ಕಾಂಗ್ರೆಸ್ ಗ್ಯಾರೆಂಟಿ ಯೋಜನೆಯ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಪುರುಷೋತ್ತಮ ನಾಯ್ಕ ನೇಮಕ

ಅಂಕೋಲಾ : ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಆಪ್ತರಾಗಿ ಗುರುತಿಸಿಕೊಂಡಿರುವ ಅಂಕೋಲಾದ ಶಿರೂರಿನ ಪುರುಷೋತ್ತಮ ದೇವಪ್ಪ ನಾಯ್ಕ ಅವರಿಗೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಗ್ಯಾರೆಂಟಿ ಯೋಜನೆಯ ಪ್ರಾಧಿಕಾರದ ಉಪಾಧ್ಯಕ್ಷರಾಗಿ ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ರಾಜ್ಯ ಸರಕಾರ ನೀಡಿರುವ ಗ್ಯಾರೆಂಟಿ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗ್ಯಾರೆಂಟಿ ಯೋಜನೆಯ ಪ್ರಾಧಿಕಾರವನ್ನು ಸ್ಥಾಪಿಸಿದ್ದು, ಅದರಲ್ಲಿ ಪುರುಷೋತ್ತಮ ನಾಯ್ಕ ಅವರಿಗೆ ಉಕ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆದೇಶ ನೀಡಿದ್ದಾರೆ.
ಕಳೆದ ೩೫ ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ ಪುರುಷೋತ್ತಮ ದೇವಪ್ಪ ನಾಯ್ಕ ಅವರು ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿ ಹೆಮ್ಮೆಗೆ ಪಾತ್ರರಾಗಿದ್ದಾರೆ. ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷರಾಗಿ, ಯೂಥ ಕಾಂಗ್ರೆಸ್‌ನ ಜಿಲ್ಲಾ ಉಪಾಧ್ಯಕ್ಷರಾಗಿ, ಇಂಟೆಕ್ ವಿಭಾಗದ ಜಿಲ್ಲಾ ನಿರ್ದೇಶಕನಾಗಿ, ಅಂಕೋಲಾ ಬ್ಲಾಕ್ ಕಾಂಗ್ರೆಸ್‌ನ ಉಪಾಧ್ಯಕ್ಷನಾಗಿ, ಬೆಳಸೆ ಗ್ರಾಮ ಪಂಚಾಯತನ ಉಪಾಧ್ಯಕ್ಷನಾಗಿ ಪ್ರಸ್ತುತ ನೆಹರು ಮಂಚ್‌ನ ಜಿಲ್ಲಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿದ್ಯಾರ್ಥಿ ಜೀವನದಿಂದಲೆ ಕ್ರಿಯಾಶೀಲವಾಗಿ ಗುರುತಿಸಿಕೊಂಡಿರುವ ಪುರುಷೋತ್ತಮ ನಾಯ್ಕ ಅವರು ಜಿಸಿ ಕಾಲೇಜಿನ ಜನರಲ್ ಸೆಕ್ರಟರಿಯಾಗಿ ಹಾಗೂ ಬಿಎಡ್ ಕಾಲೇಜಿನ ಜನರಲ್ ಸೆಕ್ರಟರಿಯಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದರು. ಹೀಗೆ ಹತ್ತಾರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿರುವ ಪುರುಷೋತ್ತಮ ದೇವಪ್ಪ ನಾಯ್ಕ ಅವರಿಗೆ ಗ್ಯಾರೆಂಟಿ ಯೋಜನೆಯ ಪ್ರಾಧಿಕಾರದ ಉಪಾಧ್ಯಕ್ಷರಾಗಿ ನೇಮಕಗೊಂಡಿರುವದು ಅವರ ಆಪ್ತ ವಲಯದಲ್ಲಿ ಹರ್ಷಕ್ಕೆ ಕಾರಣವಾಗಿದೆ.
