ದಿನಕರ ನಾಯ್ಕ ಅಲಗೇರಿ

ಅಂಕೋಲಾ: ವಾ.ಕ.ರ.ಸಾ.ಸಂ. ಕಲಘಟಗಿ ಘಟಕದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವನನ್ನು ಅದೇ ಬಸ್ಸಿನ ನಿರ್ವಾಹಕ ಅಂಕೋಲಾದ ಚಿತ್ರಮಂದಿರದ ಹತ್ತಿರದ ಬಸ್ ನಿಲುಗಡೆಗೆ ತಲುಪಿದಾಗ ಪ್ರಯಾಣಿಕನನ್ನು ಅಮಾನವೀಯವಾಗಿ ಬಸ್ಸಿನಿಂದ ಹೊರದಬ್ಬಿದ ಘಟನೆ ನಡೆದಿದೆ.

ಅಗಸುರಿನಿಂದ ಅಂಕೋಲಾ ಕಡೆಗೆ ತೆರಳಿದ ಸುಬ್ರಮಣ್ಯ ಗೌಡ ಎಂಬಾತ ಅಂಕೋಲಾ ಮಾರ್ಕೆಟ್ ನ ಸಮರ್ಥ ಚಿತ್ರಮಂದಿರದ ಹತ್ತಿರದ ಬಸ್ ನಿಲುಗಡೆಗೆ ತಲುಪಿದಾಗ ಬಸ್ ನಿರ್ವಾಹಕ ಅದಾವುದೋ ಕಾರಣಕ್ಕೆ ಪ್ರಯಾಣಿಕನ ಜೊತೆ ಕ್ಯಾತೆ ತೆಗೆದು ಕೊನೆಗೆ ಆ ಅಶಕ್ತ ಪ್ರಯಾಣಿಕನನ್ನು ಬಸ್ಸಿನಿಂದಲೆ ಹೊರದಬ್ಬಿದ್ದಾನೆ.

ಬಸ್ ನಿಂದ ರಭಸವಾಗಿ ದೂಡಿದ್ದರಿಂದಾಗಿ ನೆಲಕ್ಕೆ ಬಿದ್ದ ಪ್ರಯಾಣಿಕ ಕೂಡಲೇ ಮೂರ್ಛೆ ಹೋಗಿದ್ದಾನೆ. ಘಟನೆ ತಿಳಿದ ಜನಶಕ್ತಿ ವೇದಿಕೆಯ ಕಾರ್ಯಕರ್ತ ನಿತ್ಯಾನಂದ ನಾಯ್ಕ, ಆದರ್ಶ ನಾಯ್ಕ ಕೂಡಲೇ ಆತನ ರಕ್ಷಣೆಗೆ ಧಾವಿಸಿದ್ದು ಆಂಬುಲೆನ್ಸ್ ಗೆ ಕರೆ ಮಾಡಿ ಆತನನ್ನು ಅಂಕೋಲಾದ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವೈದ್ಯರು ತ್ವರಿತವಾಗಿ ಸೂಕ್ತ ಚಿಕಿತ್ಸೆ ಒದಗಿಸಿದ್ದರಿಂದ ಪ್ರಯಾಣಿಕನನ್ನು ಅಪಾಯದಿಂದ ಪಾರು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಜನಶಕ್ತಿ ವೇದಿಕೆಯ ಕಾರ್ಯಕರ್ತರು ಜಿಲ್ಲೆಯಾದ್ಯಂತ ಕ್ರಿಯಾಶೀಲವಾಗಿದ್ದು ನಿತ್ಯಾನಂದ ನಾಯ್ಕ ರವರ ಈ ಸಾಮಾಜಿಕ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಬಸ್ ನಿರ್ವಾಹಕನ ಈ ಮಟ್ಟದ ದರ್ಪ ನಿಜಕ್ಕೂ ಖಂಡನೀಯ. ಇಂತಹ ಅಸಹಾಯಕ ಸಂದರ್ಭಗಳಲ್ಲಿ ನಮ್ಮ ಸಂಘಟನೆಯ ಕಾರ್ಯಕರ್ತರು ಪಕ್ಷಾತೀತವಾಗಿ ಸದಾ ನೊಂದವರ ಸಹಾಯಕ್ಕೆ ಸಿದ್ಧರಾಗಿರುತ್ತಾರೆ. ಈ ವಿಷಯದಲ್ಲಿ ಸಂಬಂಧಿಸಿದ ಇಲಾಖೆ ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಹಾಗೂ ನೊಂದವರಿಗೆ ನ್ಯಾಯ ಒದಗಿಸಿಕೊಡಬೇಕು. -ಮಾಧವ ನಾಯಕಜನಶಕ್ತಿ ವೇದಿಕೆಯ ಅಧ್ಯಕ್ಷ

ಯೋಜನೆ ಜಾರಿಗೆ ಬಂದ ನಂತರ ಬಸ್ಸಿನಲ್ಲಿ ಮಹಿಳೆಯರೇ ಹೆಚ್ಚಾಗಿ ಕಂಡು ಬರುತ್ತಿದ್ದು ಪುರುಷರು ಬಸ್ ಏರಿದಾಗ ಮಾತ್ರ ಮುಗುಳು ನಗೆಯ ಮೂಲಕ ಕಂಡಕ್ಟರ್ ಗಳ ಕೈಯಲ್ಲಿ ಹಣದ ಚಲಾವಣೆ ನಡೆಯುತ್ತಿದೆ. ಹೆಚ್ಚಿನ ನಗದು ಸಹಿತ ಟಿಕೆಟ್ ಗೆ ಚಾಲಕ ಮತ್ತು ನಿರ್ವಾಹಕರಿಗೆ ಹೆಚ್ಚುವರಿ ಶೇಕಡಾ ಭತ್ಯೆ ಸಹ ಲಭಿಸುತ್ತದೆ. ಹೀಗಿರುವಾಗ ಮಹಿಳಾ ಪ್ರಯಾಣಿಕರ ಜೊತೆಗೆ ಹಣ ನೀಡಿ ಪ್ರಯಾಣಿಸುವ ಪುರುಷ ಪ್ರಯಾಣಿಕರ ಕಡೆಗೂ ಸಹ ಕಾಳಜಿ ವಹಿಸಬೇಕಾಗಿದೆ. ಪುರುಷ ಪ್ರಯಾಣಿಕರು ಇಲ್ಲದೆ ಹೋದರೆ ಮುಂದೊಂದು ದಿನ ಬಸ್ ನಲ್ಲಿ ನಿರ್ವಾಹಕನ ಉದ್ಯೋಗದ ಅವಶ್ಯಕತೆಯೇ ಇಲ್ಲದೆ ಹೋದರು ಆಶ್ಚರ್ಯ ಪಡಬೇಕಾಗಿಲ್ಲ.