ರಾಘು ಕಾಕರಮಠ.

ಅಂಕೋಲಾ : ವಿಧಾನಸಭೆಯ ಹೈಡ್ರಾಮದ ಚುನಾವಣೆಯ ಪ್ರಹಸನ ಮುಗಿದು ಎರಡು ತಿಂಗಳು ಕಳೆಯುತ್ತ ಬಂದಿದೆ. ಚುನಾವಣೆಯ ವೇಳೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಅಂಕೋಲಾದ ಹಟ್ಟಿಕೇರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಅನುಮತಿ ಇಲ್ಲದೆ ಬಸ್ ಬುಕ್ ಮಾಡಿರುವ ಆರೋಪದ ಮೇಲೆ ಅಂಕೋಲಾದ ಬಿಜೆಪಿಯ ನಿಷ್ಠಾವಂತ 10 ಕಾರ್ಯಕರ್ತರ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಕೋಲಾ ಪಟ್ಟಣ ಪಂಚಾಯತದ ಮಾಜಿ ಸದಸ್ಯ ಕೃಷ್ಣಕುಮಾರ ಮಹಾಲೆ, ಬೊಬ್ರವಾಡಾದ ಸಂದೀಪ ಬಾಬಾ ಪಡ್ತಿ, ಪುರಸಭೆಯ ಸದಸ್ಯ ನಾಗರಾಜ್ ಐಗಳ, ಪ್ರವೀಣ ಬೊಮ್ಮಯ್ಯ ನಾಯರ, ಕನಸಿಗದ್ದೆಯ ರಜತ್ ರವಿಕುಮಾರ ನಾಯ್ಕ, ಕೆರೆಕಂಟೆಯ ಸುಬ್ರಮಣ್ಯ ವಿಠ್ಠಲ ರೇವಣಕರ, ಮಠಾಕೇರಿಯ ನಾಗೇಶ ದೇವಿದಾಸ ಕಿಣಿ,. ಪುರಲಕ್ಕಿಬೇಣದ ಮಂಜುನಾಥ ಪ್ರಹ್ಲಾದ ಆಗೇರ, ಲಕ್ಷ್ಮೇಶ್ವರದ ನಾಗರಾಜ್ ಗಣೇಶ ನಾಯ್ಕ, ಬೊಬ್ರವಾಡದ ಬಾಲಕೃಷ್ಣ ನಾರಾಯಣ ನಾಯ್ಕ ಅವರ ಮೇಲೆ ಎಫ್‌ಐಆರ್ ದಾಖಲಾಗಿದೆ.

ಕಾರವಾರದ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ಆರ್ ದೂರು ನೀಡಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ. ಪಿಎಸೈ ಜಿ.ಪಿ. ಶಿರಶಿಕರ ಪ್ರಕರಣ ದಾಖಲಿಸಿದ್ದಾರೆ. ಚುನಾವಣಾ ಅಧಿಕಾರಿಗಳ ಅನುಮತಿಯನ್ನು ಪಡೆಯದೆ, ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಬುಕ್ ಮಾಡಿ, ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಈ ಕುರಿತು ಸದರಿ ಕಾರ್ಯಕರ್ತರಿಗೆ ನೋಟಿಸ್ ನೀಡಿದಾಗ, ಇದಕ್ಕೆ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಉತ್ತರ ನೀಡಿದ್ದಾರೆ. ಆದರೆ ಸದರಿ ಕಾರ್ಯಕ್ರಮ ಚುನಾವಣಾ ಸಂಬಂದಿತ ಕಾರ್ಯಕ್ರವಾಗಿದ್ದರಿಂದ ಸದರಿ ಎಲ್ಲಾ ಕಾರ್ಯಕರ್ತರ ವಿರುಧ್ದ ಕಲಂ 171(ಎಚ್) ಐಪಿಸಿ ಯಂತೆ ಪ್ರಕರಣ ದಾಖಲಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಈ ನಿಷ್ಠಾವಂತ ಕಾರ್ಯಕರ್ತರು ಕಾರವಾರ- ಅಂಕೋಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಪರ ಹಗಲಿರುಳು ಶ್ರಮಿಸಿದ್ದರು. ಪ್ರಧಾನಿ ಮೋದಿ ಆಗಮನದ ಸಿದ್ಧತೆಯಲ್ಲಿ ಕ್ರೀಯಾಶೀಲವಾಗಿ ತೊಡಗಿಸಿಕೊಂಡಿದ್ದರು. ಆದರೆ ಜನತಾ ನ್ಯಾಯಾಲಯದ ತೀರ್ಪು ಮಾತ್ರ ರೂಪಾಲಿ ನಾಯ್ಕ ವಿರುದ್ಧವಾಗಿ ಬಂದಿತ್ತು. ಈಗ ಅದೆನಿದ್ದರೂ ಎರಡು ತಿಂಗಳ ಹಿಂದಿನ ವಿದ್ಯಮಾನ. ಆದರೆ ಈಗ ಈ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿರುವದು ಸಮಕಾಲೀನ ವಿದ್ಯಮಾನ.

ನಾವು ಬಿಜೆಪಿಯ ಸಂಘಟನೆಯನ್ನು ಬಲಪಡಿಸುತ್ತೇವೆ. ನಾವು ಯಾವ ಪ್ರಕರಣಗಳಿಗೂ ಬೆದರುವದಿಲ್ಲ ಇದರಿಂದ ಆರೋಪ ಮುಕ್ತ ಆಗ್ತೀವಿ ಎಂಬುದು ಈ ಕಾರ್ಯಕರ್ತರ ಆತ್ಮವಿಶ್ವಾಸದ ನಿಲುವಿನ ಮಾತಾಗಿದೆ.