ವರದಿ: ದಿನಕರ ನಾಯ್ಕ. ಅಲಗೇರಿ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66 ರ ಅಲಗೇರಿ ಕಡೆಗೆ ಹೊಂದಿಕೊಂಡಿರುವ ರಸ್ತೆಗೆ ಡಿವೈಡರ್ ನಿರ್ಮಿಸಿಕೊಡುವಂತೆ ಹಾಗೂ ತಾಲೂಕಿನಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಅಂಕೋಲಾ ಸರಕಾರಿ ದವಾಖಾನೆ ಯಲ್ಲಿ, ಪ್ರಸೂತಿ ತಜ್ಞ ವೈದ್ಯರ ನೇಮಕ ಮಾಡುವಂತೆ ಒತ್ತಾಯಿಸಿ ಜ.9 ರ ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಅರೆಬೆತ್ತಲೆ ಮೆರವಣಿಗೆ ಹಾಗೂ ಬ್ರಹತ್ ಪ್ರತಿಭಟನೆ ನಡೆಯಲಿದೆ.

       ಬೆಳಿಗ್ಗೆ ಪಟ್ಟಣದ ಶಾಂತಾದುರ್ಗಾ ದೇವಸ್ಥಾನದ ಹತ್ತಿರ ಎಲ್ಲರು ಸೇರಿ ಅಲ್ಲಿಂದ ತಹಶೀಲ್ದಾರ ಆಫಿಸವರೆಗೆ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುವುದು.

      ಐ.ಆರ್.ಬಿ. ಕಾಮಗಾರಿಯ ವಿಳಂಬ ಹಾಗೂ ಅಲಗೇರಿ ಕ್ರಾಸ್ ಬಳಿ ಡಿವೈಡರ್ ಮಾಡದೆ ಇದ್ದರಿಂದ ಅವರ್ಸಾದಿಂದ ಬಾಳೆಗುಳಿ ಕ್ರಾಸ್ ವರೆಗೆ ಬಹುತೇಕ ಅಪಘಾತಗಳು ಸಂಭವಿಸುತ್ತಿದ್ದು ಕಳೆದ ಒಂದು ತಿಂಗಳಲ್ಲಿ 8 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಆದ್ದರಿಂದ ಆದಷ್ಟು ಬೇಗ ಡಿವೈಡರ್ ನಿರ್ಮಿಸಿ ಮುಂಬರುವ ಅನಾಹುತಗಳನ್ನಾದರು ತಡೆಯಬೇಕು.

     ಅಪಘಾತವಾದ ನಂತರ ಹೆಚ್ಚಿನ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ಒಂದೂ ತುರ್ತು ಆಸ್ಪತ್ರೆ ಇಲ್ಲದಿರುವುದರಿಂದ ಹಲವಾರು ಜೀವಗಳು ಮರಣ ಹೊಂದಿವೆ. ಹಾಗಾಗಿ ಜಿಲ್ಲೆಯಲ್ಲಿ ಅತಿ ಶೀಘ್ರದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಬೇಕು.

      ಹಾಗೂ ಅಂಕೋಲಾ ಸರಕಾರಿ ದವಾಖಾನೆ ಯಲ್ಲಿ ಪ್ರಸೂತಿ ತಜ್ಞ ವೈದ್ಯರ ನೇಮಕ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಇರಿಸಿ ಪ್ರತಿಭಟನೆ ನಡೆಸಿ ತಹಶೀಲ್ದಾರಗೆ ಮನವಿ ಸಲ್ಲಿಸಲಾಗುವುದು. 

          ಕಾರಣ ತಾಲೂಕಿನ ಎಲ್ಲ ಸಾರ್ವಜನಿಕರು, ಅಲಗೇರಿ ಬಡಗೇರಿ ಕಂತ್ರಿಯ ಯುವಕರು, ಆ ಭಾಗದ ಜನಪ್ರತಿನಿಧಿಗಳು ಬಂದು ಈ ಪ್ರತಿಭಟನೆಗೆ ತಾವೆಲ್ಲರೂ ಕೈ ಜೋಡಿಸಬೇಕೆಂದು ಶ್ರೀ ಸಣ್ಣಮ್ಮ ದೇವಿ ಸಾಂಸ್ಕೃತಿಕ ಕಲಾ ತಂಡ, ಶ್ರೀ ಸಣ್ಣಮ್ಮದೇವಿ ತರುಣ ಮಿತ್ರ ಮಂಡಳಿ, ಶ್ರೀ ಗಜಾನನ ಭಜನಾ ಮಂಡಳಿ ಅಲಗೇರಿ ಹಾಗೂ ಸಮಸ್ತ ಊರ ನಾಗರಿಕರು ಮನವಿಯಲ್ಲಿ ತಿಳಿಸಿದ್ದಾರೆ.