ವರದಿ: ದಿನಕರ ನಾಯ್ಕ,ಅಲಗೇರಿ

ಅಂಕೋಲಾ: ಊರಿನ ಯಾವುದೇ ಮನೆಯಲ್ಲಿ ಸಾವು ಸಂಭವಿಸಿದರೆ ಹಿಂದೂ ಧಾರ್ಮಿಕ ಪದ್ಧತಿಯ ಪ್ರಕಾರ ಕ್ರಮ ರೂಪಿಸಿ ವಿಧಿ ವಿಧಾನಗಳನ್ನು ತಿಳಿಸಿ ಅಂತ್ಯಕ್ರಿಯೆ ಸಂಪನ್ನಗೊಳಿಸುವ ಪರಿಣತಿ ಹೊಂದಿದ್ದ ಅಲಗೇರಿಯ ಮಹಾಬಲೇಶ್ವರ ಖೇಮು ನಾಯ್ಕ (58) ರಸ್ತೆ ಅಪಘಾತದಲ್ಲಿ ದೈವಾಧೀನರಗಿದ್ದಾರೆ.

ನಿನ್ನೆ ಡಿಸಂಬರ 26 ರಂದು ರಾಷ್ಟ್ರೀಯ ಹೆದ್ದಾರಿ 66 ರ ಬಾಳೆಗುಳಿ ಸಮೀಪ ಮಹಿಂದ್ರಾ ಜೀಪ ಬಡಿದ ಪರಿಣಾಮ ಸೈಕಲ್ ಮೇಲೆ ತೆರಳುತ್ತಿದ್ದ ಮಹಾಬಲೇಶ್ವರ ನಾಯ್ಕ ತಲೆಗೆ ಮಾರಣಾಂತಿಕ ಗಾಯವಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.

ಧಾರ್ಮಿಕ ಕಳಕಳಿಯ ಕ್ರಿಯಾಶೀಲ ವ್ಯಕ್ತಿಯಾಗಿದ್ದ ಇವರು ಕ್ಷತ್ರಿಯ ಕೋಮರಪಂಥ ಅಭಿವೃದ್ಧಿ ಸಂಘ ಹಾಗೂ ಶ್ರೀ ಹೊಲೆವೇಟರ ಗಣೇಶೋತ್ಸವ ಸಮಿತಿಯ ಸಂಸ್ಥಾಪಕ ಸದಸ್ಯರಾಗಿ ಪ್ರಸ್ತುತ ದಿನಗಳ ವರೆಗೂ ಸೇವೆ ಸಲ್ಲಿಸುತ್ತಿದ್ದರು. ಧಾರ್ಮಿಕ ಕಾರ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ಕೆಲಸವನ್ನು ಸಹ ಯಾವ ನವ ಯುವಕರಿಗಿಂತ ಕಡಿಮೆಯಿಲ್ಲದಂತೆ ಮಾಡಿ ಮುಗಿಸುವ ಉತ್ಸಾಹಿಯಾಗಿದ್ದರು.

ಸದಾ ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಇವರು ಊರಿನ ಯಾವುದೇ ಸಮಾಜ ಬಾಂಧವರ ಮನೆಯಲ್ಲಿ ಸಾವು ಸಂಭವಿಸಿದರೆ ಮೊದಲು ತೆರಳಿ ಅಂತ್ಯ ಕ್ರಿಯೆಯ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ತಿಳಿಸಿ ಅಚ್ಚುಕಟ್ಟಾಗಿ ಪೂರ್ಣಗೊಳಿಸುವ ಜ್ಞಾನ ಅವರಿಗಿತ್ತು. ಹಾಗಾಗಿ ಅವರು ಕಳೆದ 35 ವರ್ಷಗಳಿಂದ ನಿಸ್ವಾರ್ಥವಾಗಿ ಸ್ಮಶಾನ ಕಾರ್ಯ ಮಾಡುತ್ತಾ ಬಂದಿದ್ದರು.

ಊರಿನ ಎಲ್ಲಾ ಹಿರಿಯ ಹಾಗೂ ಕಿರಿಯವರೊಂದಿಗೆ ಅನ್ಯೋನ್ಯವಾಗಿದ್ದು ಅಪಾರ ಸ್ನೇಹ ಬಳಗವನ್ನು ಸಂಪಾದಿಸಿದ್ದರು. ಇವರ ಸ್ನೇಹಿತರು ಪ್ರೀತಿಯಿಂದ ಎಂ.ಕೆ. ಎಂದು ಕರೆಯುತ್ತಿದ್ದರು.

ಇವರು ಓರ್ವ ಪುತ್ರ, ಓರ್ವ ಪುತ್ರಿ, ಹೆಂಡತಿ, ಮೂವರು ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಶ್ರೀ ಹೊಲೆವೇಟರ ಗಣೇಶೋತ್ಸವ ಸಮಿತಿ, ಕ್ಷತ್ರಿಯ ಕೋಮರಪಂಥ ಅಭಿವೃದ್ಧಿ ಸಂಘ ಅಲಗೇರಿ ಹಾಗೂ ಊರ ಸಮಸ್ತ ನಾಗರಿಕರು ಸೇರಿದಂತೆ ಹಲವರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.