ ವಲಸೆ ಬಂದಿರುವ ಏಳೆಂಟು ಜನರ ತಂಡವೊಂದು ಇಲ್ಲಿನ ಕೆಲ ವಸತಿ ಗೃಹದಲ್ಲಿ ಬಾಡಿಗೆ ಕೊಠಡಿ ಪಡೆದು ವಾಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಸೂರ‍್ಯೋದಯವಾದೊಡನೆ ಶುಭ್ರವಾದ ಅಂಗಿ ಹಾಗೂ ಲುಂಗಿ ಧರಿಸಿ ಹೆಗಲಿಗೊಂದು ಕಪ್ಪು ಬಣ್ಣದ ಬ್ಯಾಗನ್ನು ಏರಿಸಿ ವಸತಿ ಗೃಹದಿಂದ ಹೊರಬೀಳುವ ಈ ತಂಡದ ಸದಸ್ಯರು ಅಮಾಯಕರಿಂದ ಹಣ ಸುಲಿಯುವ ಹೊಂಚು ಹಾಕಿ ಬೇರೆ-ಬೇರೆ ಕಡೆ ತೆರಳುತ್ತಾರೆ.

ಕುಟುಂಬದ ಯಜಮಾನರು ಕೆಲಸಕ್ಕೆ ಹೋದಾಗ ಮಹಿಳೆಯರು-ಮಕ್ಕಳು ಮನೆಯಲ್ಲಿರುವದನ್ನು ಸೂಕ್ಷ್ಮವಾಗಿ ಗಮನಿಸುವ ಈ ಸ್ವಯಂ ಘೋಷಿತ ಜ್ಯೋತಿಷಿಗಳು ಅಂತಹ ಮನೆಗಳಿಗೆ ನುಗ್ಗಿ, ನಿಮಗೆ ಇನ್ನೂ ಕೆಲ ದಿನಗಳಲ್ಲಿ ಲಕ್ಷ್ಮೀ ದೇವಿಯ ಅನುಗ್ರಹದಿಂದ ನಿಮ್ಮ ಮನೆಯಲ್ಲಿ ಧನ ಸಂಪತ್ತು ತುಂಬಿ ತುಳುಕಲಿದೆ ಎಂದು ಹಳಿ ಇಲ್ಲದ ರೈಲು ಬಿಟ್ಟು 50 ರೂ ಹಣ ಕೊಟ್ಟರೆ ಎಲ್ಲವನ್ನು ಸುವಿಸ್ತಾರವಾಗಿ ವಿವರಿಸುವದಾಗಿ ನಂಬಿಸಿ, ಮರಳು ಮಾಡುತ್ತಾರೆ.

ಹಣ ಸಿಕ್ಕಿದ ಕೂಡಲೇ ಒಂದು ಬಿಳಿ ಹಾಳೆಯ ಮೇಲೆ ಕೆಲವಷ್ಟು ಸಂಖ್ಯೆಗಳನ್ನು ಬರೆಯಲು ತಿಳಿಸುತ್ತಾರೆ. ಸಂಖ್ಯೆ ಬರೆದ ತಕ್ಷಣ ಲೆಕ್ಕಾಚಾರ ಮಾಡುವ ನಾಟಕ ಮಾಡಿ ನಿಮ್ಮ ಮನೆಯಲ್ಲಿ ಧನ ಸಂಪತ್ತು ತುಂಬಿ ತುಳಕ ಬೇಕಾದರೆ ಮನೆಯಲ್ಲಿರುವ ಗ್ರಹ ದೋಷವನ್ನು ಪರಿಹಾರ ಮಾಡಲು 2000 ರೂ ಮೌಲ್ಯದ ಕೆಲವೊಂದು ಅಮೂಲ್ಯವಾದ ವಸ್ತುಗಳನ್ನು ತಾವು ರಿಯಾಯತಿ ದರದಲ್ಲಿ ಅಂದರೆ 1000 ರೂಗಳಿಗೆ ನೀಡುತ್ತೇವೆ. ಈ ವಸ್ತುಗಳು ನಮ್ಮಲ್ಲಿ ಬಿಟ್ಟರೆ ಮತ್ತೆಲ್ಲೂ ಸಿಗಲಾರದು.ಈ ವಸ್ತುಗಳನ್ನು 111 ದಿನಗಳ ಕಾಲ ಮನೆಯ ದೇವರ ಕೋಣೆಯಲ್ಲಿಟ್ಟು ಪೂಜೆ ನಡೆಸಿ ನಂತರ ನದಿಗೆ ಹಾಕಿದರೆ ಎಲ್ಲ ವಿಘ್ನಗಳು ದೂರವಾಗುತ್ತವೆ ಎಂದು ಬೊಗಳೆ ಮಾತನಾಡಿ ಹಣ ಲಪಟಾಯಿಸಿಕೊಂಡು ಹೊಗುತ್ತಾರೆ.

ಈ ಸ್ವಯಂ ಘೋಷಿತ ಜೋತಿಷಿಗಳು ಶಾಲಾ ಕಾಲೇಜಿಗೆ ಹೋಗುವ ಹದಿಹರೆಯದ ವಯಸ್ಸಿನ ವಿದ್ಯಾರ್ಥಿಗಳು ಹಾಗೂ ಕೆಲ ಮಾರಾಟ ಕಂಪನಿಯ ಪ್ರತಿನಿಧಿಗಳಿಗೆ ತಮ್ಮ ಮಾತಿನ ಮೋಡಿಯ ಮೂಲಕ ಮರಳು ಗೊಳಿಸಿ ಅವರಿಂದ ಹಣ ಪೀಕುತ್ತಾರೆ.

ಪೋಲಿಸ್ ಇಲಾಖೆಯವರು ಅಮಾಯಕರನ್ನು ಮರಳುಗೊಳಿಸಿ ಹಣ ದೋಚುವ ಇಂತಹ ಸ್ವಯಂ ಘೋಷಿತ ಜ್ಯೋತಿಷಿಗಳ ಮೇಲೊಂದು ಹದ್ದಿನ ಕಣ್ಣಿಡಬೇಕೆಂದು ಅಂಕೋಲಾದ ಪ್ರಜ್ಞಾವಂತ ನಾಗರಿಕರ ಅಗ್ರಹವಾಗಿದೆ.

ಅಂಕೋಲೆಯಲ್ಲಿ ಇತ್ತೀಚಿಗೆ ನಕಲಿ ಜ್ಯೋತಿಷಿಗಳ ಹಾವಳಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಂಡಲ್ಲಿ ಜನರು ಮರಳು ಆಗುವದನ್ನು ತಪ್ಪಿಸಬಹುದು. ಜನರು ಕೂಡ ಈ ಬಗ್ಗೆ ಎಚ್ಚರದಿಂದ ಇರುವದು ಸೂಕ್ತವಾದದು.

   ಸುನೀಲ ನಾಯ್ಕ. ಬೇಲೆಕೇರಿ