ಬಸ್‌ನ ನಾಮಫಲಕ ಬಿದ್ದು ವಿದ್ಯಾರ್ಥಿಗೆ ಗಾಯ;
ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
ಅಂಕೋಲಾ : ಸಾರಿಗೆ ಬಸ್‌ನ ಹಿಂಭಾಗದಲ್ಲಿ ಅಳವಡಿಸಲಾಗಿದ್ದ ನಾಮಫಲಕ (ಬೋರ್ಡ್) ಬಿದ್ದು ವಿದ್ಯಾರ್ಥಿಯ ತಲೆಗೆ ತಗುಲಿ ಗಾಯಗೊಂಡ ಘಟನೆ ಅಂಕೋಲಾ ತಾಲೂಕಿನ ಅಜ್ಜಿಕ್ಕಟ್ಟೆ ಸಮೀಪ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಪ್ರಥಮ ಚಿಕಿತ್ಸೆ ನೀಡದೆ ಮಧ್ಯರಸ್ತೆಯಲ್ಲಿಯೇ ಇಳಿಸಿ ಬಸ್ ಮುಂದಕ್ಕೆ ಸಾಗಿದರೆಂಬ ಆರೋಪದ ಮೇರೆಗೆ ಬಸ್ ನಿರ್ವಾಹಕಿಯ ವಿರುದ್ಧ ದೂರು ನೀಡಲಾಗಿದೆ.

ಪೂಜಗೇರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿ ತ್ರೀಮೂರ್ತಿ ಶಾಂತಾ ನಾಯ್ಕ ಗಾಯಗೊಂಡ ವಿದ್ಯಾರ್ಥಿ. ಭಟ್ಕಳ ಡಿಪೋದ ನಿರ್ವಾಹಕಿ ಸುನೀತಾ ವಿರುದ್ಧ ವಿದ್ಯಾರ್ಥಿಯ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಫೆಬ್ರವರಿ 23ರಂದು ಸೋಮವಾರ, ಕಾಲೇಜು ಮುಗಿಸಿಕೊಂಡು ಮನೆಗೆ ತೆರಳಲು ತ್ರೀಮೂರ್ತಿ ನಾಯ್ಕ ಭಟ್ಕಳ–ಕಾರವಾರ ಮಾರ್ಗದ ಬಸ್ ಏರಿದ್ದರು. ಮಧ್ಯಾಹ್ನ 2.15ಕ್ಕೆ ಅಂಕೋಲಾ ಬಸ್ ನಿಲ್ದಾಣದಿಂದ ಹೊರಟ ಬಸ್ ಅಜ್ಜಿಕ್ಕಟ್ಟೆ ಬಳಿ ಸಾಗುತ್ತಿರುವ ವೇಳೆ ಹಿಂಭಾಗದಲ್ಲಿ ಅಳವಡಿಸಿದ್ದ ನಾಮಫಲಕ ಬಿದ್ದು ತಲೆಗೆ ಬಡಿದಿದೆ. ಪರಿಣಾಮ ವಿದ್ಯಾರ್ಥಿಗೆ ತೀವ್ರ ರಕ್ತಸ್ರಾವವಾಗಿದೆ.
ರಕ್ತಸ್ರಾವವಾಗುತ್ತಿರುವುದನ್ನು ಕಂಡಿದ್ದರೂ ನಿರ್ವಾಹಕಿ ತಕ್ಷಣ ಪ್ರಥಮ ಚಿಕಿತ್ಸೆ ನೀಡದೆ, ಸ್ವಲ್ಪ ದೂರದಲ್ಲೇ ವಿದ್ಯಾರ್ಥಿಯನ್ನು ಬಸ್‌ನಿಂದ ಕೆಳಗಿಳಿಸಿ ಮುಂದಕ್ಕೆ ತೆರಳಿದ್ದಾರೆ ಎಂಬ ಆರೋಪ ದೂರಿನಲ್ಲಿ ಉಲ್ಲೇಖವಾಗಿದೆ. ಅಸ್ವಸ್ಥನಾದ ವಿದ್ಯಾರ್ಥಿಯು ಹೇಗೋ ಬೇರೆ ವಾಹನ ಹಿಡಿದು ಮನೆಗೆ ತೆರಳಿದ್ದಾನೆ ಎಂದು ತಿಳಿದು ಬಂದಿದೆ.ಈ ಘಟನೆ ಪ್ರಯಾಣಿಕರಲ್ಲಿಯೂ ಆಕ್ರೋಶಕ್ಕೆ ಕಾರಣವಾಗಿದೆ. ನಿರ್ವಾಹಕಿಯ ಕರ್ತವ್ಯ ನಿರ್ವಹಣೆಯ ಬಗ್ಗೆ ಪ್ರಯಾಣಿಕರಿಂದಲೂ ಅಪಸ್ವರಗಳು ಕೇಳಿಬಂದಿವೆ. ಘಟನೆಗೆ ಸಂಬAಧಿಸಿದAತೆ ಪೊಲೀಸರು ನಿರ್ವಾಹಕಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.