ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕುತ್ತಿಗೆಗೆ ಚಾಕು ಹಾಕಿದ ಪ್ರಕರಣ : ಮಣಿಕಂಠ ಗೌಡ ಅರೆಸ್ಟ್

ವರದಿ : ದಿನಕರ ನಾಯ್ಕ. ಅಲಗೇರಿ.
ಅಂಕೋಲಾ : ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕುತ್ತಿಗೆಗೆ ಚಾಕು ಹಾಕಿ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಕೆಳಗಿನ ಮಂಜಗುಣಿಯ ಹೊನ್ನೆಬೈಲನ ಮಣಿಕಂಠ ರಾಮಾ ಗೌಡ ಅವರನ್ನು ಅಂಕೋಲಾ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದಾರೆ.
ಘಟನೆ ವಿವರ :
ಫೆ. 10 ರ ಭಾನುವಾರದಂದು ಬೆಳಂಬಾರದ ಮುಡ್ರಾಣಿಯ ಗಂಗಾಧರ ಸುಕ್ರು ಗೌಡ ಅವರು ಕುಂಬಾರಕೇರಿಯ ಎಮ್.ಎಸ್.ಐ.ಎಲ್. ಬಳಿ ತನ್ನ ಮನೆಗೆ ಹೋಗಲು ನಿಂತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಆರೋಪಿ ಮಣಿಕಂಠ ರಾಮಾ ಗೌಡ ಅವರು ಗಂಗಾಧರ ಗೌಡನನ್ನು ಬೆಳಂಬಾರಕ್ಕೆ ಬಿಡುತ್ತೇನೆ ಎಂದು ತನ್ನ ಬೈಕನಲ್ಲಿ ಕುಳಿಸಿಕೊಂಡು ಸಾಗಿದ್ದಾನೆ.
ಬೈಕ್‌ನಲ್ಲಿ ಸಾಗುತ್ತಿರುವಾಗ ಈ ವ್ಯಕ್ತಿ ಇಲ್ಲೆ ಮಂಜಗುಣಿಯಲ್ಲಿ ಬಳಿ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಮಂಜುಗುಣಿಯ ತಾರಿಯ ಬಳಿಯ ನಿರ್ಜನ ಪ್ರದೇಶಕ್ಕೆ ಗಂಗಾಧರ ಗೌಡನನ್ನು ಕರೆದುಕೊಂಡು ಹೋಗಿ ಹಿಂಬದಿಯಿ0ದ ಬಂದು ಕುತ್ತಿಗೆಯನ್ನು ಹಿಡಿದುಕೊಂಡು ನಿರ್ದಾಕ್ಷಿಣ್ಯವಾಗಿ ಕುತ್ತಿಗೆಯನ್ನು ಚಾಕುವಿನಿಂದ ತಿವಿದಿದ್ದ ಎಂದು ಗಂಗಾಧರ ಗೌಡ ಪೊಲೀಸ್ ದೂರು ನೀಡಿದ್ದ. ಪಿಎಸೈ ಉದ್ದಪ್ಪ ಧರೆಪ್ಪನವರ್ ಕೊಲೆ ಪ್ರಯತ್ನದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ತನಿಖೆಯ ವೇಳೆ ಮಣಿಕಂಠ ರಾಮಾ ಗೌಡನನ್ನು ಗಂಗಾಧರ ಗೌಡ ಗುರುತಿಸಿದ ಹಿನ್ನಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದ ಸತ್ಯಾನುಸತ್ಯತೆಯನ್ನು ಅರಿಯಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
