ಒತ್ತಡದಲ್ಲಿ ಉದ್ಯೋಗಿಗಳು: ಸಂಕಟದಲ್ಲಿ ಸಾಲಗಾರರುಹೆಸರಿಗೆ ಮಾತ್ರ ಸಣ್ಣ ಸಾಲ ಜನರಿಗೆ ಮಾತ್ರ ದೊಡ್ಡ ಉಪಟಳ
ವರದಿ: ದಿನಕರ ನಾಯ್ಕ ಅಲಗೇರಿ

ಅಂಕೋಲಾ: ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿ ಕುಖ್ಯಾತಿ ಗಳಿಸಿರುವ ಮೈಕ್ರೋ ಫೈನಾನ್ಸ್ ಎಂಬ ಸಾಲ ನೀಡುವ ಸಂಸ್ಥೆಗಳು ಇಂದು ತಾಲೂಕಿನ ಗ್ರಾಮೀಣ ಜನರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಸುಲಭ ಸಾಲ ಎಂದು ತೆಗೆದುಕೊಂಡಿದ್ದಕ್ಕೆ ಕಂತು ತುಂಬುವುದಕ್ಕೆ ಕೊಂಚ ತಡವಾದರೂ ಸಹ ಮನೆ ಬಾಗಿಲಿಗೆ ಬಂದು ಬಾಯಿಗೆ ಬಂದ ಹಾಗೆ ಬಯ್ಯುವುದು, ನಿಂದಿಸುವುದು ಪರಿಪಾಠವಾಗಿ ಬೆಳೆದು ಬಂದಿದ್ದು ಪ್ರಜ್ಞಾವಂತ ನಾಗರಿಕರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ.

ಕಷ್ಟಕ್ಕೆ ಮೈಕ್ರೋ ಫೈನಾನ್ಸ್ ಮೊರೆ ಹೋಗುವ ಬಡವರು:
ಸಾಲ ಕೊಡುವಾಗ ಯಾವುದೇ ಪ್ರಮುಖ ದಾಖಲೆಗಳನ್ನು ಪಡೆಯದೆ ಅತಿ ಸುಲಭವಾಗಿ ತಟಕ್ಕನೆ ನಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ಹಾಕಿ ಬಿಡುತ್ತಾರೆ. ಆರ್ಥಿಕ ಅಡಚಣೆಯಲ್ಲಿ ಇರುವ ಬಡ ಜನ ಅನಿವಾರ್ಯವಾಗಿ ಸಾಲ ಪಡೆದುಕೊಳ್ಳುತ್ತಾರೆ. ಅದರೆ ಅಸಲಿ ಆಟ ಶುರುವಾಗುವುದು ನಂತರದಲ್ಲಿ.
ಹೌದು…. ಸಾಲ ಪಡೆದ ದಿನದಿಂದ ಯಾವುದಾದರೂ ಒಂದು ತಿಂಗಳು ಕಂತಿನ ಹಣ ತುಂಬಲು ಸ್ವಲ್ಪ ತಡವಾದರೂ ಸಹ ಎರಡು ಮೂರು ಜನ ಒಂದೇ ಬೈಕ್ ಇರಿ ಹಠಾತ್ತನೆ ಸಾಲಗಾರರ ಮನೆ ಮುಂದೆ ಪ್ರತ್ಯಕ್ಷರಾಗಿ ಬಿಡುತ್ತಾರೆ. ಹಣದ ಬಾಬತ್ತು ಕೊಡುವ ವರೆಗೂ ಅಲ್ಲಿಂದ ಕಡಲುವುದಿಲ್ಲ. ಬೆಳಗ್ಗೆಯಿಂದಲೇ ಸಾಲಗಾರರ ಮನೆಯ ಮುಂದೆ ಜಾಂಡಾ ಹೂಡಿ ಬಾಯಿಗೆ ಬಂದ ಹಾಗೆ ಬಯ್ಯುತ್ತ, ಅಕ್ಕಪಕ್ಕದವರ ಮುಂದೆ ಅವಮಾನಿಸುತ್ತಾ ಹಣಕ್ಕಾಗಿ ಅತೀವ ಪೀಡಿಸುತ್ತಾರೆ. ಎಷ್ಟೋ ಬಡ ಸಾಲಗಾರರು ಇವರ ಕಾಟ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ ಕುರಿತು ಸಹ ವರದಿಯಾಗಿವೆ. ಕಣ್ಣ ಮುಂದೆಯೇ ಅನ್ಯಾಯ ನಡೆದರೂ ಖಂಡಿಸಲಾಗದ ಅಸಹಾಯಕ ಪರಿಸ್ಥಿತಿಗೆ ತಲುಪಿದ್ದಾನೆ ಪಡಪಾಯಿ ಬಡವ.
ಟಾರ್ಗೆಟ್ ಪೂರೈಸದಿದ್ದರೆ ಕೆಲಸದಿಂದ ವಜಾ:
ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲಗಾರರಿಗೆ ಕಿರುಕುಳದ ಟಾರ್ಗೆಟ್ ಹಿಂದೆಯೇ ಕೊಟ್ಟಿರುತ್ತಾರೆ. ಕಂತು ತರುವ ವರೆಗೆ ಫೀಲ್ಡ್ ಉದ್ಯೋಗಿಗಳಿಂದ ಸಾಲಗಾರರಿಗೆ ಕಿರುಕುಳ, ಕಂತು ತರದಿದ್ದರೆ ಫೈನಾನ್ಸ್ ಮಾಲೀಕನಿಂದ ಫೀಲ್ಡ್ ಉದ್ಯೋಗಿಗೆ ಕಿರುಕುಳ. ಒಟ್ಟಿನಲ್ಲಿ ಮೈಕ್ರೋ ಫೈನಾನ್ಸ್ ಎಂಬ ಮಹಾಮಾರಿ ಕಿರುಕುಲದ ತಳಹದಿಯ ಮೇಲೆಯೇ ನಿರ್ಮಾಣಗೊಂಡಿದೆ ಎಂದರೆ ತಪ್ಪಾಗಲಾರದು.
ಕೇವಲ 40 ಸಾವಿರಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದ ಉದ್ಯೋಗಿ:
ಮೈಕ್ರೋ ಫೈನಾನ್ಸ್ ಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಅಲ್ಲಿ ಸಾಲ ತೆಗೆದುಕೊಂಡ ಸಾಲಗಾರರಿಗಿಂತ ಬಡವರಾಗಿದ್ದಾರೆ. ಸಾಲಗಾರರಿಂದ ವಸೂಲಿ ಮಾಡಿದ 40 ಸಾವಿರ ಹಣ ಎಲ್ಲಿಯೋ ಕಾಣೆಯಾಗಿದ್ದ ಕಾರಣಕ್ಕೆ ಉದ್ಯೋಗಿ ಆತ್ಮಹತ್ಯೆಗೆ ಯತ್ನಿಸಿ ಅದೃಷ್ಟವಶಾತ್ ಬದುಕಿದ್ದ. ನಂತರ ಈ ಕುರಿತು ಅಂಕೋಲಾ ಠಾಣೆಯಲ್ಲಿ ದೂರು ದಾಖಲಾಗಿ ಸಿಪಿಐ ಚಂದ್ರಶೇಖರ್ ಮಠಪತಿ ಅಸ್ಪತ್ರೆಗೆ ತೆರಳಿ ಆತನ ಆರೋಗ್ಯ ವಿಚಾರಿಸಿ ವಿಚಾರಣೆ ನಡೆಸಿದ್ದರು. ಕೇವಲ 40 ಸಾವಿರಕ್ಕೆ ಆ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸುತ್ತಾನೆಂದರೆ ಆತ ಕೆಲಸ ನಿರ್ವಹಿಸುವ ಸಂಸ್ಥೆ ಎಷ್ಟು ಭಯದ ವಾತಾವರಣ ನಿರ್ಮಿಸಿರಬಹುದು. ಜೊತೆಗೆ ಆತ ಎಷ್ಟು ಬಡ ಉದ್ಯೋಗಿಯಾಗಿರಬಹುದು ಎಂಬುದನ್ನು ಊಹಿಸಬಹುದು.
ಮಾಲೆ ಹಾಕಿದರೂ ಬಿಡಲಿಲ್ಲ, ಮುಂದಿನ ವಾರ ತುಂಬುತ್ತೇನೆಂದರೂ ಬಿಡಲಿಲ್ಲ
ಪಟ್ಟಣದ ನಿವಾಸಿಯೊಬ್ಬರು ಕಳೆದ ಎರಡು ತಿಂಗಳ ಹಿಂದೆ ಅಯ್ಯಪ್ಪ ಮಾಲೆ ಧಾರಣೆ ಮಾಡಿದ್ದರು. ಸನ್ನಿದಾನದಲ್ಲಿ ಹೆಚ್ಚಿನ ಕಾಲ ಕಳೆಯಬೇಕೆಂಬ ಮನಸ್ಸಿನಿಂದ ಬೇಗನೆ ಕೆಲಸದಿಂದ ಹಿಂತಿರುಗುತ್ತಿದ್ದರು. ಕಾರಣ ಅವರಿಗೆ ದಿನಗೂಲಿ ಕಡಿಮೆ ಸಿಗುತ್ತಿತ್ತು. ಕೇವಲ ಎರಡು ವಾರದ 1 ಸಾವಿರ ರೂ ಕಟ್ಟಬಾಕಿ ಮಾಡಿದ್ದಕ್ಕೆ ಫೀಲ್ಡ್ ಸಿಬ್ಬಂದಿ ಅವರ ಮನೆಯ ಮುಂದೆ ಬಂದು ರಾದ್ದಾಂತ ಮಾಡಿದ. ಸನ್ನಿದಾನದಲ್ಲಿ ಇರುವ ಮಾಹಿತಿ ಪಡೆದು ಸೀದಾ ಅಲ್ಲಿಗೆ ಬಂದು ಬಾಯಿಗೆ ಬಂದ ಹಾಗೆ ಮಾತನಾಡಿದ. ಹಣ ಕೊಡುವ ವರೆಗೂ ಇಲ್ಲಿಂದ ಹೋಗುವುದಿಲ್ಲ ಎಂದು ಬೆಳಗ್ಗೆಯಿಂದ ಮದ್ಯಾಹ್ನದ ವರೆಗೂ ಅಲ್ಲಿಯೇ ಕಾದು ನಂತರ ತಮ್ಮ ಮ್ಯಾನೇಜರ್ ನೊಂದಿಗೆ ಬಂದು ಪೀಡಿಸಿದ್ದರು. ಕೊನೆಗೆ ಆ ಸಾಲಗಾರ ಅವರಿವರ ಕಡೆ ಹಣ ಪಡೆದು ಹೇಗೋ ಹಣ ಹೊಂದಿಸಿ ಕೊಟ್ಟಿದ್ದರಿಂದ ಸಂಜೆ 7 ಗಂಟೆಗೆ ಅಧಿಕಾರಿಗಳು ಅಲ್ಲಿಂದ ತೆರಳಿದ್ದಾರೆ.