ಶಿರಸಿ: ಅತೀ ವೃಷ್ಠಿಯಿಂದ ಹಾನಿಗೊಳಗಾದ ಜಿಲ್ಲೆಯ  ಅಡಿಕೆ, ಭತ್ತ, ಜೋಳ, ಶುಂಠಿ ಸೇರಿದಂತೆ ಹಲವು ಬೆಳೆಗಳ ರೈತರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಡಿಸಿಸಿ ಅದ್ಯಕ್ಷ ಭೀಮಣ್ಣ ಟಿ ನಾಯ್ಕ ಸರಕಾರಕ್ಕೆ ಆಗ್ರಹಿಸಿದ್ದಾರೆ. 

ಅವರು ಶುಕ್ರವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತ ಅತಿಯಾದ ಮಳೆಯು ಅನಾಹುತ ಸೃಷ್ಠಿಮಾಡಿ ರೈತ ಸಮೂಹವನ್ನು ಸಂಕಷ್ಟಕ್ಕೆ ತಳ್ಳಿದೆ. ಔಷಧ ಸಿಂಪಡಿಸಿದರೂ ಕೊಳೆರೋಗ ನಿಯಂತ್ರಣವಾಗಿಲ್ಲ. ಸರ್ಕಾರ ಇಂತಹ ಸಂದರ್ಭದಲ್ಲಿ ರೈತರಿಗೆ ತಕ್ಷಣ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಅಡಿಕೆ ಬೆಳೆಗಾರರಿಗೆ ಪ್ರಪ್ರಥಮವಾಗಿ ಪರಿಹಾರ ನೀಡಿದ್ದು ಸಿದ್ದರಾಮಯ್ಯನವರ ನೇತ್ರತ್ವದ ಸರಕಾರ.ಆ ಸಂಧರ್ಭದಲ್ಲಿ ಅಡಿಕೆ ಬೆಳೆಗಾರರ ಬಗ್ಗೆ ವಿಶೇಷವಾಗಿ ಕಾಳಜಿ ವ್ಯಕ್ತಪಡಿಸಿದ ನಮ್ಮ ನಾಯಕರಾದ ದೇಶಪಾಂಡೆಯವರು ಅಧಿಕಾರಿಗಳ ತಂಡದಿಂದ ಪರಿಶೀಲಿಸಿ ಕೊಳೆರೋಗ ನಿಯಂತ್ರಣಕ್ಕೆ ಪರಿಹಾರ ಕ್ರಮ ಕೈಗೊಳ್ಳಲಾಗಿತ್ತು.ಅದರ ಪರಿಣಾಮವಾಗಿ ರೈತರಿಗೆ ಪರಿಹಾರ ಘೋಷಣೆಮಾಡಲಾಗಿತ್ತು.ಆದರೆ ಇಂದಿನ ಸರ್ಕಾರ ಅಂತಹ ಯಾವುದೇ ಸ್ಪಂದನೆ ಕ್ರಮ ತೆಗೆದುಕೊಳ್ಲುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.ನಮ್ಮ ಭಾಗದಲ್ಲಿ ಶೇ,80 ಕ್ಕೂ ಹೆಚ್ಚು ಅಡಿಕೆ ತೋಟಗಳಲ್ಲಿ ಕೊಳೆ ರೋಗ ಬಂದಿದ್ದು ರೈತರು ಕಂಗಾಲಾಗಿದ್ದಾರೆ.ಈ ಬಗ್ಗೆ      ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಲು ಒತ್ತಾಯಿಸಲಾಗುವುದೆಂದರು.

      ಜಿಲ್ಲೆಯ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮತ್ತು ತಾಲೂಕಿನ ಗ್ರಾಮೀಣ, ನಗರ ಭಾಗದ  ರಸ್ತೆಗಳು ಕೂಡಾ ಸಂಪೂರ್ಣ ಹಾನಿಗೊಳಗಾದರೂ  ಎಂಜಿನಿಯರ್ ಗಳು ಇದುವರೆಗೂ ಸರಿಪಡಿಸದೇ ಕಣ್ಮುಚ್ಚಿ ಕುಳಿತಿದ್ದಾರೆ. ನಗರದಲ್ಲಿ ಇದೀಗ ಮಾಡಿದ ರಸ್ತೆಗಳು ಒಂದೇ ಮಳೆಗೆ ಚಿಂದಿಚಿಂದಿಯಂತಾಗಿರುವುದು ಕಳಪೆ ಗುಣಮಟ್ಟ ಎದ್ದು ತೋರಿಸುತ್ತದೆ ಎಂದರು.

        ದೇಶಪಾಂಡೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಶಿರಸಿ ಬಸ್ ನಿಲ್ದಾಣಕ್ಕೆ ಅನುದಾನ ಮಂಜೂರು ಮಾಡಿದ್ದರು. ನಂತರ ಹೆಚ್ಚುವರಿ ಅನುದಾನ ಬಿಡುಗಡೆಯಾಗಿತ್ತು. ಕಾಮಗಾರಿ ಆರಂಭಿಸಲಾಗಿದ್ದು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೆಲಸ ಆರಂಭಿಸಬೇಕಿತ್ತು. ಐದು ರಸ್ತೆ ವೃತ್ತದ ಬಳಿ ಪ್ರಯಾಣಿಕರಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದರು.  ಬಸ್ ನಿಲುಗಡೆಗೆ ಅನುಕೂಲ ಸ್ಥಳಗಳನ್ನು ಗುರುತಿಸಿ ಅಲ್ಲಿ ತಾತ್ಕಾಲಿಕ ಸೌಲಭ್ಯ ಕಲ್ಪಿಸಬೇಕು ಎಂದರು.

     ಜಿಲ್ಲೆಯಲ್ಲಿ ಕಾಂಗ್ರೆಸ್ ಸುಭದ್ರವಾಗಿದೆ. ಸೋಮವಾರದಿಂದ ಜಿಲ್ಲೆಯಲ್ಲಿ ಪ್ರವಾಸ ಆರಂಭಿಸಿ ಪಕ್ಷ ಸಂಘಟಿಸಲಾಗುವುದು ಎಂದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗವತ, ವಕ್ತಾರ ದೀಪಕ ದೊಡ್ಡೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಸತೀಶ ನಾಯ್ಕ, ನಾಗರಾಜ ಮುರ್ಡೇಶ್ವರ, ಗೀತಾ ಭೋವಿ ಉಪಸ್ಥಿತರಿದ್ದರು.

Attachments area