ಅಂಕೋಲಾ : ಭಾರತದ ಹಾರುವ ರತ್ನವೆಂದೇ ಪ್ರಸಿದ್ಧವಾದ ಅಟ್ಲಾಸ್ ಪತಂಗವು ಭಾನುವಾರ ಇಲ್ಲಿನ ಬೇಳಾಬಂದರಿನ ಐಟೈ ಕಾಲೇಜಿನ ಉಪನ್ಯಾಸಕ, ಬೊಬ್ರವಾಡದ ಕೃಷ್ಣಾ ನಾಯ್ಕ ಅವರ ನಿವಾಸದ ಬಳಿ ಕಂಡು ಬಂದಿತು.
ಬೃಹತ್ ಗಾತ್ರದ ಸಾಟುರ್ನಿಡೆ ಕುಟುಂಬಕ್ಕೆ ಸೇರಿದ ಈ ಪತಂಗವು ಪಶ್ಚಿಮ ಘಟ್ಟ ಮತ್ತು ಉಷ್ಣವಲಯದ ಕಾಡುಗಳಲ್ಲಿ ಆಗಾಗ ತನ್ನ ಇರುವಿಕೆಯನ್ನು ಸಾಬೀತುಪಡಿಸುತ್ತಿದೆ.
ಜೀವ ವಿಜ್ಞಾನಿಗಳ ಪ್ರಕಾರ ಅಳಿವಿನ ಅಂಚಿನಲ್ಲಿರುವ ಇವುಗಳ ಆವಾಸ ಸ್ಥಾನವು ಅರಣ್ಯ ನಾಶ ಪರಿಸರ ಮಾಲಿನ್ಯದಿಂದಾಗಿ ದಕ್ಕೆಗೊಳಗಾಗಿದೆ. ಪಾಶ್ಚಿಮಾತ್ಯರಲ್ಲಿ ಇವುಗಳನ್ನು ಸಂಗ್ರಹಿಸುವ ಪ್ರವೃತ್ತಿ ಕಂಡುಬರುತ್ತದೆ. ಅಪೂರ್ವ ವರ್ಣ ವಿನ್ಯಾಸದಿಂದ ಗಮನಸೆಳೆಯುವ ಇದರ ರೆಕ್ಕೆಗಳು ೨೫ ಸೆ ಮೀ ವರೆಗೆ ಅಗಲವಾಗಿರುತ್ತದೆ.
ರೆಕ್ಕೆಗಳ ಅಂಚಿನಲ್ಲಿರುವ ಪಾರದರ್ಶಕ ಕಿಡಕಿಗಳಂತಹ ತ್ರಿಕೋನಾಕೃತಿಯ ಕಣ್ಣುಗಳು ಶತ್ರುಗಳಿಂದ ರಕ್ಷಣೆ ಪಡೆದುಕೊಳ್ಳಲು ನೆರವಾಗುತ್ತವೆ. ೮ ರಿಂದ ೧೦ ಕಿ ಮೀ ವರೆಗೆ ತನ್ನ ಎಂಟೆನಾಗಳಿಂದ ಸಂಗಾತಿಗೆ ಸಂದೇಶ ರವಾನಿಸುವ ಸಾಮರ್ಥ್ಯ ಈ ಪತಂಗಕ್ಕಿರುತ್ತದೆ.
