ಅಂಕೋಲಾ : ಗಾಂಧೀಜಿ ಎಂದರೆ ಅವನೊಬ್ಬ ಮನುಷ್ಯನಲ್ಲ. ಆತ ಪ್ರಕೃತಿ. ಪಕೃತಿಯನ್ನು ಹೇಗೆ ನಾವು ಪುನರ್ ನಿರ್ಮಾಣ ಮಾಡಲು ಸಾಧ್ಯವಿಲ್ಲವೊ ಹಾಗೆ ಗಾಂಧೀಜಿಯ0ಥ ಎಂಬ ಅಪರೂಪದ ಮನುಷ್ಯನನ್ನ ಮತ್ತೆ ಕಾಣಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅವರ ಆದರ್ಶ ತತ್ವಗಳನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮುಂದಿನ ವ್ಯವಸ್ಥೆಗೆ, ಜೀವನಕ್ಕೆ, ಭಾರತಕ್ಕೆ ಪರ್ಯಾಯ ವ್ಯವಸ್ಥೆಯಾಗಬೇಕಿದೆ ಎಂದು ಎಂದು ಕರಾವಳಿ ಮುಂಜಾವು ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಗಂಗಾಧರ ಹಿರೇಗುತ್ತಿ ಹೇಳಿದರು.

ಅವರು ಕೆ.ಎಲ್.ಇ ಸಭಾಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉತ್ತರ ಕನ್ನಡ, ತಾಲೂಕು ಕಸಾಪ ಘಟಕ ಅಂಕೋಲಾ ಹಾಗೂ ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಗಾಂಧಿ ಅನುಸಂಧಾನ ಹಾಗೂ ಜಿಲ್ಲಾ ಮಟ್ಟದ ಅಂತರ ಕಾಲೇಜು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿ, ಗಾಂಧೀಜಿಯನ್ನ ತೇಜೊವಧೆ ಮಾಡಿದರೆ, ಟೀಕೆ ಮಾಡಿದರೆ, ಆತನ ವ್ಯಕ್ತಿತ್ವವನ್ನ ಪತನ ಮಾಡಿದರೆ ತಮ್ಮ ಪಕ್ಷ ಬೆಳೆಯುತ್ತದೆ, ತಮ್ಮ ಸಂಘಟನೆ ಬೆಳೆಯುತ್ತದೆ ಎನ್ನುವ ದುರಾಸೆ ಎನ್ನುವದು ಮನುಷ್ಯನ ಧರ್ಮವನ್ನ ನಾಶಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಕಸಾಪದ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಅಧ್ಯಕ್ಷತೆವಹಿಸಿ ಮಾತನಾಡಿ, iಹಾತ್ಮ ಗಾಂಧೀಜಿಯನ್ನ ಕೊಂದ ಘೋಡ್ಸೆ ಎಂಬ ಕಟುಕನ ದೇವಸ್ಥಾನ ಕೆಲವಡೆ ಕಟ್ಟಿ ಪೂಜಿಸುತ್ತಿರುವದು ಖೇಧದ ಸಂಗತಿ. ಇಂಥ ವಿದ್ಯಮಾನಗಳು ಭಾರತದ ವೈಚಾರಿಕ ಪ್ರಜ್ಞೆಗೆ ಕಂಟಕಪ್ರಾಯವಾಗಿದೆ ಎಂದರು.

ಕೆ.ಎಲ್.. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ವಿನಾಯಕ ಹೆಗಡೆ ಉಪನ್ಯಾಸ ನೀಡಿ ಜಗತ್ತಿನ ಮೇರು ವ್ಯಕ್ತಿತ್ವ ಎಂದರೆ ಅದು ಗಾಂಧೀಜಿ. ಅವರ ಪ್ರಭಾವ, ಅಸ್ತಿತ್ವ ಸೂರ್ಯ ಚಂದ್ರ ಇರುವಷ್ಟೇ ಆಯುಷ್ಯಕ್ಕೆ ಸವiನಾದದು ಎಂದರು.

ವಿಶ್ರಾಂತ ಪ್ರಾಚಾರ್ಯ ಡಾ.ಮಹೇಶ ಗೋಳಿಕಟ್ಟೆ ಬಹುಮಾನ ವಿತರಕರಾಗಿ ಪಾಲ್ಗೊಂಡು ಮಾತನಾಡಿದರು. ನಿವೃತ್ತ ಮುಖ್ಯಾಧ್ಯಾಪಕಿ ಸುಶೀಲಾ ಎಸ್. ಆಗೇರ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಕಸಾಪದ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪದ ಕಾರ್ಯದರ್ಶಿ ಜಗಧೀಶ ನಾಯಕ ಹೊಸ್ಕೇರಿ ಸ್ವಾಗತಿಸಿದರು. ರಕ್ಷಿತಾ ಸಂಗಡಿಗರು ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿ ಮಾನಸಾ ನಾಯ್ಕ ವಂದಿಸಿದರು. ಉಪನ್ಯಾಸಕಿ ಡಾ. ಪುಷ್ಪಾ ನಾಯ್ಕ ವಂದಿಸಿದರು.

ನಿವೃತ್ತ ಪ್ರಾಚಾರ್ಯರಾದ ಆರ್.ಜಿ.ಗುಂದಿ, ಎಮ್.ಎಸ್. ಹಬ್ಬು, ನಿವೃತ್ತ ಗಂಥಪಾಲಕ ಮಹಾಂತೇಶ ರೇವಡಿ, ವಿಠ್ಠಲ ಗಾಂವಕರ, ಜೆ.ಪ್ರೇಮಾನಂದ, ಪಾಲ್ಗುಣ ಗೌಡ, ಡಾ. ಎಸ್.ವಿ.ವಸ್ತ್ರದ, ರಫೀಖ ಶೇಖ, ಎಮ್.ಬಿ.ಆಗೇರ,, ನಾಗೇಂದ್ರ ನಾಯಕ ತೊರ್ಕೆ, ರವೀಂದ್ರ ಶೆಟ್ಟಿ, ಸುಜೀತ್ ನಾಯ್ಕ, ಹಾರವಾಡ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಮಹಾತ್ಮ ಗಾಂಧೀಜಿ ಅವರ ಶೈಕ್ಷಣಿಕ ಚಿಂತನೆ ಹಾಗೂ ಪ್ರಸ್ತುತ ಶೈಕ್ಷಣಿಕ ಸ್ಥಿತಿಗತಿ ಕರಿತು ನಡೆದ ಜಿಲ್ಲಾ ಮಟ್ಟದ ಅಂತರ ಕಾಲೇಜು ಪ್ರಬಂಧ ಸ್ಪರ್ಧೆಯಲ್ಲಿ ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದ ಚೈತ್ರಾ ಗಜಾನನ ಆಚಾರಿ ಪ್ರಥಮ, ಕುಮಟಾದ ಕಮಲಾ ಬಾಳಿಗಾ ಕಾಲೇಜಿನ ವಿದ್ಯಾರ್ಥಿನಿ ತೇಜಾ ನಾಯ್ಕ ದ್ವೀತಿಯ ಹಾಗೂ ಅಂಕೋಲಾದ ಜಿ.ಸಿ. ಕಾಲೇಜಿನ ಸೃಷ್ಠಿ ನಾಯಕ ತೃತೀಯ ಸ್ಥಾನವನ್ನು ಮತ್ತು ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದ ಪ್ರತೀಕ ನಾಯಕ ಸಮಾಧಾನಕರ ಬಹುಮಾನ ಪಡೆದುಕೊಂಡರು.