ರಾಘವೇಂದ್ರ ಡಿ.ನಾಯಕ ದೇವರಬಾವಿಯವರಿಗೆ ರಾಜ್ಯ ಶ್ರೇಷ್ಠ ಸಹಕಾರಿ ಪ್ರಶಸ್ತಿ

ರಾಜ್ಯದಲ್ಲಿಯೆ ಉತ್ತಮ ಸಹಕಾರಿಯಾಗಿ ಗುರುತಿಸಿಕೊಂಡ ಗೋಧಾವರಿ ಕ್ರೆಡಿಟ್ ಸೌಹಾರ್ದ

@ರಾಘು ಕಾಕರಮಠ.

ಅಂಕೋಲಾ : ಸಹಕಾರಿ ರಂಗದಲ್ಲಿ ತನ್ನದೇ ಆದ ವಿಶೇಷ ಸಾಧನೆಯ ಮೂಲಕ, ರಾಜ್ಯದಲ್ಲಿಯೆ ವಿಶೇಷ ಎನ್ನುವಂತೆ ಪ್ರಗತಿಯ ಹೆಜ್ಜೆ ಮೂಡಿಸಿದ ಸಹಕಾರಿ ಎಂದರೆ ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿ.

ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಯಶಸ್ಸಿನ ಹಿಂದೆ, ಸೌಹಾರ್ದದ ಅಧ್ಯಕ್ಷ ರಾಘವೇಂದ್ರ ಡಿ.ನಾಯಕ ದೇವರಬಾವಿ ಅವರ ಕಠಿಣ ಪರಿಶ್ರಮ ಹಾಗೂ ಸಿಬ್ಬಂದಿಗಳ ಗೌರವಾಧರಗಳ ಸೇವೆಯು ಮುಕುಟಪ್ರಾಯವಾಗಿ ನಿಂತಿದೆ.

ಗೋಧಾವರಿಗೆ ಗ್ರಾಹಕರ ಆಶಿರ್ವಾದವಿದೆ. ಪ್ರೀತಿಯ ಬಳುವಳಿಯ ಸ್ನೇಹಬಂಧವಿದೆ. ಹೀಗಾಗಿಯೆ ಗೋಧಾವರಿ 12 ವಸಂತಗಳನ್ನು ಯಶಸ್ಸಿಯಾಗಿ ಪೂರೈಸಿ 13 ರ ಪ್ರಾಯದ ಹುರುಪಿನಲ್ಲಿ ಪ್ರಗತಿಯ ಹೆಜ್ಜೆ ದಾಖಲಿಸಿರುವದು ಉತ್ತರ ಕನ್ನಡ ಜಿಲ್ಲೆಯೆ ಹೆಮ್ಮೆ ಪಡುವಂತಾಗಿದೆ. ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಪ್ರಧಾನ ಕಚೇರಿ ಸೇರಿದಂತೆ ಪ್ರತಿಯೊಂದು ಶಾಖೆಗಳಲ್ಲಿ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಅತ್ಯುತ್ತಮ ಸೇವೆಯ ಗ್ರಾಹಕರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಹಾಗೆ ಅಂಕೋಲಾ ಶಾಖೆಯ ಪ್ರಗತಿಯ ಹಿಂದೆ ಅಂಕೋಲಾ ಶಾಖೆಯ ವ್ಯವಸ್ಥಾಪಕಿ ರೂಪಾಲಿ ನಾಯಕ ಅವರ ಮಾದರಿ ಸೇವೆಯು ಸಹಕಾರಿಯ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ.

ಗೋದಾವರಿಯ ಈ ಯಶಸ್ಸಿಗೆ ಸಾರಥ್ಯದ ಮೆರಗನ್ನು ಕಟ್ಟಿಕೊಟ್ಟ ರಾಘವೇಂದ್ರ ಡಿ.ನಾಯಕ ದೇವರಬಾವಿಯವರಿಗೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನೀಡುವ ಶ್ರೇಷ್ಠ ಸಹಕಾರಿ ಪ್ರಶಸ್ತಿ ದೊರೆತಿದೆ.ಈ ಪ್ರಶಸ್ತಿಯನ್ನು ರಾಘವೇಂದ್ರ ನಾಯಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸ್ವೀಕರಿಸಿದರು.

ಈ ಪ್ರಶಸ್ತಿಯನ್ನು ರಾಜ್ಯ ಸೌಹಾರ್ದ ಸಹಕಾರಿಗಳ ಪರವಾಗಿ, ಸಂಯುಕ್ತ ಸಹಕಾರಿಯ ಆಡಳಿತ ಮಂಡಳಿಯು ಆಯ್ಕೆ ಮಾಡಿ ನೀಡಿದೆ. ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿ ಜಿಲ್ಲೆಯಲ್ಲಿ ಪ್ರಧಾನ ಕಛೇರಿ ಮತ್ತು 7 ಶಾಖೆಗಳನ್ನು ಹೊಂದಿದೆ. ಪ್ರತಿ ಶಾಖೆಯಲ್ಲಿಯು ಸುಸಜ್ಜಿತ ಸೌಕರ್ಯ, ಗ್ರಾಹಕರೊಡನೆ ಅತ್ಯಂತ ಗೌರವದಿಂದ ನಡೆದುಕೊಳ್ಳುವ ರೀತಿ, ಕೈಗೊಂಡ ಹಲವಾರು ಸಮಾಜಮುಖಿ ಕಾರ್ಯಗಳು ಈ ಪ್ರಶಸ್ತಿ ದೊರೆಯಲು ಕಾರಣವಾಗಿದೆ.

ರಾಘವೇಂದ್ರ ಡಿ.ನಾಯಕ ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿಯನ್ನು ಕಳೆದ 13 ವರ್ಷಗಳ ಹಿಂದೆ ಆರಂಭಿಸಿದರು. ನಂತರ ಒಂದೊಂದೆ ಶಾಖೆಯನ್ನು ವಿಸ್ತರಿಸುತ್ತಾ ಬಂದು ಈಗ ಗೋಕರ್ಣದಲ್ಲಿ ಪ್ರಧಾನ ಕಛೇರಿ. ಒಂದು ಶಾಖೆ, ಅಂಕೋಲಾ, ಮಾದನಗೇರಿ, ಕುಮಟಾ, ಮಿರ್ಜಾನ, ಕಾರವಾರಗಳಲ್ಲಿ ತನ್ನ ಶಾಖೆಯನ್ನು ಹೊಂದಿದೆ. 100 ಕ್ಕಿಂತ ಅಧಿಕ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಒಂದೊಂದು ಶಾಖೆಯಲ್ಲಿಯು ಸಾವಿರಾರು ಗ್ರಾಹಕರು ವ್ಯವಹರಿಸುತ್ತಿದ್ದಾರೆ.

ರಾಘವೇಂದ್ರ ನಾಯಕ ಅತ್ಯಂತ ಕ್ರಿಯಾಶೀಲರಿದ್ದು, ಪ್ರತಿಯೊಂದು ಕಾರ್ಯಕ್ರಮಗಳಿಗೂ ತಮ್ಮ ಕೊಡುಗೆ ನೀಡಿ ಮಾದರಿಯಾಗಿದ್ದಾರೆ. ಕ್ರೀಡೆ, ಶಿಕ್ಷಣ, ಸಾಹಿತ್ಯ, ಧಾರ್ಮಿಕ ಸಮಾಜ ಸೇವೆಯಲ್ಲಿ ಇವರದ್ದು ಎತ್ತಿದ ಕೈ. ಅಂಕೋಲಾದಲ್ಲಿ ನಡೆದ ಸೇವಾದಳದ ಕಾರ್ಯಕ್ರಮಕ್ಕೆ 1000 ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಿದ ಹೃದಯ ವೈಶಾಲ್ಯತೆಯುಳ್ಳ ವ್ಯಕ್ತಿ ಇವರು.

ಹಲವಾರು ಕ್ರೀಡೆಗಳಿಗೆ ಆರ್ಥಿಕ ನೆರವನ್ನು ನೀಡಿ, ಯುವಕರು ಸದೃಢರಾಗಬೇಕೆನ್ನುವ ಕಲ್ಪನೆ ಹೊಂದಿದ್ದವರು ರಾಘವೇಂದ್ರ ನಾಯಕ.

ಕೋವಿಡ್ ಸಂದರ್ಭದಲ್ಲಿ ತೊಂದರೆ ಇರುವ ಹಲವರಿಗೆ ತೆರೆಮರೆಯಲ್ಲಿಯೇ ಸಹಕರಿಸಿದ ಇವರು ಸಮಾಜಮುಖಿ ಚಿಂತನೆಗಳ ಮೂಲಕ ತಮ್ಮ ಸೌಹಾರ್ದ ಸಹಕಾರಿಯಲ್ಲಿಯೂ ವಿವಿಧ ಕಾರ್ಯಕ್ರಮಗಳನ್ನು ಬೆಸೆದಿದ್ದಾರೆ.

ರಾಷ್ಟ್ರೀಯ  ಹಬ್ಬಗಳಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಹುಬ್ಬಳ್ಳಿಯಲ್ಲಿ ಗೋದಾವರಿ ಇನ್ಪಾç ಉದ್ಯಮದ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡು ತನ್ನ ತಾಯಿ ಗೋದಾವರಿ ಹೆಸರಿನಲ್ಲಿ ಸಭಾಭವನವನ್ನು ನಿರ್ಮಿಸಿ ಬಡವರಿಗೆ ಸಹಕರಿಸುವ ಹೃದಯ ವೈಶಾಲ್ಯತೆ ಇವರಲ್ಲಿದೆ.

ಗೋಕರ್ಣದಲ್ಲಿ ತನ್ನ ತಾಯಿಯ ಆಶಯದಂತೆ ಅತ್ಯಂತ ಸುಸಜ್ಜಿತವಾದ ದಿ. ಗೋದಾವರಿ ತ್ರಿಸ್ಟಾರ್ ಹೊಟೇಲ್‌ನ್ನು ಆರಂಭಿಸಿ ಪ್ರವಾಸಿಗರಿಗೆ ಅತ್ಯಂತ ವ್ಯವಸ್ಥಿತವಾದ ಹೊಟೇಲ್ ಉದ್ಯಮವನ್ನು ಆರಂಭಿಸಿ ಕೊಟ್ಟು ಜನಮನ್ನಣೆಯನ್ನು ಗಳಿಸುತ್ತಿದ್ದಾರೆ.

ಇವರಿಗೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಈ ಎಲ್ಲ ವಿಚಾರಗಳನ್ನು ತಿಳಿದು 2023 ರ ಶ್ರೇಷ್ಠ ಸಹಕಾರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಂಯುಕ್ತ ಸಹಕಾರಿಯ ರಾಜ್ಯಾಧ್ಯಕ್ಷ ಜಿ. ನಂಜನಗೌಡ, ಉಪಾಧ್ಯಕ್ಷ ಎ.ಆರ್.ಪ್ರಸನ್ನಕುಮಾರ, ಉತ್ತರ ಕನ್ನಡ ಜಿಲ್ಲೆಯ ನಿರ್ದೇಶಕ ಮೋಹನದಾಸ ಜೆ. ನಾಯಕ ಮತ್ತು 21 ನಿರ್ದೇಶಕರುಗಳು, 4000 ಕ್ಕಿಂತಲೂ ಹೆಚ್ಚಿನ ಸೌಹಾರ್ದ ಸಹಕಾರಿಗಳ ಪ್ರತಿನಿಧಿಗಳು ರಾಘವೇಂದ್ರ ನಾಯಕರವರ ಪತ್ನಿ ನೂತನ ನಾಯಕ, ಸಹೋದರ ಅಭಿಜಿತ ನಾಯಕ, ರವಿ ನಾಯಕ ಅಂಕೋಲಾ ಸೇರಿದಂತೆ ಇತರರಿದ್ದರು.