ಹಾವು ಕಚ್ಚಿ ಯುವಕ ಸಾವು

ಅಂಕೋಲಾ : ಗದ್ದೆಯಲ್ಲಿ ತರಗೆಲೆ ತುಂಬುತ್ತಿರುವಾಗ ಹಾವು ಕಚ್ಚಿ ಮೃತಪಟ್ಟ ಘಟನೆ ತಾಲೂಕಿನ ಗುಂಡಬಾಳಾ ಗ್ರಾಮದ ಸಂತೆಪೇಟೆಯಲ್ಲಿ ಭಾನುವಾರ ನಡೆದಿದೆ.
ಸಂತೆಪೇಟೆಯ ನಿವಾಸಿ, ಕ್ರೀಯಾಶೀಲ ತರುಣ ರಾಜೀವ ಜಟ್ಟು ಗೌಡ (37 ವರ್ಷ) ಮೃತಪಟ್ಟವ. ಇಂದು (ಭಾನುವಾರ) ಬೆಳಿಗ್ಗೆ ಅವರದೇ ಗದ್ದೆಯಲ್ಲಿ, ಪತ್ನೊಯೊಂದಿಗೆ ಸೇರಿ ತರಗೆಲೆ ತುಂಬುತ್ತಿರುವಾಗ ಹಾವು ಕಚ್ಚಿತ್ತು. ಚಿಕಿತ್ಸೆಗಾಗಿ ಆಸ್ಪತೆಗೆ ಸಾಗಿಸಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ರಾಜೀವ ಮೃತಪಟ್ಟಿದ್ದಾರೆ.
ಸದಾ ಕೃಷಿ ಕಾರ್ಯದಲ್ಲಿ ತೊಡಗಿಕೊಂಡು ದುಡಿಮೆಯನ್ನೇ ಬದುಕಾಗಿಸಿಕೊಂಡಿದ್ದ ರಾಜೀವನ ಮರಣದಿಂದ ಕುಟುಂಬದ ಆಧಾರ ಸ್ಥಂಭವೇ ಕಳಚಿ ಬಿದ್ದಂತಾಗಿದೆ.
ಕೃಷಿಯ ಜೊತೆಗೆ ಬಿಡುವಿನ ಸಮಯದಲ್ಲಿ ಕ್ರೀಡೆ, ಸಾಂಸ್ಕೃತಿಕ ಮತ್ತು ಊರಿನ ಅಭಿವೃದ್ಧಿಪರ ಚಟುವಟಿಕೆಗಳಲ್ಲಿ ಭಾಗವಹಿಸಿ ಅನೇಕ ಯುವಕರಿಗೆ ಮಾದರಿಯಾಗಿದ್ದ ರಾಜೀವನ ನಿಧನಕ್ಕೆ ಶಾಸಕ ಸತೀಶ್ ಸೈಲ್, ರಮಾನಂದ ನಾಯ್ಕ. ಕೊಂಡಳ್ಳಿ ಸೇರಿದಂತೆ ಊರಿನ ನಾಗರಿಕರು ಸಂತಾಪ ಸೂಚಿಸಿದ್ದಾರೆ.
ಮೃತ ರಾಜೀವ ತಂದೆ, ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.